ಬೆಂಗಳೂರು: ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಕುರಿತು ಅಸಂಸದೀಯ ಪದಗಳನ್ನು ಬಳಸಿದ್ದಾರೆ ಎಂದು ಆರೋಪಿಸಿ ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ವಿರುದ್ಧ ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯರು ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಗುರುವಾರ ದೂರು ನೀಡಿದರು.
ಆ ಬೆನ್ನಲ್ಲೆ, ರವಿಕುಮಾರ್‌ಗೆ ಪತ್ರ ಬರೆದ ಹೊರಟ್ಟಿ ಅವರು ವಿವರಣೆ ಕೇಳಿದ್ದಾರೆ.
ಆಡಳಿತ ಪಕ್ಷದ ಮುಖ್ಯಸಚೇತಕ ಸಲೀಂ ಅಹಮದ್, ಪರಿಷತ್ ಕಾಂಗ್ರೆಸ್ ಸದಸ್ಯರಾದ ಬಿ.ಕೆ. ಹರಿಪ್ರಸಾದ್, ಮಂಜುನಾಥ ಭಂಡಾರಿ, ರಾಮೋಜಿರಾವ್, ಬಿಲ್ಕಿಶ್ ಭಾನು, ಕಾಂಗ್ರೆಸ್ ಮುಖಂಡರಾದ ಎಸ್. ಮನೋಹರ್, ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ಮತ್ತಿತರು ಸಭಾಪತಿಯವರನ್ನು ಭೇಟಿ ಮಾಡಿ ದೂರು ಪತ್ರ ನೀಡಿದರು.
‘ರವಿಕುಮಾರ್ ಪದೇ ಪದೇ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ಇಂತಹ ಹೇಳಿಕೆಗಳನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಅವರು ಈ ರೀತಿ ಮಾತನಾಡುವುದು ಮೊದಲ ಬಾರಿಯಲ್ಲ. ಆದ್ದರಿಂದ, ಅವರನ್ನು ಸದಸ್ಯತ್ವದಿಂದ ಉಚ್ಚಾಟನೆ ಮಾಡಬೇಕು’ ಎಂದು ಸಲೀಂ ಅಹಮದ್ ಅವರು ಆಗ್ರಹಿಸಿದರು.
ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಹೊರಟ್ಟಿ, ‘ಈ ಕುರಿತು ಮಾಹಿತಿ ಪಡೆದು ಪರಿಶೀಲನೆ ನಡೆಸುತ್ತೇನೆ. ನನ್ನ ಇತಿಮಿತಿಯಲ್ಲಿ ಏನು ಮಾಡಬಹುದು ಎಂಬುದನ್ನು ನೋಡಿಕೊಂಡು ಬಳಿಕ ಕ್ರಮಕೈಗೊಳ್ಳುತ್ತೇನೆ. ತಕ್ಷಣವೇ ರವಿಕುಮಾರ್ ಅವರಿಂದ ಮಾಹಿತಿ ಕೇಳುತ್ತೇನೆ. ಏಕಾಏಕಿ ನಾವು ಯಾವುದೇ ಕ್ರಮ ತೆಗೆದುಕೊಳ್ಳಲು ಆಗುವುದಿಲ್ಲ’ ಎಂದರು.
‘ರವಿಕುಮಾರ್ ಅವರಿಂದ ಉತ್ತರ ಬಂದ ನಂತರ, ಮುಂದೆ ಏನು ಮಾಡಬೇಕು ಎನ್ನುವುದನ್ನು ನೋಡುತ್ತೇನೆ. ಅವರನ್ನು ಸದಸ್ಯತ್ವದಿಂದ ಕಿತ್ತು ಹಾಕುವ ಹಕ್ಕು ನನಗಿಲ್ಲ. ನಮಗೆ ನಮ್ಮದೇ ಆದ ನಿಯಮಗಳಿವೆ. ಆ ಪ್ರಕಾರವೇ ನಡೆದುಕೊಳ್ಳಬೇಕಾಗುತ್ತದೆ’ ಎಂದು ಹೇಳಿದರು.
‘ಕ್ಷಮೆ ಕೇಳದಿದ್ದರೆ ಪ್ರತಿಭಟನೆ’
‘ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ವಿಧಾನ ಪರಿಷತ್ ಬಿಜೆಪಿ ಸದಸ್ಯ ಎನ್. ರವಿಕುಮಾರ್ ಅವರು ತಕ್ಷಣ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಸಾರ್ವಜನಿಕರಿಂದ ಪ್ರತಿಭಟನೆ ಎದುರಿಸಬೇಕಾದೀತು’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಎಚ್ಚರಿಕೆ ನೀಡಿದರು. ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು ‘ಕರ್ನಾಟಕದ ಬಿಜೆಪಿ ನಾಯಕರಿಂದ ಮಹಿಳೆಯರ ನಿಂದನೆ ನಿರಂತರವಾಗಿ ನಡೆಯುತ್ತಿದೆ. ಒಬ್ಬ ಹಿರಿಯ ಮಹಿಳಾ ಐಎಎಸ್ ಅಧಿಕಾರಿ ಬಗ್ಗೆ ಕೆಟ್ಟದಾಗಿ ಮಾತನಾಡಿರುವ ರವಿಕುಮಾರ್ ಅವರು ಮನಃಸ್ಥಿತಿ ಎಂಥದ್ದು ಎಂದು ತೋರಿಸುತ್ತದೆ. ರವಿಕುಮಾರ್ ಅವರು ಇಡೀ ಮಹಿಳಾ ಕುಲಕ್ಕೆ ಅವಮಾನ ಮಾಡಿದ್ದಾರೆ’ ಎಂದರು. ‘ಕೇಂದ್ರದ ಬಿಜೆಪಿ ನಾಯಕರು ರವಿಕುಮಾರ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವರೇ’ ಎಂದು ಸಚಿವರು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.