ADVERTISEMENT

ನ್ಯಾಯಾಂಗದ ವಿಮರ್ಶೆ: ಸದಾನಂದಗೌಡ, ಸಿ.ಟಿ.ರವಿ ಹೇಳಿಕೆಗೆ ಪ್ರತಿಪಕ್ಷಗಳ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 14 ಮೇ 2021, 19:30 IST
Last Updated 14 ಮೇ 2021, 19:30 IST
ಡಿ.ವಿ. ಸದಾನಂದಗೌಡ ಮತ್ತು ಸಿ.ಟಿ.ರವಿ
ಡಿ.ವಿ. ಸದಾನಂದಗೌಡ ಮತ್ತು ಸಿ.ಟಿ.ರವಿ   

ಬೆಂಗಳೂರು: ಕೋವಿಡ್‌ ಲಸಿಕೆ ಮತ್ತು ಆಮ್ಲಜನಕ ಪೂರೈಕೆ ವಿಚಾರದಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಗುರುವಾರ ಹೈಕೋರ್ಟ್‌ ಹಾಗೂ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳ ವಿರುದ್ಧವೇ ಮಾತನಾಡಿರುವುದಕ್ಕೆ ಪ್ರತಿಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಆಕ್ಷೇಪ ವ್ಯಕ್ತಪಡಿಸಿವೆ.

‘ಲಸಿಕೆ ಉತ್ಪಾದನೆ ಆಗದಿದ್ದರೆ ನಾವು ನೇಣು ಹಾಕಿಕೊಳ್ಳೋಕೆ ಆಗುತ್ತಾ’ ಎಂದು ಸದಾನಂದ ಗೌಡ ಪ್ರಶ್ನಿಸಿದ್ದರು. ‘ನ್ಯಾಯಾಧೀಶರು ಸರ್ವಜ್ಞರಲ್ಲ’ ಎಂದು ಸಿ.ಟಿ. ರವಿ ಟೀಕಿಸಿದ್ದರು.

ಈ ಕುರಿತು ಶುಕ್ರವಾರ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು.

ADVERTISEMENT

ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಪ್ರಸ್ತಾಪಿಸಿದ ಶಿವಕುಮಾರ್‌, ‘ನಾವೇನು ನೇಣು ಹಾಕಿಕೊಳ್ಳಬೇಕಾ ಎಂದು ಸದಾನಂದಗೌಡರು ಕೇಳಿದ್ದಾರೆ. ನೀವು ಕಾನೂನು ಸಚಿವರಾಗಿದ್ದವರು, ಮುಖ್ಯಮಂತ್ರಿ ಆಗಿದ್ದವರು. ನೇಣು ಹಾಕಿಕೊಳ್ಳಿ ಎಂದು ನಾವು ಹೇಳುವುದಿಲ್ಲ. ಆದರೆ, ನಿಮಗೆ ಮತ ಹಾಕಿದವರು ನೀವು ಲಸಿಕೆ ಕೊಡಲಿಲ್ಲ ಎಂದು ನೇಣು ಹಾಕಿಕೊಳ್ಳಬೇಕಾ’ ಎಂದು ಪ್ರಶ್ನಿಸಿದರು.

‘ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಸಿ.ಟಿ. ರವಿ, ‘ನ್ಯಾಯಾಧೀಶರೇನು ಸರ್ವಜ್ಞರೇ’ ಎಂದು ಪ್ರಶ್ನಿಸಿದ್ದಾರೆ. ಇದು ನ್ಯಾಯಾಂಗ ನಿಂದನೆ. ನ್ಯಾಯಾಲಯದ ತೀರ್ಪುಗಳನ್ನೇ ಈ ನೆಲದ ಕಾನೂನು ಎಂದು ಪರಿಗಣಿಸಲಾಗುತ್ತಿದೆ. ರವಿ ಈ ರೀತಿ ಹೇಳಿಕೆ ನೀಡಿರುವುದು ಅಪರಾಧ’ ಎಂದರು.

ಅಸಮರ್ಥರ ಮಾತುಗಳು: ಸದಾನಂದ ಗೌಡ ಮತ್ತು ಸಿ.ಟಿ. ರವಿ ಹೇಳಿಕೆ ಕುರಿತು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ‘ಧರೆಗೆ ಸ್ವರ್ಗ ಇಳಿಸುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಬಿಜೆಪಿಯ ಅಸಮರ್ಥರ, ಕೈಲಾಗದ ಮಾತುಗಳಿವು’ ಎಂದು ಟೀಕಿಸಿದ್ದಾರೆ.

ಹಿಂದೆ ಆಡಳಿತ ನಡೆಸಿದವರನ್ನೇ ದೂಷಿಸಿಕೊಂಡು ಬಿಜೆಪಿ ಹೊಣೆಗೇಡಿತನ ಪ್ರದರ್ಶಿಸುತ್ತಿದೆ. ಅಸಾಮರ್ಥ್ಯ ಮುಚ್ಚಿಕೊಳ್ಳಲು ಬಿಜೆಪಿ ನಾಯಕರು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಜನರ ಆಶಯಕ್ಕೆ ತಕ್ಕಂತೆ ಬಿಜೆಪಿ ನಡೆದುಕೊಳ್ಳಬೇಕು. ಕೈಲಾಗದಿದ್ದರೆ ಅಧಿಕಾರ ಬಿಟ್ಟು ತೊಲಗಬೇಕು ಎಂದು ಆಗ್ರಹಿಸಿದ್ದಾರೆ.

ಮೊದಲು ಮನುಷ್ಯರಾಗಿ: ಸಿದ್ದರಾಮಯ್ಯ
ಜನರ ಸಂಕಟಕ್ಕೆ ಧ್ವನಿಯಾಗಲು ಸರ್ವಜ್ಞನಾಗಬೇಕಿಲ್ಲ; ಮಾನವೀಯತೆ ಇರುವ ಮನುಷ್ಯರಾಗಿದ್ದರೆ ಸಾಕು ಎಂದು ಪ್ರತಿಪಾದಿಸಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಅಧಿಕಾರದ ದುರಹಂಕಾರ ಬಿಟ್ಟು ಮೊದಲು ಮನುಷ್ಯರಾಗಿ ಎಂದು ಸಿ.ಟಿ.ರವಿಗೆ ಸಲಹೆ ನೀಡಿದ್ದಾರೆ.

‘ನ್ಯಾಯಾಧೀಶರ ನಿಂದನೆ ನ್ಯಾಯಾಲಯದ ನಿಂದನೆ ಕೂಡಾ ಆಗುತ್ತದೆ ಎಂದು ಗೊತ್ತಿಲ್ಲದ ನಿಮ್ಮಂತಹವರನ್ನು ಸರ್ವಜ್ಞ ಎನ್ನುವುದಿಲ್ಲ, ಮೂರ್ಖ ಎನ್ನುತ್ತಾರೆ’ ಎಂದು ಕುಟುಕಿದ್ದಾರೆ.

‘ಸಚಿವ ಸದಾನಂದಗೌಡರೇ, ನೇಣು ಹಾಕಿಕೊಳ್ಳುವುದು ಮಹಾಪಾಪ ಮಾತ್ರವಲ್ಲ ಕಾನೂನಿಗೆ ವಿರುದ್ಧವಾದುದು ಕೂಡಾ. ಅದನ್ನೆಲ್ಲ ಮಾಡಲು ಹೋಗಬೇಡಿ,ಆಡಳಿತ ನಡೆಸುವುದು ನಿಮಗಾಗದ ಕೆಲಸ, ಮರ್ಯಾದೆಯಿಂದ ರಾಜೀನಾಮೆ ಕೊಟ್ಟು ಹೊರಟುಬಿಡಿ,‌ ದೇಶಕ್ಕಾಗಿ ಅಷ್ಟು ಮಾಡಿ‌ ಪುಣ್ಯ ಕಟ್ಟಿಕೊಳ್ಳಿ’ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಸಚಿವ, ಶಾಸಕರ ಹೇಳಿಕೆ ನ್ಯಾಯಾಂಗ ನಿಂದನೆ: ಎಚ್‌.ವಿಶ್ವನಾಥ್‌
ಮೈಸೂರು:
‘ಕಾನೂನಿಗೆ ಎಲ್ಲರೂ ತಲೆಬಾಗಬೇಕು. ಆಡಳಿತದಲ್ಲಿರುವವರೇ ವ್ಯವಸ್ಥೆಯನ್ನು ಹಳಿಯುವುದು ಸರಿಯಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ಎಚ್‌.ವಿಶ್ವನಾಥ್‌ ಶುಕ್ರವಾರ ಇಲ್ಲಿ ಹೇಳಿದರು.

ನ್ಯಾಯಾಂಗದ ನಡೆ ಬಗ್ಗೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಇಬ್ಬರೂ ಮೀರಿದ ಮಾತುಗಳನ್ನಾಡಿದ್ದು, ನ್ಯಾಯಾಂಗ ನಿಂದನೆ ಎಸಗಿದ್ದಾರೆ’ ಎಂದು ಅವರು
ಹೇಳಿದರು.

‘ಸದಾನಂದಗೌಡ ಅವರು ‘ಲಸಿಕೆ ಸಿಗದಿದ್ದರೆ ನಾವು ನೇಣು ಹಾಕಿಕೊಳ್ಳಬೇಕಾ?’ ಎಂದಿರುವುದು ಕೇಂದ್ರ ಸರ್ಕಾರವೇ ನೇಣು ಹಾಕಿ
ಕೊಳ್ಳೋದು ಎಂಬರ್ಥದ ಹೇಳಿಕೆಯಾಗಿದೆ’ ಎಂದ ಅವರು, ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳನ್ನು ತಾವು ಸರ್ವಜ್ಞರು ಎಂದೇ ಭಾವಿಸಿದ್ದಾಗಿ ಹೇಳಿದರು.

‘ಚಾಮರಾಜನಗರದಲ್ಲಿನ ಆಮ್ಲಜನಕ ದುರಂತ ಪ್ರಕರಣದಲ್ಲಿ, ಹೈಕೋರ್ಟ್‌ನ ಮಧ್ಯಪ್ರವೇಶದಿಂದಲೇ ಮೈಸೂರಿಗೆ ನ್ಯಾಯ ದೊರಕಿತು. ಮರ್ಯಾದೆ ಉಳಿಯಿತು. ಅಧಿಕಾರಿಯ ತನಿಖೆಯಾಗಿದ್ದರೆ ಸತ್ಯ ಹೊರಗೆ ಬರುತ್ತಿರಲಿಲ್ಲ’ ಎಂದು ಅವರು ಹೇಳಿದ್ದಾರೆ.

‘ಆಮ್ಲಜನಕ ಕೊರತೆಯಿಂದ ಮೃತಪಟ್ಟವರ ಕುಟುಂಬಗಳಿಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗಮೋಹನ್‌ ರೆಡ್ಡಿ, ತಲಾ ₹ 10 ಲಕ್ಷ ಪರಿಹಾರ ನೀಡಿದ್ದಾರೆ. ಚಾಮರಾಜನಗರದ ದುರಂತ ನಡೆದು ಎಷ್ಟು ದಿನವಾಯ್ತು? ಹೈಕೋರ್ಟ್‌ ನೇಮಿಸಿದ್ದ ಸಮಿತಿಯು ಪರಿಹಾರ ನೀಡಲು ಶಿಫಾರಸು ಮಾಡಿದೆ. ರಾಜ್ಯ ಸರ್ಕಾರಕ್ಕೆ, ಜಗನ್‌ ಮಾದರಿಯಾಗಬೇಕಿದೆ’ ಎಂದು ವಿಶ್ವನಾಥ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.