ADVERTISEMENT

ಬಿಜೆಪಿಯ ಟೀಕೆ ಹತಾಶೆಯ ಪ್ರತೀಕ: ಬಿ.ಕೆ. ಚಂದ್ರಶೇಖರ್

​ಪ್ರಜಾವಾಣಿ ವಾರ್ತೆ
Published 13 ಜುಲೈ 2023, 15:34 IST
Last Updated 13 ಜುಲೈ 2023, 15:34 IST
   

ಬೆಂಗಳೂರು: ‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದ ಬಿಜೆಪಿ ನಾಯಕರು ಒಂದೇ ಸಮನೆ ಮಾಡುತ್ತಿರುವ ಟೀಕೆಗಳು ಚುನಾವಣೆಯ ಸೋಲು ಅವರಿಗೆ ಉಂಟುಮಾಡಿರುವ ಹತಾಶೆಯನ್ನು ಬಿಂಬಿಸುತ್ತದೆ’ ಎಂದು ಕಾಂಗ್ರೆಸ್‌ ಮುಖಂಡ ಬಿ.ಕೆ. ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ.

‘ಮಹಿಳೆಯರಿಗೆ ‘ಶಕ್ತಿ’ ಯೋಜನೆಯಡಿ ಉಚಿತ ಪ್ರಯಾಣದ ಗ್ಯಾರಂಟಿ ಪ್ರಕಟಿಸಿದ ಕೂಡಲೇ ಬಿಜೆಪಿ ನಾಯಕರು ಟಿಕೆಟ್‌ ತೆಗೆದುಕೊಳ್ಳದಂತೆ ಮಹಿಳೆಯರನ್ನು ಪ್ರಚೋದಿಸಿದ್ದಲ್ಲದೆ, ತಾವೂ ಟಿಕೆಟ್‌ ತೆಗೆದುಕೊಳ್ಳುವುದಿಲ್ಲವೆಂದು ಧೀರೋದ್ಧಾತವಾಗಿ ಘೋಷಿಸಿದರು. 10 ಕೆಜಿಗಿಂತ ಒಂದು ಕಾಳು ಅಕ್ಕಿ ಕಡಿಮೆ ಕೊಟ್ಟರೂ ಹೋರಾಟಕ್ಕಿಳಿಯುವುದಾಗಿ ಹೇಳಿಕೆ ನೀಡಿದರು. ಇಂದಿನ ಪರಿಸ್ಥಿತಿಯ ಅನಿವಾರ್ಯಗಳ ಹಿನ್ನೆಲೆಯಲ್ಲಿ ಕೆಲವು ತಿಂಗಳಾದರೂ ಕಾಯದೆ ಸರ್ಕಾರದ ವಿರುದ್ಧ ಸಮರ ಘೋಷಿಸುತ್ತಿರುವ ಬಿಜೆಪಿ ನಾಯಕರ ನಡೆ, ಗರ್ಭಿಣಿಗೆ ದಿನ ತುಂಬುವ ಮೊದಲೇ ಹೆರಿಗೆ ಬೇನೆ ಆರಂಭವಾದಾಗ ಆಕೆಯ ಕುಟುಂಬ ಅನುಭವಿಸುವ ಆತಂಕದಂತಿದೆ’ ಎಂದಿದ್ದಾರೆ.

‘ಆಳುವ ಪಕ್ಷಗಳು ಬದಲಾಗಬಹುದು. ಆದರೆ, ಆಡಳಿತ ಎನ್ನುವುದು ನಿರಂತರ ಪ್ರಕ್ರಿಯೆ. ನೀತಿನಿರೂಪಣೆಗಳ ಮುಂದುವರಿಕೆ ಅತ್ಯಗತ್ಯ. ‌ಕಾರ್ಯಯೋಜನೆಗಳನ್ನು ಬದಲಾಯಿಸಬಹುದೇ ಹೊರತು ನೀತಿ ನಿರೂಪಣೆಯನ್ನಲ್ಲʼ ಎಂದು ಹೇಳುತ್ತಾ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್ಇಪಿ) ಸ್ಥಾನದಲ್ಲಿ ರಾಜ್ಯ ಶಿಕ್ಷಣ ನೀತಿ ಜಾರಿಗೆ ತರಬೇಕೆಂಬ ಕಾಂಗ್ರೆಸ್‌ ಸರ್ಕಾರದ ನಿರ್ಧಾರಕ್ಕೆ ಉದಾಹರಣೆ ನೀಡುತ್ತಾರೆ. ಯೋಜನೆಗಳು ಕಾರ್ಯರೂಪಕ್ಕೆ ಬರುವುದು ನೀತಿನಿರೂಪಣೆಯ ಅಡಿಯಲ್ಲಾದರೆ ಕೇವಲ ಯೋಜನೆಗಳನ್ನು ಮಾತ್ರ ಬದಲಾಯಿಸಲು ಹೇಗೆ ಸಾಧ್ಯ? ಎಲ್ಲ ಸರ್ಕಾರಗಳು ಮಾಡಿರುವುದೂ ಅದನ್ನೇ. ಇದನ್ನು ಸಂವಿಧಾನದ ಯಾವ ವಿಧಿಯೂ ವಿರೋಧಿಸುವುದಿಲ್ಲ. ಕರ್ನಾಟಕದಲ್ಲಿ ಜಾರಿಯಲ್ಲಿದ್ದ ಶಿಕ್ಷಣ ನೀತಿಯನ್ನು ಕಿತ್ತೊಗೆದು ಬಿಜೆಪಿ ಸರ್ಕಾರ ಜಾರಿಗೆ ತರಲಿಲ್ಲವೇ? ಅದು ಕೇವಲ ಕಾರ್ಯನೀತಿಯ ಬದಲಾವಣೆಯಾಗಿರದೆ, ನೀತಿ ನಿರೂಪಣೆಯ ಬದಲಾವಣೆಯೂ ಆಗಿರಲಿಲ್ಲವೇ’ ಎಂದೂ ಪ್ರಶ್ನಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.