ADVERTISEMENT

ರಾಹುಲ್‌ ಭೇಟಿಗೆ ಇನ್ನೂ ಸಮಯ ನಿಗದಿಯಾಗಿಲ್ಲ: ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ

ಪೊಲೀಸರ ಭತ್ಯೆ: ಶಿಫಾರಸು ಶೀಘ್ರ ಜಾರಿ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2018, 20:15 IST
Last Updated 14 ಡಿಸೆಂಬರ್ 2018, 20:15 IST
Dr G Parameshwar
Dr G Parameshwar   

ಬೆಳಗಾವಿ: ‘ಭೇಟಿಗೆ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಬಳಿ ಸಮಯ ಕೇಳಿದ್ದೇವೆ. ಆದರೆ, ಅವರು ಇನ್ನೂ ಸಮಯ ನೀಡಿಲ್ಲ’ ಎಂದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ತಿಳಿಸಿದರು.

ಇಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನ ಇದೇ 21ರಂದು ಕೊನೆಯಾಗಲಿದ್ದು, ರಾಹುಲ್‌ ಜೊತೆ ಚರ್ಚಿಸಿ 22ರಂದೇ ರಾಜ್ಯ ಸಚಿವ ಸಂಪುಟ ವಿಸ್ತರಿಸಲು ನಿರ್ಧರಿಸಲಾಗಿತ್ತು. ಆದರೆ, ಪರಮೇಶ್ವರ ನೀಡಿರುವ ಹೇಳಿಕೆ, ಸಂಪುಟ ವಿಸ್ತರಣೆ ಅಂದು ನಡೆಯುವ ಬಗ್ಗೆ ಅನುಮಾನ ಮೂಡಿಸಿದೆ.

‘ಛತ್ತೀಸ್‌ಗಡ, ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಸರ್ಕಾರ ರಚಿಸಲಿದ್ದು. ಅಲ್ಲಿ ರಾಹುಲ್‌ ಬ್ಯುಜಿಯಾಗಿದ್ದಾರೆ. ಅವರು ಸಮಯ ನೀಡಿದರೆ, ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸುತ್ತೇವೆ’ ಎಂದರು.

ADVERTISEMENT

‘ಇದೇ 18ರಂದು ನಡೆಯಲಿರುವ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನೂ ಆಹ್ವಾನಿಸಿದ್ದೇವೆ’ ಎಂದು ತಿಳಿಸಿದರು.

ಕಾಂಗ್ರೆಸ್ ಶಾಸಕರು ರೆಸಾರ್ಟ್‌ಗೆ ಭೇಟಿ ನೀಡಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದಾಗ, ‘ರೆಸಾರ್ಟ್‌ಗೆ ಹೋಗುವುದರಲ್ಲಿ ತಪ್ಪೇನಿದೆ’ ಎಂದು ಮರು ಪ್ರಶ್ನಿಸಿದರು.

ಪೊಲೀಸರ ಭತ್ಯೆ: ಶಿಫಾರಸು ಶೀಘ್ರ ಜಾರಿ

ಪೊಲೀಸ್‌ ಸಿಬ್ಬಂದಿ ವೇತನ ಭತ್ಯೆ ಪರಿಷ್ಕರಣೆ ಬಗ್ಗೆ ಎಡಿಜಿಪಿ ರಾಘವೇಂದ್ರ ಔರಾದಕರ ಅಧ್ಯಕ್ಷತೆಯ ಸಮಿತಿ ವರದಿಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

ಶುಕ್ರವಾರ ವಿಧಾನ ಪರಿಷತ್‌ನಲ್ಲಿ ಎಂ.ಕೆ. ಪ್ರಾಣೇಶ ಅವರು ವರದಿ ಜಾರಿ ಕುಳಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಪ್ರಕ್ರಿಯೆ ಆರಂಭವಾಗಿದೆ. ಹಣಕಾಸು ಇಲಾಖೆಗೆ ಕಳುಹಿಸಲಾಗಿದ್ದು, ಆದಷ್ಟು ಬೇಗನೆ ಜಾರಿಗೊಳಿಸಲಾಗುವುದು ಎಂದರು.

ಮಹಿಳಾ ಸಿಬ್ಬಂದಿಗೆ ಪ್ಯಾಂಟ್–ಶರ್ಟ್‌ ಹಾಕಲು ಸೂಚಿಸಿರುವುದರಿಂದ ಕೆಲ ಸಿಬ್ಬಂದಿಗೆ ಆಗುತ್ತಿರುವ ತೊಂದರೆ ಗಮನಕ್ಕೆ ಬಂದಿದೆ. ವಯೋಮಿತಿ ಆಧಾರದ ಮೇಲೆ ಒಂದಷ್ಟು ರಿಯಾಯಿತಿ ನೀಡುವ ಕುರಿತು ಚಿಂತನೆ ನಡೆದಿದೆ ಎಂದು ಹೇಳಿದರು.

ಸಿವಿಲ್‌, ಡಿಎಆರ್, ಸಿಎಆರ್‌ ನೇಮಕಾತಿಗೆ ಒಂದೇ ಪರೀಕ್ಷೆ ನಡೆಸಬೇಕು. ಒಂದು ವಿಭಾಗದಿಂದ ಮತ್ತೊಂದು ವಿಭಾಗಕ್ಕೆ ವರ್ಗಾವಣೆಗೆ ಅವಕಾಶವಿರಬೇಕು ಎಂದು ಹಲವು ಸದಸ್ಯರು ಹೇಳಿದಾಗ, ಸಿವಿಲ್‌ ಹಾಗೂ ಡಿಎಆರ್ ಹುದ್ದೆಗಳವರ ತರಬೇತಿ, ಕಾರ್ಯ ನಿರ್ವಹಣೆ ಬೇರೆ, ಬೇರೆಯಾಗಿದೆ. ಆದರೂ, ಒಂದೇ ಪರೀಕ್ಷೆ ನಡೆಸುವ ಬಗ್ಗೆ ಚಿಂತನೆ ಮಾಡಲಾಗುವುದು ಎಂದರು.

ಈಗಾಗಲೇ ಕರ್ತವ್ಯ ನಿರ್ವಹಿಸುತ್ತಿರುವವರಿಗಾಗಿ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ. ಹೊಸ ನೇಮಕಾತಿ ಸಂದರ್ಭದಲ್ಲಿ ಒಂದೇ ಪರೀಕ್ಷೆ ಹಾಗೂ ತರಬೇತಿ ಆಯೋಜನೆ ವಿಚಾರ ಪರಿಗಣಿಸಬಹುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.