ADVERTISEMENT

ಜೆಡಿಎಸ್‌ ಜಾತ್ಯತೀತ ಬಣ್ಣ ಬಯಲಾಗಿದೆ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 8:14 IST
Last Updated 27 ಜನವರಿ 2021, 8:14 IST
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ   

ಬೆಂಗಳೂರು: ‘ಜೆಡಿಎಸ್‌ನವರ ಜಾತ್ಯತೀತ (ಸೆಕ್ಯುಲರ್) ತತ್ವ ಬದಲಾಗಿದೆ. ಅವರ ಸೆಕ್ಯುಲರ್‌ ಬಣ್ಣ ಬಯಲಾಗಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಸಭಾಪತಿ ಚುನಾವಣೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಕೈಜೋಡಿಸಿರುವುದು ಇದರ ಪ್ರತೀಕ’ ಎಂದರು.

ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇನೆ: ‘ಶಿವಮೊಗ್ಗಕ್ಕೆ ಇಂದು (ಬುಧವಾರ) ತೆರಳಿ, ಸ್ಫೋಟ ನಡೆದ ಸ್ಥಳ ವೀಕ್ಷಿಸುತ್ತೇನೆ. ಸರ್ಕಾರದ ನಿರ್ಲಕ್ಷ್ಯದಿಂದ ಅಲ್ಲಿ ಆರು ಜನ ಮೃತಪಟ್ಟಿದ್ದಾರೆ. ಅಧಿವೇಶನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸುತ್ತೇನೆ’ ಎಂದರು.

ADVERTISEMENT

ಕೃಷಿ ಸಚಿವ ಬಿ.ಸಿ. ಪಾಟೀಲ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ, ‘ಪಾಟೀಲ ನೀಡಿದ ಹೇಳಿಕೆ ಸರಿಯಲ್ಲ. ರೈತರ ಬಗ್ಗೆ ಬಾಯಿಗೆ ಬಂದಂತೆ, ಬೇಜವಾಬ್ದಾರಿಯಿಂದ ಮಾತಾಡಬಾರದು’ ಎಂದರು.

‘ಖಾಲಿಸ್ತಾನ್‌ದಿಂದ ಯಾರು ಬಂದಿದ್ದರು ಎಂದು ಹೇಳಲಿ. ಕೇಂದ್ರ ಸರ್ಕಾರ ಕಣ್ಣೊರೆಸುವ ರೀತಿಯಲ್ಲಿ ರೈತರ ಜೊತೆ 11 ಸಭೆಗಳನ್ನು ನಡೆಸಿದೆ. ಬಿಸಿಲು, ಮಳೆ ಎನ್ನದೆ ರೈತರು, ಮಹಿಳೆಯರು, ಮಕ್ಕಳು ಪ್ರತಿಭಟನೆ ಮಾಡುತ್ತಿದ್ದಾರೆ. ಮೋದಿ 56 ಇಂಚಿನ ಎದೆ ಇದೆ ಎಂದು ಹೇಳುತ್ತಾರೆ. ಎದೆ ಇದ್ದರೆ ಸಾಲದು, ಅದರ ಒಳಗೆ ಹೃದಯ ಇರಬೇಕು’ ಎಂದರು.

‘ಬಿಜೆಪಿಯವರು ಅದಾನಿ, ಅಂಬಾನಿಗೆ ಮಾತು ಕೊಟ್ಟಿದ್ದಾರೆ ಅದಕ್ಕೆ ಇಷ್ಟೆಲ್ಲಾ ಮಾಡುತ್ತಿದ್ದಾರೆ. ಬಿಜೆಪಿಯವರು ಅವರ ಗುಲಾಮರಾಗಿದ್ದಾರೆ’ ಎಂದೂ ಆರೋಪಿಸಿದರು.

ದೆಹಲಿ ರೈತರ ಪ್ರತಿಭಟನೆ ವೇಳೆ ನಡೆದ ಗಲಾಟೆ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಕೇಂದ್ರ ಸರ್ಕಾರದ ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು. ಅದು ದುರ್ಬಲವಾಗಿದೆ’ ಎಂದೂ ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.