ಶೋಭಾ ಕರಂದ್ಲಾಜೆ
ಬೀದರ್: ‘ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಫಲರಾದಾಗಲೆಲ್ಲಾ ಜಾತಿ ಅಸ್ತ್ರ ಬಳಸುತ್ತಾರೆ’ ಎಂದು ಕೇಂದ್ರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಟೀಕಿಸಿದರು.
ಈ ಹಿಂದೆ ಸಿದ್ದರಾಮಯ್ಯನವರು ಲಿಂಗಾಯತರು–ವೀರಶೈವರನ್ನು ಒಡೆಯುವ ಕೆಲಸ ಮಾಡಿದ್ದರು. ಅದನ್ನು ಹಳ್ಳಿಗಳ ತನಕ ವಿಸ್ತರಣೆ ಮಾಡಿದ್ದರು. ಈಗ ಪುನಃ ಎಲ್ಲಾ ಜಾತಿಗಳನ್ನು ಒಡೆಯಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಒಕ್ಕಲಿಗರು ಮತ್ತು ಲಿಂಗಾಯತರಲ್ಲಿ ಬೇರೆ ಬೇರೆ ಪಂಗಡಗಳಿವೆ. ಆದರೆ, ಹೊಸದಾಗಿ ಒಕ್ಕಲಿಗ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್, ಗಾಣಿಗ ಕ್ರಿಶ್ಚಿಯನ್, ವೀರಶೈವ ಕ್ರಿಶ್ಚಿಯನ್, ನೇಕಾರ ಕ್ರಿಶ್ಚಿಯನ್ ಎಲ್ಲಿಂದ ಬಂದರು? ಇವರ ಮೂಲಕ ನಮ್ಮ ಮೀಸಲಾತಿ ಕಿತ್ತುಕೊಳ್ಳಲು ಸಿದ್ದರಾಮಯ್ಯ ಹುನ್ನಾರ ನಡೆಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಹಿಂದೂ ಸಮಾಜದವರು ಜಾತಿ, ಧರ್ಮವನ್ನು ಬಿಟ್ಟು ಒಟ್ಟಾಗುವ ಕಾಲ ಬಂದಿದೆ. ಇಲ್ಲದಿದ್ದರೆ ನಮ್ಮನ್ನು ವಿಂಗಡಿಸುತ್ತ ಹೋಗುತ್ತಾರೆ. ಬ್ರಿಟಿಷರಿಗೆ ಯಾವ ರೀತಿಯ ಮನಃಸ್ಥಿತಿ ಇತ್ತೋ ಅದೇ ಮನಃಸ್ಥಿತಿ ಸಿದ್ದರಾಮಯ್ಯನವರ ಸರ್ಕಾರ ಹೊಂದಿದೆ. ಶಿವಾಜಿ ನಗರ ಮೆಟ್ರೊ ನಿಲ್ದಾಣದ ಹೆಸರು ಬದಲಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.