ADVERTISEMENT

ತಳಮಟ್ಟದಲ್ಲಿ ಪುನರುಜ್ಜೀವನಕ್ಕೆ ‘ಕೈ’ ಕಾರ್ಯಸೂಚಿ : ಇಂದಿನಿಂದ ಎಐಸಿಸಿ ಅಧಿವೇಶನ

ಪಿಟಿಐ
Published 7 ಏಪ್ರಿಲ್ 2025, 20:02 IST
Last Updated 7 ಏಪ್ರಿಲ್ 2025, 20:02 IST
   

ನವದೆಹಲಿ: ಕಾಂಗ್ರೆಸ್‌ನ ಉನ್ನತ ನಾಯಕರು ಇದೇ 8 ಹಾಗೂ 9ರಂದು ಅಹಮದಾಬಾದ್‌ನಲ್ಲಿ ಒಗ್ಗೂಡಿ ರಾಷ್ಟ್ರೀಯ ರಾಜಕೀಯ ಸವಾಲುಗಳು ಹಾಗೂ ಪ್ರಮುಖ ವಿಷಯಗಳನ್ನು ಚರ್ಚಿಸಲಿದ್ದಾರೆ. ಸತತ ಸೋಲಿನಿಂದ ಕಂಗೆಟ್ಟಿರುವ  ಪಕ್ಷವನ್ನು ಪುನರುಜ್ಜೀವನಗೊಳಿಸಲು ತಳಮಟ್ಟದಲ್ಲಿ ಸಾಂಸ್ಥಿಕ ಬಲವರ್ಧನೆಗೆ ಮಾರ್ಗಸೂಚಿ ರೂಪಿಸಲಿದ್ದಾರೆ. 

ಬಿಜೆಪಿ ವಿರುದ್ಧ ಹೋರಾಟಕ್ಕೆ ಪಕ್ಷದ ಜಿಲ್ಲಾ ಘಟಕಗಳಿಗೆ ಹೆಚ್ಚಿನ ಅಧಿಕಾರ ನೀಡಿ ಪುನರುಜ್ಜೀವನಕ್ಕೆ ಭದ್ರ ಬುನಾದಿ ಹಾಕುವ ಆಶಯದಿಂದ ಎರಡು ದಿನಗಳ ಎಐಸಿಸಿ ಅಧಿವೇಶನಕ್ಕೆ ಮಂಗಳವಾರ ಚಾಲನೆ ಸಿಗಲಿದೆ. ದೇಶ ಹಾಗೂ ರಾಜ್ಯಗಳು ಎದುರಿಸುತ್ತಿರುವ ಸವಾಲುಗಳ ಕುರಿತು ಚರ್ಚಿಸಿ, 2025ಕ್ಕೆ ಪಕ್ಷದ ಕಾರ್ಯಸೂಚಿಯನ್ನು ರೂಪಿಸಲು ‘ನ್ಯಾಯದ ಹಾದಿ: ನಿರ್ಣಯ, ಸಮರ್ಪಣೆ ಮತ್ತು ಹೋರಾಟ’ ಎಂಬ ಘೋಷವಾಕ್ಯದೊಂದಿಗೆ ಈ ಅಧಿವೇಶನ ಸಂಘಟಿಸಲಾಗಿದೆ. 2025 ಅನ್ನು ಸಾಂಸ್ಥಿಕ ಪುನರುಜ್ಜೀವನದ ವರ್ಷವೆಂದು ಪಕ್ಷವು ಬೆಳಗಾವಿ ಅಧಿವೇಶನದಲ್ಲೇ ಘೋಷಿಸಿದೆ. 

2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟವು ಎನ್‌ಡಿಎ ಮೈತ್ರಿಕೂಟಕ್ಕೆ ಸಮಬಲದ ಪೈಪೋಟಿ ನೀಡಿತ್ತು. ನಂತರ ಹರಿಯಾಣ, ಮಹಾರಾಷ್ಟ್ರ ಹಾಗೂ ದೆಹಲಿ ವಿಧಾನಸಭಾ ಚುನಾವಣೆಗಳಲ್ಲಿ ಹೀನಾಯವಾಗಿ ಸೋತಿತ್ತು. ಪಕ್ಷವು ಸರಣಿ ಹಿನ್ನಡೆಗಳನ್ನು ಗಳಿಸಿ ಚೈತನ್ಯ ಕಳೆದುಕೊಂಡಿರುವ ಹೊತ್ತಿನಲ್ಲಿ ಈ ಅಧಿವೇಶನ ಆರಂಭವಾಗುತ್ತಿದೆ. ಪಕ್ಷ ಸಂಘಟನೆ, ಬದಲಾದ ಕಾಲಘಟ್ಟದಲ್ಲಿ ರಾಜಕೀಯ, ಆರ್ಥಿಕ ಪರಿಸ್ಥಿತಿ ಕುರಿತು ಪಕ್ಷ ತೆಗೆದುಕೊಳ್ಳಬೇಕಾದ ನಿಲುವುಗಳ ಚಿಂತನ - ಮಂಥನ, ನಿರ್ಣಯ ಈ ಸಭೆಯ ಪ್ರಮುಖ ಕಾರ್ಯಸೂಚಿ. 

ADVERTISEMENT

ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ‘ಇಂಡಿಯಾ’ ಮೈತ್ರಿಕೂಟದ ಪಾಲುದಾರರೊಂದಿಗೆ ಎನ್‌ಡಿಎ ವಿರುದ್ಧ ಹೋರಾಡಲು ಪಕ್ಷ ಸಜ್ಜಾಗುತ್ತಿದೆ. ಮುಂದಿನ ವರ್ಷ ಪಕ್ಷವು ಕೇರಳ, ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಪ್ರಮುಖ ಚುನಾವಣಾ ಸಮರಗಳನ್ನು ಎದುರಿಸಲಿದೆ. ಈ ಚುನಾವಣೆಗಳಿಗೆ ಪಕ್ಷವು ತನ್ನ ಕಾರ್ಯತಂತ್ರವನ್ನು ಅಂತಿಮಗೊಳಿಸಲಿದೆ.

ಪಕ್ಷದಲ್ಲಿ ಅಧಿಕಾರ ವಿಕೇಂದ್ರೀಕರಣಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ವೇದಿಕೆ ಸಜ್ಜುಗೊಳಿಸಿದ್ದಾರೆ. ಪಕ್ಷದ ಕೇಂದ್ರ ನಾಯಕತ್ವವು ರಾಷ್ಟ್ರ ರಾಜಧಾನಿಯಲ್ಲಿ ಮೂರು ಸಭೆಗಳನ್ನು ಸಂಘಟಿಸಿ 862 ಜಿಲ್ಲಾ ಘಟಕಗಳ ಅಧ್ಯಕ್ಷರೊಂದಿಗೆ ಸಮಾಲೋಚನೆ ನಡೆಸಿದೆ. ಜಿಲ್ಲಾ ನಾಯಕರ ಅಹವಾಲುಗಳನ್ನು ಆಲಿಸಿದೆ. ಜಿಲ್ಲಾ ಅಧ್ಯಕ್ಷರಿಗೆ ಅಭೂತಪೂರ್ವ ಅಧಿಕಾರ ಸಿಗಲಿದೆ ಎಂದು ಕೇಂದ್ರ ನಾಯಕತ್ವವು ಸೂಚ್ಯವಾಗಿ ತಿಳಿಸಿದೆ. ಈ ಬಗ್ಗೆ ವಿಸ್ತೃತ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳುವ ನಿರೀಕ್ಷೆ ಇದೆ. 

ಗುಜರಾತ್‌ನಲ್ಲಿ ಕಾಂಗ್ರೆಸ್ ಪಾಳಯಕ್ಕೆ 1998ರಿಂದ ಅಧಿಕಾರ ಮರೀಚಿಕೆಯಾಗಿದೆ. 2022ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಪಾತಾಳಕ್ಕೆ ಕುಸಿದಿತ್ತು ಗುಜರಾತ್‌ನ ಕಾರ್ಯಕರ್ತರೊಂದಿಗೆ ಇತ್ತೀಚೆಗೆ ಸಭೆ ನಡೆಸಿದ್ದ ರಾಹುಲ್‌ ಗಾಂಧಿ,  ‘ಬಿಜೆಪಿಗಾಗಿ ಕೆಲಸ ಮಾಡುತ್ತಿರುವ ಕಾಂಗ್ರೆಸ್ ನಾಯಕರು ಪಕ್ಷವನ್ನು ತೊರೆಯಬಹುದು. 30ರಿಂದ 40 ನಾಯಕರನ್ನು ಉಚ್ಚಾಟಿಸಿ ಪಕ್ಷದ ಶುದ್ಧೀಕರಣ ನಡೆಸಲಾಗುವುದು’ ಎಂದು ಎಚ್ಚರಿಸಿದ್ದರು. ಅಡಳಿತಾರೂಢ ಬಿಜೆಪಿ ಹಾಗೂ ಪ‍್ರಧಾನಿ ನರೇಂದ್ರ ಮೋದಿ ಅವರನ್ನು ಎದುರಿಸಲು ಪಕ್ಷವು ರಾಜ್ಯದಲ್ಲಿ ಸಂಘಟನೆಗೆ ಹೊಸ ರೂಪ ನೀಡುವ ಸಂಭವ ಇದೆ. 

ಕಾರ್ಯಸೂಚಿ 

*ಅಧಿವೇಶನದ ಮೊದಲ ದಿನ ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಮಾರಕದಲ್ಲಿ ಖರ್ಗೆ ಅಧ್ಯಕ್ಷತೆಯಲ್ಲಿ ವಿಸ್ತೃತ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆ ನಡೆಯಲಿದೆ. ಈ ಸಭೆಯಲ್ಲಿ, ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು ಮತ್ತು ಕೇಂದ್ರ ಚುನಾವಣಾ ಸಮಿತಿ ಸದಸ್ಯರು ಸೇರಿದಂತೆ 169 ನಾಯಕರು ಭಾಗವಹಿಸಲಿದ್ದಾರೆ.

*ಏ.9ರಂದು ಸಬರಮತಿ ನದಿ ದಂಡೆಯಲ್ಲಿ ಪ್ರತಿನಿಧಿ ಅಧಿವೇಶನ ನಡೆಯಲಿದೆ. ಎಐಸಿಸಿಯ 1,725 ಸದಸ್ಯರು ಸೇರಿದಂತೆ ಸುಮಾರು 2,000 ಪ್ರತಿನಿಧಿಗಳು ಹೊಸ ಮಾರ್ಗಸೂಚಿಗೆ ಅನುಮೋದನೆ ನೀಡಲಿದ್ದಾರೆ.

*ಈ ಅಧಿವೇಶನದಲ್ಲಿ ಸೈದ್ಧಾಂತಿಕ ತರಬೇತಿ, ಸೋಷಿಯಲ್‌ ಎಂಜಿನಿಯರಿಂಗ್, ಪಕ್ಷ ವಿರೋಧಿ ಚಟುವಟಿಕೆಗಳನ್ನು ಮಟ್ಟ ಹಾಕುವುದು, ಪಕ್ಷ ಪರ ನಿರೂಪಣೆ ಮತ್ತು ಚುನಾವಣೆಗಳು, ನಿಧಿಗಳು, ಮಾಧ್ಯಮ, ಸಾಮಾಜಿಕ ಮಾಧ್ಯಮ ಮತ್ತು ಆಸ್ತಿಗಳು ಮತ್ತು ಆಸ್ತಿಗಳ ನಿರ್ವಹಣೆ ಸೇರಿದಂತೆ ಭವಿಷ್ಯದ ಕಾರ್ಯಗಳ ಕುರಿತು ನಾಯಕರು ಸ್ಪಷ್ಟ ತೀರ್ಮಾನ ತೆಗೆದುಕೊಳ್ಳುವ ನಿರೀಕ್ಷೆ ಇದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.