ADVERTISEMENT

ಕಾಡೊಳಗಿನ ಜನವಸತಿ ಸ್ಥಳಾಂತರಿಸಲು ಪರಿಶೀಲನೆ: ಅರಣ್ಯ ಸಚಿವ ಈಶ್ವರ ಖಂಡ್ರೆ

ವನ್ಯಜೀವಿ- ಮಾನವ ಸಂಘರ್ಷ: ಶೀಘ್ರವೇ ಸಿಎಂ ನೇತೃತ್ವದಲ್ಲಿ ಸಭೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2025, 15:58 IST
Last Updated 10 ನವೆಂಬರ್ 2025, 15:58 IST
ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ನೇತೃತ್ವದ ನಿಯೋಗವು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಪತ್ರ ಸಲ್ಲಿಸಿತು.
ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ನೇತೃತ್ವದ ನಿಯೋಗವು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಪತ್ರ ಸಲ್ಲಿಸಿತು.   

ಬೆಂಗಳೂರು: ‘ರಾಜ್ಯದಲ್ಲಿ ವನ್ಯಜೀವಿಗಳ ಸಂಖ್ಯೆ ಹೆಚ್ಚಳವಾಗಿದ್ದು, ಕಾಡಿನೊಳಗಿರುವ ಜನವಸತಿಗಳನ್ನು ಸ್ಥಳಾಂತರಿಸುವ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.

ಕುದುರೆಮುಖ ರಾಷ್ಟ್ರೀಯ ಉದ್ಯಾನದ ಕಾರ್ಕಳ ವ್ಯಾಪ್ತಿಯ ನಿವಾಸಿಗಳ ಪುನರ್ವಸತಿ ಮತ್ತು ಪರಿಹಾರಕ್ಕೆ ಸಂಬಂಧಿಸಿದಂತೆ 2005ರ ಸುತ್ತೋಲೆಯನ್ನು ಪುನರ್‌ ಪರಿಶೀಲಿಸುವಂತೆ ಕೋರಿ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ನೇತೃತ್ವದ ನಿಯೋಗದ ಮನವಿ ಸ್ವೀಕರಿಸಿ ಅವರು ಮಾತನಾಡಿದರು.

‘ಅರಣ್ಯದೊಳಗಿರುವ ಜನವಸತಿಗಳ ಸ್ಥಳಾಂತರದಿಂದ ಅರಣ್ಯವಾಸಿಗಳು ಮತ್ತು ಅವರ ಮಕ್ಕಳು ಸಮಾಜದ ಮುಖ್ಯವಾಹಿನಿಗೆ ಬರುತ್ತಾರೆ. ಅಲ್ಲದೇ, ಮಾನವ–ವನ್ಯಜೀವಿ ಸಂಘರ್ಷವೂ ಕಡಿಮೆ ಆಗುತ್ತದೆ. ಸ್ಥಳಾಂತರಕ್ಕೆ ಪರಿಹಾರ ನೀಡಬೇಕಾಗುತ್ತದೆ. ಇದನ್ನು ಒಂದೇ ಬಾರಿಗೆ ಮಾಡಲು ಸಾಧ್ಯವಿಲ್ಲ. ಹಂತ– ಹಂತವಾಗಿ ಮಾಡಬೇಕಾಗುತ್ತದೆ. ಬಜೆಟ್‌ನಲ್ಲಿ ಇದಕ್ಕೆ ಹಣ ಮೀಸಲಿಟ್ಟರೆ ಸಾಧ್ಯವಾಗುತ್ತದೆ. ಈ ಕುರಿತು ಮುಖ್ಯಮಂತ್ರಿಯವರ ಜತೆ ಚರ್ಚಿಸುತ್ತೇನೆ’ ಎಂದು ಖಂಡ್ರೆ ಹೇಳಿದರು.

ADVERTISEMENT

ಹಿಂದೆ ವನ್ಯಜೀವಿಗಳ ಕಳ್ಳಬೇಟೆ ನಡೆಯುತ್ತಿತ್ತು. ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಇದನ್ನು ನಿಯಂತ್ರಿಸಿದೆ. ಉತ್ತಮ ಪರಿಸರವಿರುವುದರಿಂದ ವನ್ಯಜೀವಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಆದರೆ, ಹೆಚ್ಚುತ್ತಿರುವ ವನ್ಯಜೀವಿಗಳ ಸಂಖ್ಯೆಗೆ ಅನುಗುಣವಾಗಿ ಕಾಡಿನ ಪ್ರದೇಶ ಹೆಚ್ಚುತ್ತಿಲ್ಲ. ಇದರಿಂದ ಸಮಸ್ಯೆ ಉಲ್ಬಣಿಸುತ್ತಿದೆ ಎಂದು ಖಂಡ್ರೆ ವಿವರಿಸಿದರು.

1972ರಲ್ಲಿ ಬಂಡೀಪುರದಲ್ಲಿ ಕೇವಲ 12 ಇದ್ದ ಹುಲಿಗಳ ಸಂಖ್ಯೆ ಇಂದು 170 ಕ್ಕೂ ಹೆಚ್ಚಾಗಿದೆ. ಹೀಗಾಗಿ, ದುರ್ಬಲ ಹುಲಿಗಳು ಕಾಡಿನಿಂದ ಹೊರಬರುತ್ತಿವೆ. ಇಲಾಖೆ ಸಿಬ್ಬಂದಿ ಹಗಲು–ರಾತ್ರಿ ಶ್ರಮಿಸುತ್ತಿದ್ದರೂ ಮಾನವ–ವನ್ಯಜೀವಿ ಸಂಘರ್ಷದ ಘಟನೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಹೆಚ್ಚಿಸಲು ಮುಖ್ಯಮಂತ್ರಿಯವರ ನೇತೃತ್ವದಲ್ಲಿ ಶೀಘ್ರವೇ ಸಭೆ ನಡೆಯಲಿದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.