ADVERTISEMENT

ಹಣ ಇಲ್ಲದವರಿಗೆ ಲಸಿಕೆ ಇಲ್ಲವೆ: ಕೇಂದ್ರ, ರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2021, 16:07 IST
Last Updated 4 ಜೂನ್ 2021, 16:07 IST
   

ಬೆಂಗಳೂರು: ‘ಹಣ ಇಲ್ಲದ ಬಡವರಿಗೆ ರಾಜ್ಯದಲ್ಲಿ ಕೋವಿಡ್‌ ಲಸಿಕೆ ಇಲ್ಲವೆ? ಅವರಿಗೆ ಆರೋಗ್ಯದ ರಕ್ಷಣೆ ಇಲ್ಲವೆ’ ಎಂದು ಕಾಂಗ್ರೆಸ್‌ ಶಾಸಕರಾದ ಕೃಷ್ಣ ಬೈರೇಗೌಡ ಮತ್ತು ರಿಜ್ವಾನ್‌ ಅರ್ಷದ್‌ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಪ್ರಶ್ನಿಸಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂವಿಧಾನದ ಪ್ರಕಾರ ಜೀವಿಸುವ ಹಕ್ಕು ಎಲ್ಲ ಭಾರತೀಯರಿಗೂ ಇದೆ. ಕೋವಿಡ್‌ನಿಂದ ರಕ್ಷಣೆ ಪಡೆಯಲು ಲಸಿಕೆ ಹಾಕಿಸಿಕೊಳ್ಳುವುದೊಂದೇ ಪರಿಹಾರ ಎಂದು ವಿಜ್ಞಾನಿಗಳು, ವೈದ್ಯರು ಖಚಿತಪಡಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ರಾಣ ರಕ್ಷಣೆಯ ಸಾಧನವಾಗಿರುವ ಕೋವಿಡ್‌ ಲಸಿಕೆಯನ್ನು ಹಣ ಕೊಟ್ಟವರಿಗೆ ಮಾತ್ರ ವಿತರಿಸುವುದು ಸರಿಯೆ’ ಎಂದರು ಪ್ರಶ್ನಿಸಿದರು.

ಹಣ ಇಲ್ಲದವರಿಗೆ ಲಸಿಕೆ ಇಲ್ಲ ಎಂದಾದರೆ ಸಂವಿಧಾನದಲ್ಲಿನ ಭರವಸೆಗೆ ಅರ್ಥ ಇದೆಯೆ? ಬಡವನಿಗೆ ಪ್ರಾಣ ಉಳಿಸಿಕೊಳ್ಳುವ ಅವಕಾಶ ಇದೆಯ? ಬಡ ಕುಟುಂಬಗಳ ಜನರು ಸಾವಿರಾರು ರೂಪಾಯಿ ಹಣ ನೀಡಿ ಲಸಿಕೆ ಖರೀದಿಸಲು ಸಾಧ್ಯವೆ ಎಂದು ಕೃಷ್ಣ ಬೈರೇಗೌಡ ಕೇಳಿದರು.

ADVERTISEMENT

ಕೈ ಚಾಚುವ ಸ್ಥಿತಿ: ‘ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಇಲ್ಲ. ಆದರೆ, ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಮಾರಾಟಕ್ಕೆ ಲಭ್ಯವಿದೆ. ಜನರು ಕೋವಿಡ್‌ ಲಸಿಕೆಗೆ ಬೇಡಿಕೆ ಇಡುವುದನ್ನು ತಪ್ಪಿಸಲು ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಮಾಧ್ಯಮಗಳ ಮೂಲಕ ಲಸಿಕೆ ಕುರಿತು ಅಪಪ್ರಚಾರ ನಡೆಸುತ್ತಿದ್ದಾರೆ’ ಎಂದು ರಿಜ್ವಾನ್‌ ಅರ್ಷದ್‌ ಟೀಕಿಸಿದರು.

ಲಸಿಕೆ ವಿತರಣೆ ಇಳಿಕೆ
ಏಪ್ರಿಲ್‌ನಲ್ಲಿ ದಿನವೊಂದಕ್ಕೆ ಸರಾಸರಿ 30,24,362 ಡೋಸ್‌ ಲಸಿಕೆ ವಿತರಿಸಲಾಗುತ್ತಿತ್ತು. ಮೇ ತಿಂಗಳಿನಲ್ಲಿ ಇದು ದುಪ್ಪಟ್ಟಾಗಬೇಕಿತ್ತು. ಆದರೆ, ಪ್ರತಿದಿನ ಸರಾಸರಿ 16,22,077 ಡೋಸ್‌ ಲಸಿಕೆ ಮಾತ್ರ ನೀಡಲಾಗಿದೆ ಎಂದು ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.

ಏಪ್ರಿಲ್‌ ತಿಂಗಳಿನಲ್ಲಿ ರಾಜ್ಯಕ್ಕೆ 7.75 ಕೋಟಿ ಡೋಸ್‌ ಲಸಿಕೆ ಪೂರೈಕೆಯಾಗಿದೆ. ಮೇ ತಿಂಗಳಿನಲ್ಲಿ 5.53 ಲಕ್ಷ ಡೋಸ್‌ ಮಾತ್ರ ಪೂರೈಕೆಯಾಗಿದೆ. ದಿನ ಕಳೆದಂತೆ ಲಸಿಕೆ ಪೂರೈಕೆ ಕುಸಿದಿದೆ. ತಮ್ಮ ಕ್ಷೇತ್ರದಲ್ಲಿ ಮೂರು ದಿನಗಳಿಂದ ಲಸಿಕೆ ಪೂರೈಕೆಯೇ ಆಗಿಲ್ಲ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.