ADVERTISEMENT

ಸರ್ಕಾರ ನಡೆಸುತ್ತಿಲ್ಲ, ಮ್ಯಾನೇಜ್ ಮಾಡುತ್ತಿದ್ದೇವೆ ಎಂದ ಮಾಧುಸ್ವಾಮಿ: ಕಾಂಗ್ರೆಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಆಗಸ್ಟ್ 2022, 13:19 IST
Last Updated 13 ಆಗಸ್ಟ್ 2022, 13:19 IST
   

ಬೆಂಗಳೂರು: ನಾವು ಸರ್ಕಾರ ನಡೆಸುತ್ತಿಲ್ಲ. ಮ್ಯಾನೇಜ್‌ಮೆಂಟ್‌ ಮಾಡುತ್ತಿದ್ದೇವೆ ಅಷ್ಟೇ ಎನ್ನುವ ಮೂಲಕ ಸಚಿವಜೆ.ಸಿ ಮಾಧುಸ್ವಾಮಿ ಅವರು ಬಿಜೆಪಿ ಸರ್ಕಾರದ ನಿಷ್ಕ್ರಿಯತೆಯನ್ನು ಒಪ್ಪಿಕೊಂಡಿದ್ದಾರೆ ಎಂದು ಕಾಂಗ್ರೆಸ್‌ ಟೀಕಿಸಿದೆ.

ಸಹಕಾರಿ ಬ್ಯಾಂಕ್‌ಗಳಲ್ಲಿ ನಡೆಯುತ್ತಿರುವ ಅವ್ಯವಹಾರದ ಕುರಿತು ಸಾಮಾಜಿಕ ಕಾರ್ಯಕರ್ತರೊಬ್ಬರು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ ಮಾಧುಸ್ವಾಮಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ ಎನ್ನಲಾದ ಸಂಭಾಷಣೆಯನ್ನು ಕಾಂಗ್ರೆಸ್‌ ತನ್ನ ಟ್ವಿಟರ್ ಪುಟದಲ್ಲಿ ಹಂಚಿಕೊಂಡಿದೆ.

ಸಂಭಾಷಣೆ ವೇಳೆ, ಬ್ಯಾಂಕ್‌ಗಳಲ್ಲಿ ರೈತರ ಸಾಲದ ವಿಚಾರವಾಗಿ ನಡೆಯುತ್ತಿರುವ ಅವ್ಯವಹಾರಗಳ ಕುರಿತುಮಾಹಿತಿ ನೀಡುವ ಸಾಮಾಜಿಕ ಕಾರ್ಯಕರ್ತ, ಕ್ರಮ ಕೈಗೊಳ್ಳುವಂತೆ ಮನವಿ ಮಾಡುತ್ತಾರೆ. ಇದಕ್ಕೆ ಪ್ರತಿಕ್ರಿಯಿಸುವ ಸಚಿವರು, ಇವೆಲ್ಲವೂ ನನಗೆ ಗೊತ್ತು. ಇದನ್ನೆಲ್ಲ ಸಚಿವ ಸೋಮಶೇಖರ್‌ ಅವರ ಗಮನಕ್ಕೆ ತಂದಿದ್ದೇವೆ. ಅವರು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಏನು ಮಾಡೋದು? ಎಂದು ಅಸಹಾಯಕವಾಗಿ ಕೇಳಿರುವುದು ಆಡಿಯೊದಲ್ಲಿ ದಾಖಲಾಗಿದೆ.

ADVERTISEMENT

ಮುಂದುವರಿದು, ಬ್ಯಾಂಕಿನವರಿಗೆ ರೈತರಷ್ಟೇ ಅಲ್ಲ. ನಾನೂ ಹಣ ಕಟ್ಟಿದ್ದೇನೆ. ಸರ್ಕಾರ ನಡೆಯುತ್ತಿಲ್ಲ. ಮ್ಯಾನೇಜ್‌ಮೆಂಟ್‌ ಮಾಡುತ್ತಿದ್ದೇವೆ ಅಷ್ಟೆ. ತಳ್ಳಿದರೆ ಸಾಕು ಇನ್ನೆಂಟು ತಿಂಗಳು ಎಂದು ತಳ್ತಾ ಇದೀವಿ ಅಷ್ಟೇಎಂದೂ ಹೇಳಿದ್ದಾರೆ.

ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್‌, 'ಬಿಜೆಪಿಸರ್ಕಾರದ ನಿಷ್ಕ್ರಿಯತೆ, ಸಚಿವರುಗಳ ಅಸಾಮರ್ಥ್ಯ, ರೈತರಿಗೆ ಎಸಗುತ್ತಿರುವ ಅನ್ಯಾಯಗಳು ಸಚಿವ ಮಾಧುಸ್ವಾಮಿಯವರಿಂದ ಬಯಲಾಗಿದೆ.ಬಿಜೆಪಿ ಸರ್ಕಾರದಲ್ಲಿ ನಡೆಯುತ್ತಿರುವುದು ಭ್ರಷ್ಟಾಚಾರದ ಮ್ಯಾನೇಜ್ಮೆಂಟ್ ಮಾತ್ರ. ಬಸವರಾಜ ಬೊಮ್ಮಾಯಿಅವರ ನಿಷ್ಕ್ರಿಯ ಆಡಳಿತಕ್ಕೆ, ರೈತರಿಗಾಗುತ್ತಿರುವ ಅನ್ಯಾಯಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೇ? ಎಂದು ಪ್ರಶ್ನಿಸಿದೆ.

ಮತ್ತೊಂದು ಟ್ವೀಟ್‌ನಲ್ಲಿ,'ತಳ್ಳಿದರೆ ಸಾಕು ಇನ್ನೆಂಟು ತಿಂಗಳು ಅಂತ ತಳ್ತಾ ಇದೀವಿ ಅಷ್ಟೇ' ಎಂಬುದು ಸಚಿವ ಮಾಧುಸ್ವಾಮಿಯವರ ಅಸಹಾಯಕತೆಯೋ, ತಮ್ಮದೇ ಸರ್ಕಾರದ ವಿರುದ್ದದ ಆರೋಪವೋ? ಬಸವರಾಜ ಬೊಮ್ಮಾಯಿ ಅವರಅಡಳಿತದ ವಿರುದ್ಧ ಅಸಮಾಧಾನವೊ?ಕೆಟ್ಟು ನಿಂತಿರುವ 'ಡಬಲ್ ಇಂಜಿನ್' ಸರ್ಕಾರವು ತಳ್ಳಿಕೊಂಡು ಹೋಗುವ ದೈನೇಸಿ ಸ್ಥಿತಿಗೆ ಬಂದಿರುವುದು ದುರಂತ! ಎಂದು ತಿವಿದಿದೆ.

'ರೈತರಿಗೆ ಅಷ್ಟೇ ಅಲ್ಲ, ಸ್ವತಃ ಕಾನೂನು ಸಚಿವರಿಗೆ ಸಹಕಾರಿ ಬ್ಯಾಂಕುಗಳಲ್ಲಿ ವಂಚನೆಯಾಗುತ್ತಿರುವುದು ಸರ್ಕಾರದ ದುರಾಡಳಿತಕ್ಕೆ ಹಿಡಿದ ಕನ್ನಡಿ.ಸಹೋದ್ಯೋಗಿ ಸಚಿವರಿಂದಲೇ ಮಾಹಿತಿ ಸಿಕ್ಕರೂ ಲೋಪ ಸರಿಪಡಿಸದ ಸಹಕಾರಿ ಸಚಿವರಿಂದ ರೈತರಿಗೆ ಇನ್ಯಾವ ನ್ಯಾಯ ಸಿಗಬಲ್ಲದು?ಟೇಕಾಫ್ ಆಗದ ಬಿಜೆಪಿ ಸರ್ಕಾರದ ಡಬಲ್ ಇಂಜಿನ್‌ ಅನ್ನು ಈಗ ತಳ್ಳಲಾಗುತ್ತಿದೆ!' ಎಂದು ವ್ಯಂಗ್ಯವಾಡಿದೆ.

224 ಸದಸ್ಯ ಬಲದ ರಾಜ್ಯ ವಿಧಾನಸಭೆಗೆ ಮುಂದಿನ ವರ್ಷ ಚುನಾವಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.