ADVERTISEMENT

ರಾಜ್ಯದ ಸಾರ್ವಭೌಮತೆಗೆ ಧಕ್ಕೆ;ಮಹಾರಾಷ್ಟ್ರ ಸರ್ಕಾರ ವಜಾಕ್ಕೆ ಸಿದ್ದರಾಮಯ್ಯ ಒತ್ತಾಯ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2023, 12:35 IST
Last Updated 15 ಮಾರ್ಚ್ 2023, 12:35 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಹುಬ್ಬಳ್ಳಿ: ಗಡಿಗೆ ಹೊಂದಿಕೊಂಡಿರುವ ಕರ್ನಾಟಕದ 865 ಹಳ್ಳಿಗಳ ಜನರಿಗಾಗಿ ಮಹಾರಾಷ್ಟ್ರ ಸರ್ಕಾರವು ಆರೋಗ್ಯ ವಿಮೆ ಯೋಜನೆ ಜಾರಿಗೊಳಿಸುತ್ತಿರುವುದು ಅಕ್ಷಮ್ಯ. ಇದು ಒಕ್ಕೂಟದ ವ್ಯವಸ್ಥೆಗೆ, ರಾಜ್ಯದ ಸಾರ್ವಭೌಮತೆಗೆ ಧಕ್ಕೆ ತರುವಂತಿದೆ. ಕೂಡಲೇ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ, ಅಲ್ಲಿನ ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕೆಂದು ವಿರೋಧ ಪಕ್ಷದ ನಾಯಕ ಸಿದ್ದರಾಯಮ್ಯ ಒತ್ತಾಯಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, ‘ರಾಜ್ಯ ಹಾಗೂ ಕನ್ನಡಿಗರ ಹಿತಾಸಕ್ತಿ ಕಾಪಾಡುವಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಕೂಡ ವಿಫಲರಾಗಿದ್ದಾರೆ. ಮುಖ್ಯಮಂತ್ರಿಯಾಗಿ ಒಂದು ಕ್ಷಣವೂ ಮುಂದುವರಿಯಲು ಅವರಿಗೆ ಅಧಿಕಾರವಿಲ್ಲ. ಕೂಡಲೇ ರಾಜೀನಾಮೆ ನೀಡಲಿ’ ಎಂದು ಒತ್ತಾಯಿಸಿದರು.

ಗಡಿ ಪ್ರದೇಶಕ್ಕೆ ಸಂಬಂಧಿಸಿದಂತೆ ಮಹಾಜನ್‌ ಆಯೋಗ ನೀಡಿದ ವರದಿಯನ್ನು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ. ಆದರೆ, ಮಹಾರಾಷ್ಟ್ರ ಇದುವರೆಗೂ ತಕರಾರು ಎತ್ತುತ್ತಿದೆ. ರಾಜ್ಯದ ಒಂದಿಂಚೂ ಜಾಗ ಬಿಟ್ಟುಕೊಡಬಾರದು. ನೆಲ– ಜಲ– ಗಡಿ ರಕ್ಷಣೆ ನಮ್ಮ ಹಕ್ಕು. ರಾಜ್ಯ ಸರ್ಕಾರ ಮೌನವಾಗಿರಬಾರದು ಎಂದು ಹೇಳಿದರು.

ADVERTISEMENT

ಇಂದಿರಾ ಕ್ಯಾಂಟೀನ್‌ ಮುಚ್ಚಬಾರದು:

ಬಡವರು, ರೋಗಿಗಳು, ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ನಮ್ಮ ಸರ್ಕಾರ ಇದ್ದಾಗ ಆರಂಭಿಸಿರುವ ಇಂದಿರಾ ಕ್ಯಾಂಟೀನ್‌ಗಳನ್ನು ಇಂದಿನ ಬಿಜೆಪಿ ಸರ್ಕಾರ ಬಂದ್‌ ಮಾಡಬಾರದು ಎಂದು ಅವರು ಒತ್ತಾಯಿಸಿದರು.

ಬೆಂಗಳೂರಿನಲ್ಲಿ ಪ್ರತಿಯೊಂದು ವಾರ್ಡ್‌ನಲ್ಲಿ, ತಾಲ್ಲೂಕು ಮಟ್ಟದಲ್ಲಿ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಸುಮಾರು 400 ಇಂದಿರಾ ಕ್ಯಾಂಟೀನ್‌ಗಳನ್ನು ನಾವು ಆರಂಭಿಸಿದ್ದೇವು. ಈ ಕ್ಯಾಂಟೀನ್‌ಗಳಿಗೆ ಇಂದಿರಾ ಹೆಸರು ಇಟ್ಟಿದ್ದಕ್ಕಾಗಿ ಅವುಗಳನ್ನು ಬಿಜೆಪಿ ಸರ್ಕಾರ ಬಂದ್‌ ಮಾಡುತ್ತಿದೆ ಎಂದು ಅವರು ಆರೋಪಿಸಿದರು.

ಬಿಜೆಪಿ ಸರ್ಕಾರವು ವಾಜಪೇಯಿ, ದೀನ ದಯಾಳ್‌ ಉಪಾಧ್ಯಾಯ, ಸಾವರ್ಕರ್‌ ಹೆಸರಿನಲ್ಲಿ ಹಲವು ಯೋಜನೆಗಳನ್ನು ರೂಪಿಸಿದೆ. ಮುಂದೆ ಬೇರೆ ಪಕ್ಷ ಸರ್ಕಾರ ಮಾಡಿದಾಗ ಇವುಗಳ ಹೆಸರು ಬದಲಾಯಿಸಬೇಕೆ? ತಮಿಳುನಾಡಿನಲ್ಲಿ ಎಐಎಡಿಎಂಕೆ ಸರ್ಕಾರವು ಆರಂಭಿಸಿದ್ದ ‘ಅಮ್ಮ’ ಕ್ಯಾಂಟೀನ್‌ಗಳನ್ನು ನಂತರ ಬಂದ ಡಿಎಂಕೆ ಸರ್ಕಾರ ಬಂದ್‌ ಮಾಡಿರಲಿಲ್ಲ ಎಂದು ಅವರು ಹೇಳಿದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.