ADVERTISEMENT

ಬಿಜೆಪಿಯ ದಲಿತ ಕಾಳಜಿ ಪ್ರಶ್ನೆ ಮಾಡಿದ ಕಾಂಗ್ರೆಸ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ನವೆಂಬರ್ 2020, 7:39 IST
Last Updated 17 ನವೆಂಬರ್ 2020, 7:39 IST
ಕಾಂಗ್ರೆಸ್‌
ಕಾಂಗ್ರೆಸ್‌    

ಬೆಂಗಳೂರು: 'ಒಬ್ಬ ದಲಿತ ಶಾಸಕನಿಗೆ ಕಾಂಗ್ರೆಸ್‌ನಲ್ಲಿ ಬೆಲೆ ಇಲ್ಲವೇ,' ಎಂಬ ಬಿಜೆಪಿ ಪ್ರಶ್ನೆಗೆ ಕಾಂಗ್ರೆಸ್‌ ತಿರುಗೇಟು ನೀಡಿದೆ. ಹಲವು ಪ್ರಸಂಗಗಳನ್ನು ನೆನಪಿಸುವ ಮೂಲಕ ಬಿಜೆಪಿಯ ದಲಿತ ಕಾಳಜಿಯನ್ನು ಕಾಂಗ್ರೆಸ್‌ ಪ್ರಶ್ನೆ ಮಾಡಿದೆ.

ಈ ಕುರಿತು ಟ್ವೀಟ್‌ ಮಂಗಳವಾರ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, 'ಅನಂತ್ ಕುಮಾರ್ ಅವರು 'ಬೀದಿ ನಾಯಿಗಳು' ಎಂದು ಹೇಳಿದಾಗ, ಸಿದ್ದು ಸವದಿ ದಲಿತ ಮಹಿಳೆಯ ಮೇಲೆ ಹಲ್ಲೆ ಮಾಡಿದಾಗ, ಸಂವಿಧಾನ ರಚನೆಯ ಕೈಪಿಡಿಯಲ್ಲಿ ಅಂಬೇಡ್ಕರ್ ಹೆಸರನ್ನು ಮರೆಮಾಚಿದಾಗ, ಬಿಜೆಪಿಯ ದಲಿತಪರ ಕಾಳಜಿ ಮರೆತು ಹೋಗಿತ್ತು. ಈಗ ಇದ್ದಕ್ಕಿದ್ದಂತೆ ದಲಿತರು ಎನ್ನುವ ಮೂಲಕ ರಾಜಕೀಯಕ್ಕೆ ಮುಂದಾಗಬೇಡಿ. ನಿಮ್ಮ ಬಣ್ಣ ಬಯಲಾಗುತ್ತದೆ,' ಎಂದು ಹೇಳಿದೆ.

ಇದಕ್ಕೂ ಮೊದಲು ಟ್ವೀಟ್‌ ಮಾಡಿದ್ದ ಬಿಜೆಪಿ 'ಸಂಪತ್‌ ರಾಜ್‌ ಬಂಧನವಾದ ನಂತರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ತಮ್ಮ ಪರವಾಗಿ ನಿಲ್ಲುವಂತೆ ಪಕ್ಷದ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ. ಏನಾಗುತ್ತಿದೆ ಕಾಂಗ್ರೆಸ್‌? ಒಬ್ಬ ದಲಿತ ಶಾಸಕನಿಗೆ ನಿಮ್ಮ ಪಕ್ಷದಲ್ಲಿ ಬೆಲೆ ಇಲ್ಲವೇ?' ಎಂದು ಪ್ರಶ್ನೆ ಮಾಡಿತ್ತು.
ಅಲ್ಲದೆ, ದಲಿತ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಪರಮೇಶ್ವರ್‌ ಅವರ ಸೋಲಿನ ಹಿಂದೆ ಕಾಂಗ್ರೆಸ್‌ನ ದಲಿತ ವಿರೋಧಿ ನೀತಿ ಇದೆ,' ಎಂದೂ ಬಿಜೆಪಿ ಆರೋಪಿಸಿತ್ತು.

'ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಕಾಲದಿಂದಲೇ ಕಾಂಗ್ರೆಸ್‌ ದಲಿತರ ವಿರೋಧಿ ನಿಲುವುಗಳನ್ನು ತೆಗೆದುಕೊಳ್ಳುತ್ತಿದೆ. ರಾಜ್ಯದಲ್ಲೂ ಅದರ ಮುಂದುವರೆದ ಭಾಗಗಳನ್ನು‌ ಸಿದ್ದರಾಮಯ್ಯ ಮಾಡಿ ತೋರಿಸಿದ್ದಾರೆ‌. ಹಿರಿಯ ದಲಿತ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಪರಮೇಶ್ವರ್ ಅವರ ಸೋಲುಗಳ ಹಿಂದೆ ಕಾಂಗ್ರೆಸ್ಸಿನ ದಲಿತ ವಿರೋಧಿ ನೀತಿಯಿದೆ,' ಎಂದು ಅದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.