ADVERTISEMENT

ರಾಹುಲ್‌ ಪೊಲೀಸರ ವಶಕ್ಕೆ: ಉತ್ತರ ಪ್ರದೇಶ ಸರ್ಕಾರ ವಜಾಕ್ಕೆ ಖಂಡ್ರೆ ಆಗ್ರಹ

ರಾಹುಲ್‌, ಪ್ರಿಯಾಂಕಾ ಗಾಂಧಿ ಬಂಧನಕ್ಕೆ ಖಂಡನೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2020, 12:40 IST
Last Updated 1 ಅಕ್ಟೋಬರ್ 2020, 12:40 IST
ಕಾಂಗ್ರೆಸ್‌ ನಾಯಕ ಈಶ್ವರ ಖಂಡ್ರೆ
ಕಾಂಗ್ರೆಸ್‌ ನಾಯಕ ಈಶ್ವರ ಖಂಡ್ರೆ    

ಹೊಸಪೇಟೆ: ‘ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ತಕ್ಷಣವೇ ಯೋಗಿ ಆದಿತ್ಯನಾಥ್‌ ಅವರ ಸರ್ಕಾರವನ್ನು ರಾಷ್ಟ್ರಪತಿಯವರು ವಜಾಗೊಳಿಸಬೇಕು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಹಕ್ಕೊತ್ತಾಯ ಮಾಡಿದರು.

‘ಹತ್ರಾಸ್‌ನಲ್ಲಿ ತಳಸಮುದಾಯಕ್ಕೆ ಸೇರಿದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಆಕೆಯ ಕೊಲೆ ಮಾಡಲಾಗಿದೆ. ಅಷ್ಟೇ ಅಲ್ಲ, ಆಕೆಯ ಕುಟುಂಬದವರ ಅನುಮತಿಯಿಲ್ಲದೆ, ಅವರನ್ನು ದೂರವಿಟ್ಟು ಪೊಲೀಸರೇ ರಾತ್ರೋರಾತ್ರಿ ಗೌಪ್ಯವಾಗಿ ಶವ ಸುಟ್ಟು ಹಾಕಿದ್ದಾರೆ. ಇದು ಅತ್ಯಂತ ಅಮಾನವೀಯ ಘಟನೆ’ ಎಂದು ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ADVERTISEMENT

‘ಸಂತ್ರಸ್ತೆಯ ಕುಟುಂಬದವರಿಗೆ ಸಾಂತ್ವನ ಹೇಳಲು ತೆರಳುತ್ತಿದ್ದ ಕಾಂಗ್ರೆಸ್‌ ಮುಖಂಡರಾದ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಅವರನ್ನು ತಡೆದು ಅವರನ್ನು ಬಂಧಿಸಿರುವುದು ಖಂಡನಾರ್ಹ. ಸರ್ಕಾರ ಇದುವರೆಗೆ ಸಂತ್ರಸ್ತೆಯ ಕುಟುಂಬದವರಿಗೆ ಸಾಂತ್ವನ ಹೇಳಿಲ್ಲ. ಬೇರೆಯವರಿಗೂ ಆ ಕೆಲಸ ಮಾಡಲು ಬಿಡುತ್ತಿಲ್ಲ. ರಾಷ್ಟ್ರಪತಿಯವರು ಮಧ್ಯ ಪ್ರವೇಶಿಸಿ, ಅಲ್ಲಿನ ಸರ್ಕಾರವನ್ನು ಬರ್ಖಾಸ್ತುಗೊಳಿಸಬೇಕು. ಪ್ರಕರಣದ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯ ಹಾಗೂ ಕೇಂದ್ರ ಸರ್ಕಾರ ಸುಗ್ರೀವಾಜ್ಞೆಗಳ ಮೂಲಕ ಜಾರಿಗೆ ತಂದಿರುವ ರೈತ, ಕಾರ್ಮಿಕ ಹಾಗೂ ಜನವಿರೋಧಿ ಕಾಯ್ದೆಗಳ ವಿರುದ್ಧ ಅ. 2ರಿಂದ 30ರ ವರೆಗೆ ರಾಜ್ಯದ ಎಲ್ಲ ಹೋಬಳಿ, ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಕೋವಿಡ್‌ ಹೆಸರಲ್ಲಿ ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರ ನಡೆದಿದ್ದು, ಅದರ ವಿರುದ್ಧವೂ ಪಕ್ಷ ಹೋರಾಡಲಿದೆ’ ಎಂದು ತಿಳಿಸಿದರು.

‘ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಸಂಪುಟ ದರ್ಜೆಯ ಸಚಿವರನ್ನು ಅಧ್ಯಕ್ಷರಾಗಿ ನೇಮಕ ಮಾಡಲಾಗುತ್ತಿತ್ತು. ಆದರೆ, ಈ ಸರ್ಕಾರ ಅದನ್ನು ಗಾಳಿಗೆ ತೂರಿದೆ. ಸರ್ಕಾರ ಅಧಿಕಾರಕ್ಕೆ ಬಂದು 14 ತಿಂಗಳಾದರೂ ಸಮಿತಿ ರಚಿಸಿಲ್ಲ. ಇದುವರೆಗೆ ಒಂದೇ ಒಂದು ಸಭೆ ನಡೆಸಿಲ್ಲ. ಆಯವ್ಯಯದಲ್ಲಿ ಘೋಷಣೆಯಾದ ₹500 ಕೋಟಿ ಬಿಡುಗಡೆಯಾಗಿಲ್ಲ. ಕಲ್ಯಾಣ ಕರ್ನಾಟಕವನ್ನು ದುರ್ಬಲಗೊಳಿಸುವ ಹುನ್ನಾರ ಇದರಲ್ಲಿ ಅಡಗಿದೆ’ ಎಂದು ಆರೋಪಿಸಿದರು.

‘ರಾಜ್ಯದಲ್ಲಿ ನಡೆಯಲಿರುವ ಉಪಚುನಾವಣೆ ಕಾಂಗ್ರೆಸ್‌ ಪಕ್ಷ ಎಲ್ಲ ರೀತಿಯಿಂದಲೂ ಸಿದ್ಧವಾಗಿದೆ. ಶೀಘ್ರದಲ್ಲೇ ಅಭ್ಯರ್ಥಿಗಳ ಹೆಸರು ಘೋಷಿಸಿ, ಪ್ರಚಾರ ಕಾರ್ಯ ಆರಂಭಿಸಲಾಗುವುದು’ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಶಾಸಕರಾದ ಪಿ.ಟಿ. ಪರಮೇಶ್ವರ ನಾಯ್ಕ, ಅಮರೇಗೌಡ ಬಯ್ಯಾಪುರ, ಮುಖಂಡರಾದ ಬಿ.ವಿ. ಶಿವಯೋಗಿ, ಮೊಹಮ್ಮದ್‌ ಇಮಾಮ್‌ ನಿಯಾಜಿ, ವೆಂಕಟರಾವ ಘೋರ್ಪಡೆ, ಗುಜ್ಜಲ್‌ ನಾಗರಾಜ್‌, ವಿ. ಸೋಮಪ್ಪ, ನಿಂಬಗಲ್‌ ರಾಮಕೃಷ್ಣ, ಅಮ್ಜದ್‌ ಪಟೇಲ್‌, ಪತ್ರೇಶ್‌ ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.