ADVERTISEMENT

ಕೊನೊಕಾರ್ಪಸ್‌ ನಿಷೇಧ: ಸರ್ಕಾರಕ್ಕೆ ಶಿಫಾರಸು

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 15:48 IST
Last Updated 26 ಜುಲೈ 2024, 15:48 IST
ಕೊನೊಕಾರ್ಪಸ್‌ (Conocarpus)
ಕೊನೊಕಾರ್ಪಸ್‌ (Conocarpus)   

ಬೆಂಗಳೂರು: ‘ಮಾನವನಿಗೆ ಅಲರ್ಜಿ, ಉಸಿರಾಟದ ತೊಂದರೆ, ಕೆಮ್ಮು, ನೆಗಡಿ, ಆಸ್ತಮಾ ಮುಂತಾದ ತೊಂದರೆ ಉಂಟು ಮಾಡುವ ಕೊನೊಕಾರ್ಪಸ್‌ (Conocarpus) ಸಸಿ ಬೆಳೆಸುವುದನ್ನು ನಿಷೇಧಿಸಬೇಕು’ ಎಂದು ಅರಣ್ಯ ಪಡೆ ಮುಖ್ಯಸ್ಥರಾದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರು ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.

‘ಪ್ರಜಾವಾಣಿ’ಯಲ್ಲಿ ಜೂನ್‌ 5ರಂದು ಪ್ರಕಟವಾದ ‘ಆರೋಗ್ಯಕ್ಕೆ ಮಾರಕ ‘ದುಬೈ ಗಿಡ’– ವಿಶೇಷ ವರದಿಯನ್ನು ಉಲ್ಲೇಖಿಸಿದ್ದ ಅರಣ್ಯ ಖಾತೆ ಸಚಿವ ಈಶ್ವರ ಖಂಡ್ರೆ ಅವರು, ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ಜುಲೈ 2ರಂದು ಪತ್ರ ಬರೆದಿದ್ದರು. ‘ವೈಜ್ಞಾನಿಕವಾಗಿ ದುಷ್ಪರಿಣಾಮ ಕಂಡುಬಂದರೆ ರಾಜ್ಯ ಎಲ್ಲ ಭಾಗದಲ್ಲೂ ಕೊನೊಕಾರ್ಪಸ್‌ ಸಸಿಗಳನ್ನು ನೆಡದಂತೆ ಸಾಮಾಜಿಕ ಅರಣ್ಯ ವಿಭಾಗಕ್ಕೆ ಸ್ಪಷ್ಟ ಸೂಚನೆ ನೀಡಬೇಕು’ ಎಂದು ಸೂಚಿಸಿದ್ದರು.

ಈ ಬಗ್ಗೆ ಪರಿಶೀಲನೆ ನಡೆಸಿರುವ ಅರಣ್ಯ ಪಡೆ ಮುಖ್ಯಸ್ಥರು, ‘ಇತರೆ ಕೆಲವು ರಾಜ್ಯಗಳು ಈ ಗಿಡವನ್ನು ನಿಷೇಧಿಸಿವೆ. ಹಲವು ಸಂಶೋಧನಾ ಅಧ್ಯಯನಗಳಲ್ಲಿ ಕೊನೊಕಾರ್ಪಸ್‌ (ದುಬೈ ಟ್ರೀ) ಋಣಾತ್ಮಕ ಪರಿಣಾಮಗಳನ್ನು ಹೊಂದಿರುವ ವರದಿ ನೀಡಿವೆ. ಅರಣ್ಯ ಸಸ್ಯಕ್ಷೇತ್ರ, ರಸ್ತೆ ಬದಿ, ಅರಣ್ಯ ನೆಡುತೋಪು, ಇತರೆ ಅರಣ್ಯ ಪ್ರದೇಶ ಹಾಗೂ ಇತರೆಡೆ ಕೊನೊಕಾರ್ಪಸ್‌ ಸಸಿ ಬೆಳೆಸುವುದನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಬಹುದು’ ಎಂದು ಇದೇ 19ರಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.