ADVERTISEMENT

‘ಮೈತ್ರಿ’ ಆಂತರಿಕ ಬೇಗುದಿ ಸ್ಫೋಟ

ಪ್ರಜ್ವಲ್‌ ರೇವಣ್ಣಗೆ ಬೆಂಬಲ ಇಲ್ಲ: ಕಾಂಗ್ರೆಸ್‌ ಕಾರ್ಯಕರ್ತರ ಬಹಿರಂಗ ಹೇಳಿಕೆ

ಕೆ.ಎಸ್.ಸುನಿಲ್
Published 30 ಮಾರ್ಚ್ 2019, 19:30 IST
Last Updated 30 ಮಾರ್ಚ್ 2019, 19:30 IST
ಬೇಲೂರಿನಲ್ಲಿ ಶನಿವಾರ ನಡೆದ ಸಭೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಕುರ್ಚಿಗಳನ್ನು ಬಿಸಾಡಿ ಗಲಾಟೆ ಮಾಡಿದರು
ಬೇಲೂರಿನಲ್ಲಿ ಶನಿವಾರ ನಡೆದ ಸಭೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಕುರ್ಚಿಗಳನ್ನು ಬಿಸಾಡಿ ಗಲಾಟೆ ಮಾಡಿದರು   

ಹಾಸನ: ಮೈತ್ರಿ ಪಕ್ಷಗಳ ನಡುವಿನ ಮುನಿಸು ಶಮನಕ್ಕೆ ಉಭಯ ಪಕ್ಷಗಳ ನಾಯಕರು ಕಸರತ್ತು ನಡೆಸುತ್ತಿದ್ದರೆ, ಮತ್ತೊಂದೆಡೆ ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ಕಾರ್ಯಕರ್ತರು ಬಂಡಾಯದ ಬಾವುಟ ಹಾರಿಸುತ್ತಲೇ ಇದ್ದಾರೆ.

ಜಿಲ್ಲೆಯಲ್ಲಿ ದಶಕಗಳಿಂದಲೂ ಕಾಂಗ್ರೆಸ್, ಜೆಡಿಎಸ್‌ ನಡುವೆ ಸೆಣಸಾಟ ನಡೆದುಕೊಂಡೇ ಬಂದಿದೆ. ರಾಜ್ಯದಲ್ಲಿ ಜೆಡಿಎಸ್‌– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ರಚನೆಯಾಗಿ ಮೈತ್ರಿ ಏರ್ಪಟ್ಟಿದ್ದರೂ, ಜಿಲ್ಲೆಯಲ್ಲಿ ಮಾತ್ರ ಎರಡೂ ಪಕ್ಷಗಳ ಮುಖಂಡರು, ಕಾರ್ಯಕರ್ತರು ಪರಸ್ಪರ ಎದುರಾಳಿಗಳಂತೆಯೇ ನಡೆದುಕೊಳ್ಳುತ್ತಿದ್ದಾರೆ.

ಲೋಕಸಭೆಗೆ ಮೈತ್ರಿ ಕೂಟದ ಅಭ್ಯರ್ಥಿ ಘೋಷಣೆಯಾಗುತ್ತಿದ್ದಂತೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಅವರು ಕಾಂಗ್ರೆಸ್‌ ನಾಯಕರ ಮನೆಗಳಿಗೆ ಭೇಟಿ ನೀಡಿ, ಪುತ್ರ ಪ್ರಜ್ವಲ್‌ ಬೆಂಬಲಿಸುವಂತೆ ಮನವಿ ಮಾಡುತ್ತಿದ್ದಾರೆ.

ADVERTISEMENT

ಹೈಕಮಾಂಡ್‌ ಆದೇಶದಂತೆ ಪಕ್ಷದ ಮುಖಂಡರು ಪ್ರಜ್ವಲ್‌ ಪರ ಪ್ರಚಾರಕ್ಕೆ ಮುಂದಾಗಿದ್ದರೆ, ಕಾಂಗ್ರೆಸ್‌ ಕಾರ್ಯಕರ್ತರು ‘ಇದು ಅಪವಿತ್ರ ಮೈತ್ರಿ’ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿದ್ದಾರೆ.

ಅರಸೀಕೆರೆಯಲ್ಲಿ ನಡೆದ ಕೈ–ಜೆಡಿಎಸ್ ಜಂಟಿ ಸಭೆಯಲ್ಲಿ ಸಚಿವ ರೇವಣ್ಣ ಎದುರೇ, ‘ಜೆಡಿಎಸ್‌ಗೆ ವೋಟ್‌ ಹಾಕಲ್ಲ, ಬಿಜೆಪಿಗೆ ಜೈ’ ಎಂದು ಕಾಂಗ್ರೆಸ್‌ ಕಾರ್ಯಕರ್ತರು ಅಸಮಾಧಾನ ಹೊರ ಹಾಕಿದ್ದರು.

ಬೇಲೂರಿನಲ್ಲಿ ಶನಿವಾರ ನಡೆದ ಬ್ಲಾಕ್ ಮತ್ತು ಯೂತ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲೂ ಮತ್ತೆ ಆಕ್ರೋಶ ಭುಗಿಲೆದ್ದಿದೆ. ಜೆಡಿಎಸ್ ವಿರುದ್ಧ ಆಕ್ರೊಶ ವ್ಯಕ್ತಪಡಿಸಿದರು. ಕುರ್ಚಿ ಎಸೆದು, ಪುಡಿ ಪುಡಿ ಮಾಡಿ ಧಿಕ್ಕಾರ ಕೂಗಿದ್ದಾರೆ.

ತಳಮಟ್ಟದಲ್ಲಿ ಒಳಬೇಗುದಿ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಈ ಘಟನೆಗಳೇ ಸಾಕ್ಷಿ.‘ಒಳ ಏಟು’ಗಳು ಪಕ್ಷದ ಅಭ್ಯರ್ಥಿಯ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಮುಂಚೂಣಿ ನಾಯಕರು, ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದರೆ, ಸ್ಥಳೀಯ ಮಟ್ಟದಲ್ಲಿ ಆಂತರಿಕ ಬೇಗುದಿ ಸ್ಫೋಟಿಸುತ್ತಲೇ ಇರುವುದು ದಳಪತಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

‘ಕಳೆದ 35 ವರ್ಷಗಳಿಂದ ಜೆಡಿಎಸ್‌ ವಿರುದ್ಧ ನಾವು ಪಡೆಯನ್ನೇ ಕಟ್ಟಿಕೊಂಡು ಬಂದಿದ್ದೇವೆ. ಹೀಗಾಗಿ ಎಲ್ಲ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಗೊಂದಲ ಇರುವುದು ಸಹಜ. ಹೈಕಮಾಂಡ್‌ ಆದೇಶದಂತೆ ಪ್ರಜ್ವಲ್‌ ಬೆಂಬಲಿಸಲಾಗುವುದು. ಚುನಾವಣೆ ನಂತರವೂ ರೇವಣ್ಣ ಇದೇ ರೀತಿಯ ಪ್ರೀತಿ, ವಿಶ್ವಾಸ ಉಳಿಸಿಕೊಳ್ಳಬೇಕು’ ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಂ ತಾಕೀತು ಮಾಡಿದರು.

‘ಕೋಮುವಾದಿ ಶಕ್ತಿಯನ್ನು ದೂರ ಇಡುವ ಉದ್ದೇಶದಿಂದ ಕಾಂಗ್ರೆಸ್‌, ಜೆಡಿಎಸ್‌ ರಾಜ್ಯದಲ್ಲಿ ಒಂದಾಗಿದ್ದೇವೆ. ಭಿನ್ನಾಭಿಪ್ರಾಯ ಮರೆತು ಕಾಂಗ್ರೆಸ್‌ ಮುಖಂಡರ ಮನೆಗಳಿಗೆ ಭೇಟಿ ನೀಡುತ್ತಿದ್ದೇನೆ. ಗೊಂದಲ ಇರುವುದು ಸಹಜ. ಅಭ್ಯರ್ಥಿ ಗೆಲುವಿಗೆ ಎಲ್ಲರೂ ಶ್ರಮಿಸಬೇಕು’ ಎಂದು ಸಚಿವ ಎಚ್‌.ಡಿ.ರೇವಣ್ಣ ಮನವಿ ಮಾಡಿದರು.

ಬೇಕಿದ್ದರೆ ಉಚ್ಚಾಟಿಸಿ ವೋಟು ಕೊಡಲ್ಲ

ಬೇಲೂರು: ‘ಪ್ರಜ್ವಲ್‌ ರೇವಣ್ಣ ಪರವಾಗಿ ಕೆಲಸ ಮಾಡಬೇಕು’ ಎಂದು ಮುಖಂಡರು ಹೇಳಿದ್ದಕ್ಕೆ ಕಾಂಗ್ರೆಸ್‌ ಕಾರ್ಯಕರು ಆಕ್ರೋಶ ವ್ಯಕ್ತಪಡಿಸಿದರು. ಗದ್ದಲ, ಗಲಾಟೆ ಮಾಡಿದಲ್ಲದೆ, ಕುರ್ಚಿಯನ್ನು ಪುಡಿ ಪುಡಿ ಮಾಡಿದರು.

ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಶನಿವಾರ ಮಾತನಾಡಿದ ಬಹುತೇಕ ಕಾರ್ಯಕರ್ತರು, ‘ನಾವು ನೋಟಾ ಚಲಾಯಿಸುತ್ತೇವೆಯೇ ಹೊರತು, ಜೆಡಿಎಸ್‌ ಅಭ್ಯರ್ಥಿ ಪ್ರಜ್ವಲ್‌ಗೆ ಮತ ಹಾಕುವುದಿಲ್ಲ’ ಎಂದು ನೇರವಾಗಿ ಹೇಳಿದರು.

ವೀಕ್ಷಕರಾದ ಗಾಯಿತ್ರಿ ಶಾಂತೇಗೌಡ, ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಂ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಎಂ.ವೈ.ಗೋಪಾಸ್ವಾಮಿ, ಜಿ.ಪಂ ಅಧ್ಯಕ್ಷೆ ಶ್ವೇತಾ ದೇವರಾಜ್‌, ಜಿಲ್ಲಾ ಘಟಕದ ಅಧ್ಯಕ್ಷ ಜಾವಗಲ್‌ ಮಂಜುನಾಥ್‌ ಅವರು ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಯತ್ನಿಸಿದರೂ ಗಲಾಟೆ ಜೋರಾಯಿತು.

‘ಜೆಡಿಎಸ್‌ನವರು ಕಳೆದ ಹತ್ತು ತಿಂಗಳ ಅವಧಿಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆಸಿದ್ದಾರೆ. ಈಗ ಮತ ಕೊಡಿ ಎಂದು ಮುಖಂಡರ ಮನೆಗೆ ಎಡತಾಕುತ್ತಿದ್ದಾರೆ. ಕೋಟ್ಯಂತರ ಮೌಲ್ಯದ ಗುತ್ತಿಗೆಯನ್ನು ಜೆಡಿಎಸ್‌ ಕಾರ್ಯಕರ್ತರಿಗೆ ಹಂಚಿಕೆ ಮಾಡುವಾಗ ಮತ್ತು ಸ್ಥಳೀಯ ನಿಗಮ, ಮಂಡಳಿಗಳಿಗೆ ನಾಮಕರಣ ಮಾಡುವಾಗ ಕಾಂಗ್ರೆಸ್‌ನವರ ನೆನಪಾಗಲಿಲ್ಲವೆ. ಜಿಲ್ಲೆಯ ಕಾಂಗ್ರೆಸ್‌ ಮುಖಂಡರು ಯಾವ ಮುಖ ಇಟ್ಟುಕೊಂಡು ಪ್ರಚಾರ ನಡೆಸುತ್ತಿದ್ದೀರಿ. ಕಾಂಗ್ರೆಸ್‌ ಸಿದ್ಧಾಂತಗಳನ್ನು ಜೆಡಿಎಸ್‌ಗೆ ಅಡ ಇಟ್ಟಿದ್ದೀರಾ, ಮೈತ್ರಿ ಮಾಡಿಕೊಳ್ಳುವಾಗ ಕಾರ್ಯಕರ್ತರ ನೆನಪಾಗಲಿಲ್ಲವೆ ಎಂದು ಪ್ರಶ್ನಿಸಿದರು.

‘ಪಕ್ಷದಿಂದ ಕಾರ್ಯಕರ್ತರನ್ನು ಉಚ್ಛಾಟಿಸುವುದಾದರೆ, ಉಚ್ಛಾಟಿಸಿ. ಯಾವುದೇ ಕಾರಣಕ್ಕೂ ಪ್ರಜ್ವಲ್‌ ರೇವಣ್ಣ ಪರ ಕೆಲಸ ಮಾಡುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.