ADVERTISEMENT

ಮತ ಕಳವು | ಸಚಿವರಿಗೆ 2 ಲಕ್ಷ ಸಹಿ ಸಂಗ್ರಹ ಗುರಿ: ‘ಕೈ’ ವರಿಷ್ಠರ ಸೂಚನೆ

‘ಮತ ಕಳವು’ ಆರೋಪಿಸಿ ಅಭಿಯಾನ *

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 15:39 IST
Last Updated 19 ಅಕ್ಟೋಬರ್ 2025, 15:39 IST
ಡಿ.ಕೆ. ಶಿವಕುಮಾರ್‌
ಡಿ.ಕೆ. ಶಿವಕುಮಾರ್‌   

ಬೆಂಗಳೂರು: ‘ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ‘ಮತ ಕಳವು’ ನಡೆಸುತ್ತಿದೆ ಎಂದ ಆರೋಪಿಸಿ ಆರಂಭಿಸಿರುವ ‘ವೋಟ್ ಚೋರ್ ಗದ್ದಿ ಚೋಡ್’ ಅಭಿಯಾನದ ಅಂಗವಾಗಿ ತಮ್ಮ ವಿಧಾನಸಭಾ ಕ್ಷೇತ್ರ ಅಥವಾ ಜಿಲ್ಲೆಯಲ್ಲಿ ಕನಿಷ್ಠ ಎರಡು ಲಕ್ಷ ಸಹಿ ಸಂಗ್ರಹಿಸಿ ಇದೇ 24ರ ಒಳಗೆ ಖುದ್ದಾಗಿ ಕೆಪಿಸಿಸಿಗೆ ಸಲ್ಲಿಸಬೇಕು’ ಎಂದು ಎಲ್ಲ ಸಚಿವರಿಗೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೂಚನೆ ನೀಡಿದ್ದಾರೆ.

ಈ ಬಗ್ಗೆ ಎಲ್ಲ ಸಚಿವರಿಗೆ ಪತ್ರ ಬರೆದಿರುವ ಶಿವಕುಮಾರ್, ‘ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಥವಾ ಬ್ಲಾಕ್‌ ಕಾಂಗ್ರೆಸ್‌ ಸಮಿತಿಯ ಮೂಲಕ ನಡೆದ ಸಹಿ ಸಂಗ್ರಹವನ್ನು ಹೊರತುಪಡಿಸಿ ವೈಯಕ್ತಿಕವಾಗಿ 2 ಲಕ್ಷ ಸಹಿ ಸಂಗ್ರಹಿಸಬೇಕು. ಎಐಸಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ಈ ಸೂಚನೆ ನೀಡಿದ್ದಾರೆ’ ಎಂದೂ ಹೇಳಿದ್ದಾರೆ.

‘ಈ ಅಭಿಯಾನದ ಮೂಲಕ ಅತೀ ಹೆಚ್ಚು ಸಹಿ ಸಂಗ್ರಹಿಸುವಂತೆ ಕರ್ನಾಟಕ ರಾಜ್ಯಕ್ಕೆ ಪಕ್ಷದ ವರಿಷ್ಠರು ಗುರಿ ನೀಡಿದ್ದಾರೆ. ಆದ್ದರಿಂದ, ಎಲ್ಲ ಸಚಿವರು ಈ ಬಗ್ಗೆ ವೈಯಕ್ತಿಕವಾಗಿ ಆಸಕ್ತಿ ತೆಗೆದುಕೊಂಡು ಈ ಕೆಲಸ ಮಾಡಬೇಕು. ಪ್ರತಿನಿತ್ಯ ಸಂಗ್ರಹವಾಗುತ್ತಿರುವ ಸಹಿಗಳ ಸಂಖ್ಯೆಯ ಬಗ್ಗೆಯೂ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ನಿತ್ಯ ವರದಿ ಕೇಳುತ್ತಿದ್ದಾರೆ. ಹೀಗಾಗಿ, ಆಯಾ ದಿನ ಸಂಗ್ರಹಿಸುವ ಸಹಿಗಳ ವಿವರವನ್ನೂ ಕೆಪಿಸಿಸಿಗೆ ನೀಡಬೇಕು’ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.