ADVERTISEMENT

ಕಾಂಗ್ರೆಸ್‌, ಜೆಡಿಎಸ್‌ ನಾಯಕತ್ವ ಡಿಎನ್‌ಎ ಮೂಲಕ ನಿರ್ಧಾರ: ಸಿ.ಟಿ. ರವಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2023, 11:25 IST
Last Updated 13 ಮಾರ್ಚ್ 2023, 11:25 IST
   

ವಿಜಯಪುರ: ಕಾಂಗ್ರೆಸ್, ಜೆಡಿಎಸ್‌ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಎಂಬುದೇ ಇಲ್ಲ. ಈ ಎರಡೂ ಪಕ್ಷಗಳಲ್ಲಿ ನಾಯಕತ್ವ ಎಂಬುದು ಡಿಎನ್ಎ ಮೂಲಕ ಬರುತ್ತದೆ. ಆದರೆ, ಬಿಜೆಪಿಯಲ್ಲಿ ಮಾತ್ರ ಆಂತರಿಕ ಪ್ರಜಾಪ್ರಭುತ್ವ ಇದೆ. ಜನ ಮನ್ನಣೆ ಮೂಲಕ ಬಿಜೆಪಿಯಲ್ಲಿ ನಾಯಕತ್ವ ಬರುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ಆಲಮಟ್ಟಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಅವರ ಮಕ್ಕಳು, ಇವರ ಮಕ್ಕಳು ಎನ್ನುವ ಕಾರಣಕ್ಕೆ ಚುನಾವಣೆಯಲ್ಲಿ ಟಿಕೆಟ್ ಕೊಡುವುದಿಲ್ಲ, ಟಿಕೆಟ್‌ ಯಾರಿಗೆ ಕೊಡಬೇಕು ಎಂಬುದು ಅಡುಗೆ ಮನೆಯಲ್ಲಿ, ಕುಟುಂಬದೊಳಗೆ ನಿರ್ಧಾರವಾಗಲ್ಲ, ಯಾರಿಗೆ ಟಿಕೆಟ್ ಕೊಡಬೇಕು ಎಂಬುದು ಪಕ್ಷದ ವೇದಿಕೆಯಲ್ಲಿ ನಿರ್ಧಾರವಾಗುತ್ತದೆ ಎಂದರು.

ದೇಶ ಮೊದಲು ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಪಕ್ಷ ಬಿಜೆಪಿ, ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ನಮ್ಮ ನೀತಿಯಾಗಿದೆ, ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಬಿಜೆಪಿ ನಡೆದುಕೊಳ್ಳುತ್ತಿದೆ. ಸಾಮಾಜಿಕ ಬದ್ದತೆಗೆ ಬಿಜೆಪಿ ಬದ್ದವಾಗಿದೆ. ಒಡೆದು ಆಳುವುದು ಕಾಂಗ್ರೆಸ್, ಜೆಡಿಎಸ್ ನೀತಿಯಾಗಿದೆ ಎಂದು ಆರೋಪಿಸಿದರು.

ADVERTISEMENT

ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಮಾಡಿರುವ ಕೆಲಸದ ರಿಪೋರ್ಟ್ ಕಾರ್ಡ್ ಇಟ್ಟು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮತ ಕೇಳುತ್ತಿದ್ದೇವೆ. ಆದರೆ, ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್ ಇಟ್ಟುಕೊಂಡು ಮತ ಕೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ವಾರಂಟಿ ಕಾರ್ಡ್ ಅವಧಿಯೇ ಮುಗಿದಿರುವಾಗ ಜನರಿಗೆ ಗ್ಯಾರಂಟಿ ಕಾರ್ಡ್ ಕೊಡುವುದರಲ್ಲಿ ಅರ್ಥವಿಲ್ಲ. ಇದು ಗ್ಯಾರಂಟಿ ಕಾರ್ಡ್‌ ಅಲ್ಲ, ಪಾಲ್ಸ್ ಕಾರ್ಡ್, ಇದಕ್ಕೆ ಮೂರು ಕಾಸಿನ ಕಿಮ್ಮತ್ತು ಇಲ್ಲ, ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌ ಅನ್ನು ಜನ ನಂಬುವುದಿಲ್ಲ ಎಂದರು.

ಕಾಂಗ್ರೆಸ್‌ನವರೇ ಕಳ್ಳರು:

ಈ ಹಿಂದೆ ಕೇಂದ್ರ ಸರ್ಕಾರ 100 ರೂಪಾಯಿ ಬಿಡುಗಡೆ ಮಾಡಿದರೆ ಫಲಾನುಭವಿಗೆ ಕೇವಲ 15 ರೂಪಾಯಿ ತಲುಪುತ್ತಿತ್ತು ಎಂದು ಅಂದಿನ ಪ್ರಧಾನಿ ರಾಜೀವ್ ಗಾಂಧಿ ಹೇಳಿದ್ದರು. ಕಳ್ಳರು ಯಾರು ಎಂಬುದು ಅವರಿಗೆ ಗೊತ್ತಿತ್ತು. ಆದರೂ ಕ್ರಮಕೈಗೊಳ್ಳಲಿಲ್ಲ. ಕಾರಣ ಕಳ್ಳರು ಕಾಂಗ್ರೆಸ್‌ನವರೇ ಆಗಿದ್ದರು ಎಂದು ಆಪಾದಿಸಿದರು.

ಅಕ್ಷಮ್ಯ ಅಪರಾಧ:

ಮಂಡ್ಯದಲ್ಲಿ ಪ್ರಧಾನಿ ಮೋದಿ ಅವರ ಸ್ವಾಗತಕ್ಕಾಗಿ ಅಳವಡಿಸಲಾಗಿದ್ದ ಉರಿಗೌಡ ಮತ್ತು ದೊಡ್ಡ ನಂಜೇಗೌಡ ಮಹಾದ್ವಾರ ತೆರವುಗೊಳಿಸಿದ್ದು ಅಕ್ಷಮ್ಯ ಅಪರಾಧ, ಇದನ್ನು ಖಂಡಿಸುತ್ತೇವೆ ಎಂದು ಎಂದು ಸಿ.ಟಿ.ರವಿ ಹೇಳಿದರು.

ಉರಿಗೌಡ ಮತ್ತು ದೊಡ್ಡ ನಂಜೇಗೌಡ ಅವರಿಗೆ ಇತಿಹಾಸದಲ್ಲಿ ಗೌರವ ಸಿಕ್ಕಿರಲಿಲ್ಲ, ಅವರು ಟಿಪ್ಪು ಸುಲ್ತಾನನನ್ನು ಏಕೆ ಹತ್ಯೆ ಮಾಡಿದ್ದಾರೆ ಎಂಬುದು ಬೆಳಕಿಗೆ ಬರಬೇಕಿದೆ. ಅವರ ಹೆಸರಲ್ಲಿ ಶಾಶ್ವತ ದ್ವಾರ ಮಂಡ್ಯದಲ್ಲಿ ನಿರ್ಮಿಸಲು ಅಲ್ಲಿಯ ಜನರು ಈ ಬಾರಿ ಬಿಜೆಪಿಗೆ ಶಕ್ತಿ ಕೊಡಲಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.