ಬೆಂಗಳೂರು: ‘ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಕೇಂದ್ರ ಸರ್ಕಾರ ವಾಮ ಮಾರ್ಗ ಅನುಸರಿಸುತ್ತಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಮಾಜಿ ಸಚಿವ ಬಿ.ನಾಗೇಂದ್ರ ಅವರ ಹೆಸರು ಹೇಳುವಂತೆ ನಿಗಮದ ಪದನಿಮಿತ್ತ ನಿರ್ದೇಶಕರಾಗಿದ್ದ ಬಿ. ಕಲ್ಲೇಶ್ ಅವರಿಗೆ ಇ.ಡಿ ಆಧಿಕಾರಿಗಳು ಒತ್ತಾಯಿಸಿರುವುದನ್ನು ಖಂಡಿಸಿ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಮಂಗಳವಾರ ನಡೆದ ಪ್ರತಿಭಟನೆಯ ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದರು.
‘ಈ ಹಗರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಆದರೂ ನನ್ನ ಮತ್ತು ಸರ್ಕಾರದ ವರ್ಚಸ್ಸು ಹಾಳು ಮಾಡಲು ಯತ್ನ ನಡೆಯುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇರಬಾರದು, ದುರ್ಬಲಗೊಳಿಸಬೇಕೆಂದು ಕೇಂದ್ರ ಹುನ್ನಾರ ನಡೆಸುತ್ತಿದೆ’ ಎಂದು ದೂರಿದ ಮುಖ್ಯಮಂತ್ರಿ, ‘ನಿಗಮದಲ್ಲಿ ಅಕ್ರಮ ನಡೆದಿದೆ ಎಂಬ ಕಾರಣಕ್ಕೆ ನಾವು ವಿಶೇಷ ತನಿಖಾ ತಂಡದಿಂದ ತನಿಖೆ ಮಾಡಿಸುತ್ತಿದ್ದೇವೆ. ಆದರೆ, ಕೇಂದ್ರ ಸರ್ಕಾರದ ರಾಜಕೀಯ ಸೇಡು, ದ್ವೇಷದ ನಡೆಯನ್ನು ನಾವು ಖಂಡಿಸುತ್ತೇವೆ’ ಎಂದರು.
‘ಈ ವಿಚಾರವನ್ನು ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನಲ್ಲಿ ಪ್ರಸ್ತಾಪಿಸುತ್ತೇವೆ. ಲೋಕಸಭೆಯಲ್ಲಿಯೂ ಪ್ರಸ್ತಾಪಿಸುವಂತೆ ಹೈಕಮಾಂಡ್ ನಾಯಕರ ಜೊತೆ ಚರ್ಚೆ ನಡೆಸಿದ್ದೇವೆ’ ಎಂದರು.
‘ಇ.ಡಿ ಅಧಿಕಾರಿಗಳು ಕಲ್ಲೇಶ್ ಅವರನ್ನು ಬೆದರಿಸಿ, ಜೀವಭಯ ಉಂಟು ಮಾಡಿ ಅನಗತ್ಯವಾಗಿ ನನ್ನ ಹೆಸರು ಹೇಳುವಂತೆ ಒತ್ತಡ ಹೇರಿದ್ದಾರೆ. ಪ್ರಕರಣದಲ್ಲಿ ಕಾನೂನಿನ ಪ್ರಕಾರ ನನ್ನ ಮೇಲೆ ಆರೋಪ ಬರುವಂತೆ ಮಾಡಲು ಒತ್ತಾಯಿಸಿದ್ದಾರೆ. ಈ ಬಗ್ಗೆ ಕಲ್ಲೇಶ್ ಅವರು ಪೊಲೀಸರಿಗೆ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ’ ಎಂದರು.
‘ಮುಖ್ಯಮಂತ್ರಿ, ಸಚಿವರ ಹೆಸರು ಹೇಳಲು ಇ.ಡಿ ಅಧಿಕಾರಿಗಳು ಒತ್ತಾಯಿಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕವಾದ ನಡೆ. ಪ್ರಜಾಪ್ರಭುತ್ವದಲ್ಲಿ ಯಾವುದೇ ತನಿಖೆಯನ್ನು ಕಾನೂನುಬಾಹಿರವಾಗಿ ಮಾಡುವಂತಿಲ್ಲ. ನಾವು ಕಾನೂನಿನ ಪ್ರಕಾರ ಹೋರಾಟ ಮಾಡಲು ಸಿದ್ಧರಿದ್ದೇವೆ. ಸದನದಿಂದ ಹೊರಗೆ ಹೋರಾಟ ಮಾಡುವ ಬಗ್ಗೆ ಪಕ್ಷದಲ್ಲಿ ಚರ್ಚಿಸಿ ತೀರ್ಮಾನಿಸುತ್ತೇವೆ’ ಎಂದರು.
ಸಚಿವರು, ಕಾಂಗ್ರೆಸ್ ಶಾಸಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
‘ಇ.ಡಿ ವಿರುದ್ಧ ಹೋರಾಟ’
‘ಇ.ಡಿ ಅಧಿಕಾರಿಗಳು ಬಲವಂತವಾಗಿ ಮುಖ್ಯಮಂತ್ರಿ ಮತ್ತು ಸಚಿವರ ಹೆಸರು ಹೇಳುವಂತೆ ನಿಗಮದ ಅಧಿಕಾರಿಗೆ ಬೆದರಿಕೆ ಹಾಕುತ್ತಿದ್ದಾರೆ. ಆ ಮೂಲಕ ಮುಖ್ಯಮಂತ್ರಿಯ ಹೆಸರಿಗೆ ಮಸಿ ಬಳಿದು ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನವನ್ನು ನಡೆಯುತ್ತಿದ್ದು ಇದನ್ನು ಖಂಡಿಸುತ್ತೇವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ‘ಕರ್ನಾಟಕ ರಾಜ್ಯದಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯನ್ನು ಗುರಿಯಾಗಿಸಿ ನೇರವಾಗಿ ದಾಳಿ ಮಾಡುವ ಸಂಚು ನಡೆಯುತ್ತಿದೆ. ಈ ಹಿಂದೆ ಬೇರೆ ರಾಜ್ಯಗಳಲ್ಲಿ ಇಂತಹ ಘಟನೆಗಳು ನಡೆದಿದ್ದವು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.