ADVERTISEMENT

ಮುಖ್ಯಮಂತ್ರಿ ಮುಂದೆ ‘ಕೈ‘ ಪರಿಷತ್‌ ಸದಸ್ಯರ ಅಹವಾಲು: ಅನುದಾನ, 3 ಸಚಿವ ಸ್ಥಾನ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 16:03 IST
Last Updated 9 ಸೆಪ್ಟೆಂಬರ್ 2025, 16:03 IST
ಆಡಳಿತ ಪಕ್ಷದ ವಿಧಾನ ಪರಿಷತ್‌ ಸದಸ್ಯರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ನಡೆಸಿದರು
ಆಡಳಿತ ಪಕ್ಷದ ವಿಧಾನ ಪರಿಷತ್‌ ಸದಸ್ಯರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ನಡೆಸಿದರು   

ಬೆಂಗಳೂರು: ‘ಕನಿಷ್ಠ ಮೂರು ಸಚಿವ ಸ್ಥಾನ, ವಿಶೇಷ ಅನುದಾನ ನೀಡಬೇಕು ಹಾಗೂ ನಮ್ಮ ಅಹವಾಲುಗಳಿಗೆ ಸಚಿವರು ಸ್ಪಂದಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಸ್ವಪಕ್ಷೀಯ ವಿಧಾನ ಪರಿಷತ್‌ ಸದಸ್ಯರು ಅಲವತ್ತುಕೊಂಡಿದ್ದಾರೆ.

ವಿಧಾನ ಪರಿಷತ್‌ನ ಕಾಂಗ್ರೆಸ್‌ ಸದಸ್ಯರ ಜೊತೆ ಮುಖ್ಯಮಂತ್ರಿ ಬುಧವಾರ ಸಭೆ ನಡೆಸಿದರು. ಈ ವೇಳೆ, ಸದಸ್ಯರು ತಮ್ಮ ಬೇಡಿಕೆಗಳನ್ನು ಅವರ ಮುಂದಿಟ್ಟಿದ್ದಾರೆ. ಶಾಸಕರಿಗೆ ₹ 50 ಕೋಟಿ ವಿಶೇಷ ಅನುದಾನ ನೀಡಿದಂತೆ ತಮಗೂ ‌ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡಬೇಕು ಎಂದು ಸದಸ್ಯರು  ಮನವಿ ಮಾಡಿದ್ದಾರೆ. 

ಸಚಿವರ ನಡೆ ವಿರುದ್ಧ ತೀವ್ರ ಅಸಮಾಧಾನ ಹೊರ ಹಾಕಿರುವ ಕೆಲವು ಸದಸ್ಯರು, ‌‘ಸಚಿವರು ನಮ್ಮ ಪತ್ರಗಳಿಗೆ ಮಾನ್ಯತೆ ನೀಡುವುದಿಲ್ಲ. ಭೇಟಿಗೆ ಅವಕಾಶ ನೀಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ದೂರವಾಣಿ ಕರೆಯನ್ನೂ ಸ್ವೀಕರಿಸುವುದಿಲ್ಲ’ ಎಂದು ಬೇಸರ ತೋಡಿಕೊಂಡಿದ್ದಾರೆ. ತಮ್ಮ ಅಹವಾಲುಗಳಿಗೆ ಸ್ಪಂದಿಸುವಂತೆ ಸಚಿವರಿಗೆ ಸೂಚನೆ ನೀಡುವುದಾಗಿ ಪರಿಷತ್‌ ಸದಸ್ಯರಿಗೆ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು ಗೊತ್ತಾಗಿದೆ. 

ADVERTISEMENT

‘ಪರಿಷತ್‌ನಿಂದ ಸದ್ಯ ಒಬ್ಬರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗಿದೆ. ಮುಂದಿನ ಸಚಿವ ಸಂಪುಟ ಪುನರ್‌ರಚನೆ ಸಂದರ್ಭದಲ್ಲಿ ಕನಿಷ್ಠ ಮೂವರು ಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ನೀಡಬೇಕು’ ಎಂದೂ ಸದಸ್ಯರು ಮನವಿ ಮಾಡಿದ್ದಾರೆ ಎಂದೂ ತಿಳಿದುಬಂದಿದೆ.

ಸಭೆಯ ಬಳಿಕ ಮಾತನಾಡಿದ ಮುಖ್ಯಮಂತ್ರಿ, ‘ವಿಧಾನ ಪರಿಷತ್ತಿನ ಪಕ್ಷದ ಸದಸ್ಯರೊಂದಿಗೆ ಸಭೆ ನಡೆಸಿದ್ದೇನೆ. ಶಾಸಕರು ತಮ್ಮ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಬಜೆಟ್‌ನಲ್ಲಿ ₹ 8 ಸಾವಿರ ಕೋಟಿ ಮೀಸಲಿರಿಸಲಾಗಿದೆ. ಶಾಸಕರಿಗೆ ನೀಡಿದಂತೆ ಪರಿಷತ್‌ ಸದಸ್ಯರೂ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡುವಂತೆ ಬೇಡಿಕೆ ಸಲ್ಲಿಸಿದ್ದಾರೆ. ₹ 8 ಸಾವಿರ ಕೋಟಿಯಲ್ಲಿ ಪರಿಷತ್‌ ಸದಸ್ಯರಿಗೂ ಅನುದಾನ ನೀಡುವ ಬಗ್ಗೆ ಪರಿಶೀಲಿಸುವುದಾಗಿ ಆಶ್ವಾಸನೆ ನೀಡಿದ್ದೇನೆ’ ಎಂದರು.

ಬಿ.ಕೆ. ಹರಿಪ್ರಸಾದ್, ನಸೀರ್ ಅಹ್ಮದ್ ಸೇರಿದಂತೆ ಕಾಂಗ್ರೆಸ್‌ನ 28 ವಿಧಾನಪರಿಷತ್ ಸದಸ್ಯರು ಸಭೆಯಲ್ಲಿದ್ದರು.

ಪರಿಷತ್‌ ಸದಸ್ಯರು ತಮ್ಮ ಕ್ಷೇತ್ರಗಳಿಗೆ ಸಂಬಂಧಪಟ್ಟ ಅಹವಾಲುಗಳನ್ನು ಮುಖ್ಮಮಂತ್ರಿಯ ಗಮನಕ್ಕೆ ತಂದಿದ್ದಾರೆ. ಅವರು ಸಮಸ್ಯೆಗಳನ್ನು ಬಗೆಹರಿಸುವ ಆಶ್ವಾಸನೆ ನೀಡಿದ್ದಾರೆ
ಎನ್‌.ಎಸ್‌. ಬೋಸರಾಜು ವಿಧಾನ ಪರಿಷತ್‌ ಸಭಾ ನಾಯಕ
ಅನುದಾನ ಅಭಿವೃದ್ಧಿ ವಿಚಾರಗಳು ಗ್ಯಾರಂಟಿ ಯೋಜನೆಗಳ ಪ್ರಗತಿ ಸೇರಿದಂತೆ ಅನೇಕ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ನಮ್ಮ ಬೇಡಿಕೆಗಳಿಗೆ ಮುಖ್ಯಮಂತ್ರಿ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ 
ಸಲೀಂ ಅಹ್ಮದ್ ವಿಧಾನ ಪರಿಷತ್‌ನ ಸರ್ಕಾರಿ ಮುಖ್ಯ ಸಚೇತಕ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.