ಬೆಂಗಳೂರು: ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರನ್ನು ಪಾಕಿಸ್ತಾನಿ ಎಂದು ನಿಂದಿಸಿರುವ ವಿಧಾನ ಪರಿಷತ್ ಬಿಜೆಪಿ ಸದಸ್ಯ ಎನ್. ರವಿಕುಮಾರ್ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲು ವಿಧಾನ ಪರಿಷತ್‌ನ ಕಾಂಗ್ರೆಸ್ ಸದಸ್ಯರು ನಿರ್ಧರಿಸಿದ್ದಾರೆ.
ಪರಿಷತ್‌ನಲ್ಲಿ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್ ಅವರು ಈ ಕುರಿತು ಮಾತನಾಡಿ, ‘ರವಿಕುಮಾರ್ ಅವರ ಹೇಳಿಕೆಯನ್ನು ನಾವೂ ಖಂಡಿಸುತ್ತೇವೆ. ಪರಿಷತ್‌ನ ಎಲ್ಲ ಕಾಂಗ್ರೆಸ್ ಸದಸ್ಯರು ರಾಜ್ಯಪಾಲರನ್ನು ಗುರುವಾರ ಭೇಟಿ ಮಾಡುತ್ತೇವೆ. ರವಿಕುಮಾರ್ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸುತ್ತೇವೆ’ ಎಂದರು.
‘ರವಿಕುಮಾರ್ ಅವರ ಹೇಳಿಕೆಯನ್ನು ಬಿಜೆಪಿ ನಾಯಕರು ಸಮರ್ಥನೆ ಮಾಡಿಕೊಳ್ಳುತ್ತಾರೆಯೇ, ಇಲ್ಲವೇ ಎಂದೂ ಸ್ಪಷ್ಟಪಡಿಸಬೇಕು’ ಎಂದರು.
‘ಪಕ್ಷದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಜೊತೆ ಪರಿಷತ್‌ನ ಕಾಂಗ್ರೆಸ್ ಸದಸ್ಯರೆಲ್ಲರೂ ಬುಧವಾರ ಚರ್ಚೆ ಮಾಡಿದ್ದೇವೆ. ಸದನದಲ್ಲಿ ಪಕ್ಷದ ಪರವಾಗಿ ಆಕ್ರಮಣಕಾರಿಯಾಗಿ ಮಾತನಾಡುವಂತೆ ವರಿಷ್ಠರು ಸಲಹೆ ನೀಡಿದ್ದಾರೆ’ ಎಂದರು.
ನಗರದ ಪುರಭವನದಲ್ಲಿ ಬುಧವಾರ ನಡೆದ ‘ಜೈ ಹಿಂದ್’ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಂಗಳವಾರ ರಾತ್ರಿಯೇ ನಗರಕ್ಕೆ ಬಂದಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ರಾತ್ರಿಯೇ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಭೇಟಿ ಮಾಡಿ ಚರ್ಚೆ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಭಯ ನಾಯಕರನ್ನೂ ಬುಧವಾರ ಬೆಳಿಗ್ಗೆ ಭೇಟಿ ಮಾಡಿ ಮಾತುಕತೆ ನಡೆಸಿದರು. ಎಐಸಿಸಿ ನಾಯಕರನ್ನು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಪ್ರತ್ಯೇಕವಾಗಿ ಭೇಟಿ ಮಾಡಿ ಚರ್ಚೆ ನಡೆಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.