ಬೆಂಗಳೂರು: 'ಕೇಂದ್ರದ ಬಿಜೆಪಿ ಸರ್ಕಾರ ಮತ ಕಳ್ಳತನದಲ್ಲಿ ತೊಡಗಿದೆ' ಎಂದು ಆರೋಪಿಸಿ ಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ವತಿಯಿಂದ ಇಂದಿರಾ ಗಾಂಧಿ ವೃತ್ತದಲ್ಲಿ ಸಹಿ ಸಂಗ್ರಹ, ಜನಜಾಗೃತಿ ಅಭಿಯಾನ ನಡೆಯಿತು.
ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ತ ಮತ್ತು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರಾದ ಸೌಮ್ಯ ರೆಡ್ಡಿ ಅವರು ಸಹಿ ಹಾಕುವ ಮೂಲಕ ಜನಜಾಗೃತಿ ಮತ್ತು ಸಹಿ ಸಂಗ್ರಹಕ್ಕೆ ಚಾಲನೆ ನೀಡಿದರು.
ಸೌಮ್ಯ ರೆಡ್ಡಿ ಮಾತನಾಡಿ, 'ಪ್ರಜಾಪ್ರಭುತ್ವದಲ್ಲಿ ಸಂವಿಧಾನ ಮತದಾನದ ಹಕ್ಕು ನೀಡಿದೆ, ಈ ಹಕ್ಕನ್ನು ವಂಚಿಸುವ ಕೆಲಸವಾಗುತ್ತಿದೆ. ಸಣ್ಣ ಮನೆಯಲ್ಲಿ 80ಕ್ಕೂ ಹೆಚ್ಚು ಮತದಾರರು ಇರುವುದು, ಒಬ್ಬ ವ್ಯಕ್ತಿಯ ಹೆಸರು ಹಲವು ಮತಗಟ್ಟೆಯಲ್ಲಿ ಇರುವುದು ಪತ್ತೆಯಾಗಿದೆ' ಎಂದರು.
'2023ರಲ್ಲಿ ನಡೆದ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ನಡೆದ ಘಟನೆ ಇಡೀ ರಾಜ್ಯಕ್ಕೆ ಗೊತ್ತಿದೆ' ಎಂದ ಅವರು, 'ಪ್ರತಿಯೊಬ್ಬ ಪ್ರಜೆಗೂ ಮತದಾನ ಮಾಡುವ ಹಕ್ಕು ಇದೆ. ಇದರ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ' ಎಂದರು.
ಅಭಿಷೇಕ್ ದತ್ತ ಅವರು ಮಾತನಾಡಿ, 'ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸಲು, ಮತ ಕಳ್ಳತನ ವಿರುದ್ದ ರಾಹುಲ್ ಗಾಂಧಿ ಅವರು ದೇಶದಾದ್ಯಂತ ಹೋರಾಟ ಮಾಡುತ್ತಿದ್ದಾರೆ. ಮಹದೇವಪುರ ಕ್ಷೇತ್ರದಲ್ಲಿ ಬಿಜೆಪಿಯು ಷಡ್ಯಂತ್ರದಿಂದ ಮತ ಕಳ್ಳತನ ಮಾಡಿದೆ' ಎಂದು ದೂರಿದರು.
'ಮತದಾರ ಪಟ್ಟಿಯಿಂದ ತೆಗೆದು ಹಾಕಿದ ಮತ್ತು ಸೇರ್ಪಡೆ ಮಾಡಿದ ಪಟ್ಟಿಯನ್ನು ಚುನಾವಣೆ ಆಯೋಗ ನೀಡುತ್ತಿಲ್ಲ' ಎಂದರು.
ಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಅಭಿಯಾನದಲ್ಲಿ ಭಾಗವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.