
ಬೆಂಗಳೂರು: ಸ್ಮಶಾನಗಳಲ್ಲಿ ಕೆಲಸ ಮಾಡುವ 147 ಕಾರ್ಮಿಕರಿಗೆ ಎಂಟು ತಿಂಗಳಿನಿಂದ ವೇತನ ನೀಡದೆ ಸರ್ಕಾರ ವಂಚನೆ ಮಾಡುತ್ತಿದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ದೂರಿದರು.
ಸುದ್ದಿಗಾರರ ಜತೆ ಬುಧವಾರ ಮಾತನಾಡಿದ ಅವರು, ‘ದುಬಾರಿ ಹಣ ಖರ್ಚು ಮಾಡಿ ಸುರಂಗ ಮಾರ್ಗ ಮಾಡಲು ಮುಂದಾಗಿರುವ ಕಾಂಗ್ರೆಸ್ ಆಡಳಿತ ಕಾರ್ಮಿಕರಿಗೆ ವೇತನ ನೀಡಿಲ್ಲ. ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಕ್ಷಣ ಬಾಕಿ ವೇತನ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.
‘ಬಿಹಾರ ಚುನಾವಣೆಗೆ ಹಣ ಕಳಿಸಲು ಔತಣಕೂಟ, ಉಪಹಾರದ ನೆಪದಲ್ಲಿ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಅದಕ್ಕೆ ಶಾಸಕ ಕೆ.ಎನ್.ರಾಜಣ್ಣ, ಕಾಂಗ್ರೆಸ್ ಕಚೇರಿಗೆ ದೊಡ್ಡ ಬೀಗ ಹಾಕಬೇಕು ಎಂದಿದ್ದಾರೆ. ಕಾಂಗ್ರೆಸ್ ಕಚೇರಿಗೆ ಬೀಗ ಹಾಕುವುದೇ ಆದರೆ ಏಳು ಲೀವರ್‌ಗಳ ನವತಾಳ್ ಬೀಗವನ್ನೇ ಹಾಕಿ, ಯಾರೂ ತೆಗೆಯಲು ಆಗಬಾರದು’ ಎಂದರು.
ಒಂದೇ ಒಂದು ರಸ್ತೆ ಗುಂಡಿ ಮುಚ್ಚಲು ದುಡ್ಡಿಲ್ಲ, ಪಾಲಿಕೆ ಶಾಲೆಗಳ ಶಿಕ್ಷಕರಿಗೆ 6 ತಿಂಗಳಿಂದ ವೇತನ ಕೊಟ್ಟಿಲ್ಲ, ಬೆಂಗಳೂರಿನ ಜನ ಕಟ್ಟುತ್ತಿರುವ ಸಾವಿರಾರು ಕೋಟಿ ರೂಪಾಯಿ ತೆರಿಗೆ ಹಣ ಎಲ್ಲಿ?-ಆರ್.ಅಶೋಕ, ವಿಧಾನಸಭೆ ವಿರೋಧ ಪಕ್ಷದ ನಾಯಕ
ಗುತ್ತಿಗೆ ಕೆಲಸ ಮಾಡಿ ಬಂಡವಾಳ ಹಾಕಿದವರು ಬೀದಿಗೆ ಬಂದಿದ್ದಾರೆ. ಸಾಲ ಸೋಲ ಮಾಡಿ ಕೆಲಸ ಮಾಡಿದ ಸಣ್ಣ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ