ನವದೆಹಲಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು, ಮಳೆ ಹಾಗೂ ನೆರೆ ಪರಿಸ್ಥಿತಿಯಿಂದ ಜನರಿಗೆ ರಕ್ಷಣೆ ನೀಡಲು ರಾಜ್ಯ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ಕರಾವಳಿ ಜನರ ಕಣ್ಣಲ್ಲಿ ಕಣ್ಣೀರ ಬದಲಿಗೆ ರಕ್ತಕಣ್ಣೀರು ಸುರಿಸಲು ಸರ್ಕಾರ ಹಪಾಹಪಿಸುತ್ತಿದೆ’ ಎಂದಿದ್ದಾರೆ.
‘ಕೋಟೆ ಕೊಳ್ಳೆ ಹೋದ ಮೇಲೆ ದಿಡ್ಡಿ ಬಾಗಿಲು ಬಡಿದುಕೊಂಡರು’ ಎನ್ನುವಂತೆ ಮಳೆಯಲ್ಲಿ ಬದುಕು ಕೊಚ್ಚಿಹೋದ ಮೇಲೆ ಸಚಿವರಿಗೆ ಹೋಗಿ ಎಂದು ಮುಖ್ಯಮಂತ್ರಿ ಅಪ್ಪಣೆ ಕೊಟ್ಟರೆ ಫಲವೇನು? ಮಳೆ ಬರುವ ಮೊದಲು ಏನು ಮಾಡಿದ್ದೀರಿ? ಇದೇನಾ ಜನಪರ ಆಡಳಿತ? ನುಡಿದಂತೆ ನಡೆಯುವುದು ಎಂದರೆ ಹೀಗೇನಾ’ ಎಂದು ಅವರು ಪ್ರಶ್ನಿಸಿದ್ದಾರೆ.
‘ಕಾಂಗ್ರೆಸ್ ಸರ್ಕಾರಕ್ಕೆ ಕರಾವಳಿ ಮಳೆ ಬಗ್ಗೆ ಚಿಂತೆ ಇಲ್ಲ. ಆದರೆ, ಕರಾವಳಿ ಕೊಲೆಗಳ ಬಗ್ಗೆ ಎಲ್ಲಿಲ್ಲದ ಕಾಳಜಿ. ಆ ಕಾಳಜಿ ಕೊಲೆಗಳನ್ನು ಹತ್ತಿಕ್ಕಲಿಕ್ಕಲ್ಲ, ಕೊಲೆಗಳಲ್ಲೂ ‘ರಾಜಕೀಯ ಕೂಳು’ ಬೇಯಿಸಿಕೊಳ್ಳಲು ರಾಜ್ಯ ಕಾಂಗ್ರೆಸ್ ಸರ್ಕಾರ ಹವಣಿಸುತ್ತಿದೆ’ ಎಂದು ಅವರು ಆರೋಪ ಮಾಡಿದ್ದಾರೆ.
ಸರ್ವ ಜನಾಂಗದ ಶಾಂತಿಯ ತೋಟವನ್ನು ವಿಷ ಸರ್ಪಗಳ ತೋಟವನ್ನಾಗಿ ಪರಿವರ್ತಿಸಿದ್ದೀರಿ ಎಂದು ಆರೋಪ ಮಾಡಿರುವ ಅವರು, ‘ಸಿದ್ದರಾಮಯ್ಯನವರೇ, ನೀವು ಮತ್ತು ನಿಮ್ಮ ಸಂಗಡಿಗರ ಸದಾರಮೆ ನಾಟಕ ಸಾಕು. ಕೂಡಲೇ ಕರಾವಳಿಗೆ ಭೇಟಿ ನೀಡಿ. ಮಳೆ, ಕೊಲೆಗಳಿಂದ ತತ್ತರಿಸಿರುವ ಅಲ್ಲಿನ ಜನರಿಗೆ ಧೈರ್ಯ ತುಂಬಿ. ಪ್ರಕೃತಿ ಪ್ರೇರಿತ ಮಳೆ ವಿಕೋಪ, ನಿಮ್ಮ ಪಕ್ಷ ಪ್ರೇರಿತ ‘ಕೊಲೆ ವಿಕೋಪ’ಕ್ಕೆ ಪರಿಹಾರ ಕಂಡುಕೊಳ್ಳಿ’ ಎಂದು ಸಲಹೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.