ADVERTISEMENT

ವಿನಯ್ ಕುಲಕರ್ಣಿ ಪರ ಕಾಂಗ್ರೆಸ್ ಪಕ್ಷ ನಿಲ್ಲಲಿದೆ: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2021, 11:55 IST
Last Updated 23 ಆಗಸ್ಟ್ 2021, 11:55 IST
ವಿನಯ್ ಕುಲಕರ್ಣಿ ಅವರು ಅಫ್ಗಾನಿಸ್ತಾನದಲ್ಲಿನ ಪ್ರಸಕ್ತ ವಿದ್ಯಮಾನಗಳ ಕುರಿತು ಶಿವಕುಮಾರ್‌ ಜೊತೆ ವಿಚಾರ ವಿನಿಮಯ ನಡೆಸಿದರು.
ವಿನಯ್ ಕುಲಕರ್ಣಿ ಅವರು ಅಫ್ಗಾನಿಸ್ತಾನದಲ್ಲಿನ ಪ್ರಸಕ್ತ ವಿದ್ಯಮಾನಗಳ ಕುರಿತು ಶಿವಕುಮಾರ್‌ ಜೊತೆ ವಿಚಾರ ವಿನಿಮಯ ನಡೆಸಿದರು.   

ಬೆಂಗಳೂರು: ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಸೋಮವಾರ ಭೇಟಿ ಮಾಡಿ ಚರ್ಚೆ ನಡೆಸಿದರು.

ಸದಾಶಿವನಗರದಲ್ಲಿರುವ ತಮ್ಮ ಮನೆಗೆ ಬಂದ ವಿನಯ್ ಜೊತೆ ಪ್ರತ್ಯೇಕ ಕೊಠಡಿಯಲ್ಲಿ ಶಿವಕುಮಾರ್‌ ಕೆಲಹೊತ್ತು ಮಾತುಕತೆ ನಡೆಸಿದರು.

ಬಳಿಕ ಮಾತನಾಡಿದ ಶಿವಕುಮಾರ್, ‘ವಿನಯ್ ಕುಲಕರ್ಣಿ ಪಕ್ಷದ ಹಿರಿಯ ನಾಯಕರು. ಅವರ ಪರ ಕಾಂಗ್ರೆಸ್ ಪಕ್ಷ ನಿಲ್ಲಲಿದೆ. ಅವರಿಗೆ ಪಕ್ಷದ ಸಂಪೂರ್ಣ ಬೆಂಬಲವಿದೆ. ನಾವೆಲ್ಲ ಜೊತೆಗೇ ಸಚಿವರಾಗಿ ಕೆಲಸ ಮಾಡಿದ್ದೇವೆ. ಆದರೆ, ಇತ್ತೀಚಿನ ರಾಜಕೀಯದಿಂದ ಅವರು ನೊಂದಿದ್ದಾರೆ’ ಎಂದರು.

ADVERTISEMENT

‘ಜೈಲಿನಲ್ಲಿ ಆಗಿರುವ ನೋವು, ಹೊರಗಡೆ ಆಗಿರುವ ನೋವು ಎಲ್ಲವನ್ನೂ ಅವರು ನನ್ನ ಬಳಿ ಹೇಳಿಕೊಂಡಿದ್ದಾರೆ. ಅವರಿಗೆ ನ್ಯಾಯ ಸಿಗುತ್ತದೆ ಎಂದು ಭಾವಿಸಿದ್ದೇನೆ’ ಎಂದರು.

‘ಮುಂದಿನ ದಿನಗಳಲ್ಲಿ ಅವರು ಪಕ್ಷ ಸಂಘಟನೆಯಲ್ಲಿ ತೊಡುಗುತ್ತಾರೆ. ಅವರು ತಪ್ಪು ಮಾಡಿಲ್ಲ ಎನ್ನುವ ಅರಿವು ಅವರಿಗಿದೆ. ನಮಗೂ ಆ ನಂಬಿಕೆ ಇದೆ. ಕಾನೂನಿನ ಮೇಲೆ ನಂಬಿಕೆಯಿದೆ’ ಎಂದರು.

ಅಫ್ಗಾನ್‌ ವಿದ್ಯಾರ್ಥಿಗಳಿಂದ ಭೇಟಿ: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಬಿಎ ಓದುತ್ತಿರುವ ಅಫ್ಗಾನಿಸ್ತಾನದ ನಾಲ್ವರು ವಿದ್ಯಾರ್ಥಿಗಳು ಶಿವಕುಮಾರ್‌ ಅವರನ್ನು ಭೇಟಿ ಮಾಡಿದರು. ಈ ವಿದ್ಯಾರ್ಥಿಗಳು ಅಫ್ಗಾನಿಸ್ತಾನದಲ್ಲಿನ ಪ್ರಸಕ್ತ ವಿದ್ಯಮಾನಗಳ ಕುರಿತು ಶಿವಕುಮಾರ್‌ ಜೊತೆ ವಿಚಾರ ವಿನಿಮಯ ನಡೆಸಿದರು.

ಬಳಿಕ ಮಾತನಾಡಿದ ಶಿವಕುಮಾರ್‌, ‘ಅಫ್ಗಾನ್ ವಿಧ್ಯಾರ್ಥಿಗಳು ಮಾನಸಿಕವಾಗಿ ಕುಗ್ಗಿದ್ದಾರೆ. ಹೀಗಾಗಿ ಅವರು ನನ್ನನ್ನು ಭೇಟಿ ಮಾಡಿದ್ದರು. ರಾಜ್ಯದಲ್ಲಿ ಎಲ್ಲ ರೀತಿಯ ರಕ್ಷಣೆ ಕೊಡಬೇಕಾಗುತ್ತದೆ. ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದೇನೆ’ ಎಂದರು.

‘ಮಕ್ಕಳು ಎಲ್ಲರೂ ನಮ್ಮ ಮಕ್ಕಳೇ. ಧರ್ಮ ಯಾವುದೇ ಆದರೂ ನಮ್ಮ ಮಕ್ಕಳು. ಮಾನವೀಯತೆ ಮುಖ್ಯವಾಗುತ್ತದೆ‌’ ಎಂದರು.

‘ರಾಹುಲ್ ಗಾಂಧಿ ಹುಚ್ಚ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ‘ಒಬ್ಬ ಹುಚ್ಚ ದಿನ ಸುದ್ದಿಯಲ್ಲಿರಬೇಕು ಎಂದು ಈ ರೀತಿಯ ಹೇಳಿಕೆ ಕೊಡುತ್ತಾನೆ’ ಎಂದು ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.