ADVERTISEMENT

ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿರುವ ಬೊಮ್ಮಾಯಿ: ಸಿದ್ದರಾಮಯ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2021, 16:22 IST
Last Updated 12 ನವೆಂಬರ್ 2021, 16:22 IST
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ   

ಹುಬ್ಬಳ್ಳಿ: ‘ಸರ್ಕಾರದ 100 ದಿನಗಳ ಆಡಳಿತಕ್ಕೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಮಾಧ್ಯಮಗಳಿಗೆ ಹೇಳುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು ‘ಪ್ರಧಾನಿ ಏನು ಹೇಳಿದ್ದಾರೆ ಎಂದು ಯಾರಿಗೆ ಗೊತ್ತು? ಮೋದಿ ಈ ಕುರಿತು ಅಧಿಕೃತ ಹೇಳಿಕೆ ನೀಡಿದ್ದಾರೆಯೇ?’ ಎಂದು ಪ್ರಶ್ನಿಸಿದರು.

‘ಪ್ರಧಾನಿಯಾದವರು ಬಿಟ್‌ ಕಾಯಿನ್‌ ವಿಚಾರದ ಬಗ್ಗೆ ಲಘುವಾಗಿ ಮಾತನಾಡಬಾರದು. ಸತ್ಯ ಹೊರಗೆ ಬರಬೇಕು. ಹಗರಣದಲ್ಲಿ ಯಾರೇ ಭಾಗಿಯಾಗಿದ್ದರೂ ಆ ಹೆಸರುಗಳನ್ನು ಬಹಿರಂಗಗೊಳಿಸಬೇಕು. ಸತ್ಯ ಹೇಳಿದರೆ ಸರ್ಕಾರಕ್ಕೆ ಧಕ್ಕೆಯಾಗಬಹುದು ಎನ್ನುವ ಭಯದಿಂದ ಬೊಮ್ಮಾಯಿ ಸುಮ್ಮನಿದ್ದಾರೆ’ ಎಂದರು.

ADVERTISEMENT

‘ಪ್ರಭಾವಿಗಳಿದ್ದಾರೆ ಎನ್ನುವುದು ಗೊತ್ತು, ಈ ಹಗರಣ ಮುಚ್ಚಿಹಾಕುವ ಯತ್ನದಲ್ಲಿದ್ದಾರೆ. ಸರ್ಕಾರ ನಡೆಸುವವರೇ ನಮ್ಮನ್ನು ದಾಖಲೆ ಕೇಳುವುದು ಸರಿಯೇ’ ಎಂದು ಪ್ರಶ್ನಿಸಿದರು.

‘ಗೊತ್ತಿದ್ದರೆ, ನೀವೇ ಹೆಸರುಗಳನ್ನು ಹೇಳಿ’ ಎಂಬ ಪ್ರಶ್ನೆಗೆ, ‘ಬಿಜೆಪಿಯವರು ಮೊದಲು ಹೆಸರು ಹೇಳಲಿ ಎಂದು ಕಾಯುತ್ತಿದ್ದೇನೆ’ ಎಂದು ಉತ್ತರಿಸಿದರು.

ತನಿಖೆಗೆ ಕೊಟ್ಟಿಲ್ಲವೇ?: ಹಗರಣದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ. ಆದರೆ, ಈಗ ತನಿಖೆಗೆ ಕೊಟ್ಟಿದ್ದಾರೆಯೇ ಎಂಬ ಅನುಮಾನ ಕಾಡುತ್ತಿದೆ. ಇದು ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಯಾಗಬೇಕು. ಪ್ರಿಯಾಂಕ್‌ ಖರ್ಗೆ ಬಳಿ ಯಾವ ದಾಖಲೆಗಳಿವೆ ಎನ್ನುವುದು ನನಗೆ ಗೊತ್ತಿಲ್ಲ. ಅವರೊಂದಿಗೆ ಮಾತನಾಡುವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.