ADVERTISEMENT

ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಅಂಟಿದ ಶನಿ: ಜನಾರ್ದನ ಪೂಜಾರಿ

ಹಿರಿಯ ಮುಖಂಡ ಜನಾರ್ದನ ಪೂಜಾರಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2019, 13:02 IST
Last Updated 5 ನವೆಂಬರ್ 2019, 13:02 IST
   

ಮಂಗಳೂರು: ‘ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಅಂಟಿದ ಶನಿ. ಅವರು ಪಕ್ಷವನ್ನು ಮುಗಿಸಿಯೇ ಹೋಗುವುದು. ಅವರಿಗೆ ಹೆಚ್ಚು ಅಧಿಕಾರ ಕೊಡುವುದೇ ತಪ್ಪು. ಹೈಕಮಾಂಡ್‌ ಈ ತಪ್ಪನ್ನು ಮಾಡುತ್ತಿದೆ’ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರಿಗೆ ಅಧಿಕಾರ ಕೊಡುತ್ತಿರುವುದು ತಪ್ಪು ಎಂಬುದನ್ನು ಹೈಕಮಾಂಡ್‌ಗೂ ತಿಳಿಸಿದ್ದೇನೆ. ಈ ಹೇಳಿಕೆ ಬಗ್ಗೆ ನನ್ನ ವಿರುದ್ಧ ದೂರು ನೀಡಲಿ. ಪಕ್ಷದಿಂದ ತೆಗೆದು ಹಾಕಲಿ. ನಾನು ಯಾರೆಂದು ತೋರಿಸುತ್ತೇನೆ’ ಎಂದು ಸವಾಲು ಹಾಕಿದರು.

‘ಪಾಲಿಕೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಕರೆದರೂ ನಾನು ಹೋಗುವುದಿಲ್ಲ. ಅವರು ಏನು ಹೇಳುತ್ತಾರೆ ನೋಡೋಣ, ಮರುದಿನ ನಾನು ಮಾತನಾಡುತ್ತೇನೆ’ ಎಂದು ಪೂಜಾರಿ ಹೇಳಿದರು.

ADVERTISEMENT

‘ನನ್ನ ಆರೋಗ್ಯದ ಬಗ್ಗೆ ಸುಳ್ಳು ಪ್ರಚಾರ ಮಾಡಿದರೆ ಬೇಸರ ಇಲ್ಲ, ಅವರಿಗೆ ತೃಪ್ತಿ ಸಿಗುವುದಾದರೆ ಅಪಪ್ರಚಾರ ಮಾಡಲಿ’ ಎಂದ ಅವರು, ‘ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ನನ್ನ ಸಲಹೆ, ಸೂಚನೆ ಪಡೆದಿದ್ದೇವೆ ಎಂಬ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷರ ಹೇಳಿಕೆ ಸತ್ಯಕ್ಕೆ ದೂರವಾದುದು’ ಎಂದು ಸ್ಪಷ್ಟಪಡಿಸಿದರು.

‘ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಪಕ್ಷದ ಹಿರಿಯರನ್ನು ಕಡೆಗಣಿಸಿದ್ದರಿಂದಲೇ ಕರಾವಳಿಯಲ್ಲಿ ಕಾಂಗ್ರೆಸ್ ಸೋಲುವಂತಾಗಿದೆ. ಮಹಾನಗರ ಪಾಲಿಕೆ ಚುನಾವಣೆಯಲ್ಲೂ ಅದೇ ತಪ್ಪು ಮಾಡಲಾಗುತ್ತಿದೆ. ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.