ADVERTISEMENT

ಪರಿಹಾರ ಲೂಟಿಗೆ ಹೊಂಚು: ರೈತರ ಕೈತಪ್ಪಲಿದೆ ₹300 ಕೋಟಿ?

ಬೇನಾಮಿ ಹೆಸರಲ್ಲಿ ‘ಪ್ರಭಾವಿ’ಗಳ ಭೂಮಿ

ವೈ.ಗ.ಜಗದೀಶ್‌
Published 23 ನವೆಂಬರ್ 2020, 1:24 IST
Last Updated 23 ನವೆಂಬರ್ 2020, 1:24 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   
""

ಬೆಂಗಳೂರು: ರೈತರಿಂದ ಕಡಿಮೆ ದರದಲ್ಲಿ ಭೂಮಿ ಖರೀದಿಸಿ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ (ಕೆಐಎಡಿಬಿ) ಎಕರೆಗೆ ₹1 ಕೋಟಿಯಂತೆ ಪರಿಹಾರ ಪಡೆಯುವ ಯೋಜನೆ ಅನುಷ್ಠಾನಕ್ಕೆ ‘ಪ್ರಭಾವಿ’ ರಾಜಕಾರಣಿಗಳು ಹಾಗೂ ಕೆಲ ಅಧಿಕಾರಿಗಳು ಮುಂದಡಿ ಇಟ್ಟಿದ್ದಾರೆ.

ನೆಲಮಂಗಲ ತಾಲ್ಲೂಕು ತ್ಯಾಮಗೊಂಡ್ಲು ಹೋಬಳಿಯ ಏಳು ಗ್ರಾಮಗಳ ಒಟ್ಟು 854 ಎಕರೆ 31 ಗುಂಟೆಯನ್ನು ‘ಮಲ್ಟಿ ಮಾಡಲ್‌ ಲಾಜಿಸ್ಟಿಕ್ ಪಾರ್ಕ್‌’(ಎಂಎಂಎಲ್‌ಪಿ) ಯೋಜನೆಗಾಗಿ ಭೂಸ್ವಾಧೀನಕ್ಕೆ ಕೆಐಎಡಿಬಿ ಮುಂದಾಗಿದೆ. ಇದರಲ್ಲಿ 610 ಎಕರೆ 34 ಗುಂಟೆ ರೈತರ ಹಿಡುವಳಿ, 243 ಎಕರೆ 36 ಗುಂಟೆ ಖರಾಬು ಜಮೀನು. ಸ್ವಾಧೀನಕ್ಕೆ ಒಳಪಡುವ ಭೂಮಿಗುರುತಿಸಿ, ನೀಲನಕ್ಷೆ ಸಿದ್ಧಪಡಿಸಿರುವ ಕೆಐಎಡಿಬಿ, ಭೂಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ (28/1) ಹೊರಡಿಸಲು ಸಿದ್ಧತೆ ನಡೆಸಿದೆ. ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ ಮಂಡಿಸಿ, ಅನುಮೋದನೆ ಪಡೆಯಲು ಸಿದ್ಧಪಡಿಸಿದ 162 ಪುಟಗಳ ಕಡತ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

‘ಇಲ್ಲಿ ಭೂಸ್ವಾಧೀನ ಪಡಿಸಿಕೊಳ್ಳುವುದನ್ನು ಮೊದಲೇ ತಿಳಿದುಕೊಂಡ ಪ್ರಭಾವಿಗಳು ಹಾಗೂ ಕೆಲವು ಅಧಿಕಾರಿಗಳು ಆರು ತಿಂಗಳಿನಿಂದೀಚೆಗೆ ರೈತರಿಂದ ಕಡಿಮೆ ದರದಲ್ಲಿ ಭೂ ಖರೀದಿಸಿ ಹೆಚ್ಚಿನ ಪರಿಹಾರ ಪಡೆಯುವ ಹುನ್ನಾರ ನಡೆಸಿದ್ದಾರೆ. ಭೂಮಿ ಕಳೆದುಕೊಳ್ಳುವ ರೈತರಿಗೆ ನ್ಯಾಯಯುತವಾಗಿ ಸಿಗಬೇಕಾದ ಮಾರ್ಗಸೂಚಿ ದರದ ನಾಲ್ಕು ಪಟ್ಟು ಪರಿಹಾರ, ಬೇನಾಮಿ ಹೆಸರಿನಲ್ಲಿ ಭೂಮಿ ಖರೀದಿಸಿದವರ ಪಾಲಾಗುವ ಸಾಧ್ಯತೆ ಹೆಚ್ಚಿದೆ. 2006ರಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಅಂದು ಸಾಫ್ಟ್‌ವೇರ್ ಉದ್ಯಮಕ್ಕಾಗಿ ಇಟಾಸ್ಕ ಕಂಪನಿಗೆ 325 ಎಕರೆಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಅಂದು ಬೇನಾಮಿ ಹೆಸರಿನಲ್ಲಿ ಭೂಮಿ ಖರೀದಿಸಿದ್ದ ಕೆಲವರು ದೊಡ್ಡ ಮೊತ್ತದ ಪರಿಹಾರ ಪಡೆದಿದ್ದರು. ಈ ಪ್ರಕರಣದಲ್ಲಿ ಅಂದು ಕೈಗಾರಿಕಾ ಸಚಿವರಾಗಿದ್ದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ವಿರುದ್ಧ ಪ್ರಕರಣ ದಾಖಲಾಗಿ, ಜೈಲುವಾಸ ಅನುಭವಿಸಿದ್ದರು. ಇಟಾಸ್ಕ ಮಾದರಿಯ ಮತ್ತೊಂದು ಹಗರಣ ಇದಾಗಿದೆ’ ಎಂದು ಕೆಐಎಡಿಬಿಯ ಅಧಿಕಾರಿಯೊಬ್ಬರು ವಿವರಿಸಿದರು.

ADVERTISEMENT

ಯೋಜನೆಯ ದಿಕ್ಕುದೆಸೆ: ದಾಬಸ್‌ ಪೇಟೆ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತೆ ಎಂಎಂಪಿಎಲ್‌ ಮಾದರಿಯ ಯೋಜನೆಗಾಗಿ 250 ಎಕರೆ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಅಲ್ಲಿಯೇ ಯೋಜನೆ ಅನುಷ್ಠಾನಗೊಂಡರೆ ‘ಸಂಪಾದನೆ’ ಆಗುವುದಿಲ್ಲವೆಂಬ ಕಾರಣಕ್ಕೆ ತ್ಯಾಮಗೊಂಡ್ಲುವಿನಲ್ಲಿ ಯೋಜನೆ ರೂಪಿಸಲಾಯಿತು.

ಯೋಜನೆಗೆ 854 ಎಕರೆ ಅಗತ್ಯ ಇಲ್ಲದೇ ಇದ್ದರೂ ತಮ್ಮ ಆಪ್ತರು, ಬೇನಾಮಿ ಹೆಸರಿನಲ್ಲಿ ಭೂಮಿ ಖರೀದಿಸಿರುವ ಕಾರಣಕ್ಕೆ ಯೋಜನೆಯ ವ್ಯಾಪ್ತಿಯನ್ನು ಹಿಗ್ಗಿಸಲಾಗಿದೆ ಎಂದು ಅಧಿಕಾರಿ ತಿಳಿಸಿದರು. ಯೋಜನೆ ಅನುಷ್ಠಾನ ಮಾಡುವುದು ಗೊತ್ತಿದ್ದ ಅಧಿಕಾರಿಗಳು ಇಲ್ಲಿ ರೈತರಿಂದ ಭೂಮಿ ಖರೀದಿಸಿದ್ದಾರೆ. ಆರು ತಿಂಗಳಿನಿಂದ ಈಚೆಗೆ ಕರ್ನಾಟಕವನ್ನು ಪ್ರತಿನಿಧಿಸುವ ಸಂಸದರೊಬ್ಬರು ಕೇಂದ್ರದ ಅತ್ಯಂತ ಪ್ರಭಾವಿ ಸಚಿವರಿಗಾಗಿ (ಕಠಾರಿ ಹೆಸರಿನಲ್ಲಿ) ಇಲ್ಲಿ ದೊಡ್ಡ ಪ್ರಮಾಣದಲ್ಲಿ ಭೂಮಿ ಖರೀದಿಸಿದ್ದಾರೆ. ರಾಜ್ಯ ಸಂಪುಟದಲ್ಲಿ ಉನ್ನತ ಸ್ಥಾನ ಪಡೆದಿರುವ ಇಬ್ಬರು ಸಚಿವರು, ಅವರ ಆಪ್ತರು, ಕೆಐಎಡಿಬಿಯ ಹಿರಿಯ ಅಧಿಕಾರಿಗಳು ಹಾಗೂ ಮುಖ್ಯ ಅಭಿವೃದ್ಧಿ ಅಧಿಕಾರಿಯಾಗಿ ತಿಂಗಳ ಹಿಂದೆ ನಿವೃತ್ತರಾದವರೊಬ್ಬರು ಭೂಮಿ ಖರೀದಿಸಿದ್ದಾರೆ. ಭೂಮಿ ಪರಿಹಾರಕ್ಕೆ ಯೋಗ್ಯವಾದ ಒಟ್ಟು 610 ಎಕರೆಗಳ ಪೈಕಿ ಇವರೆಲ್ಲರ ಜಾಗ 350 ಎಕರೆಗೂ ದಾಟುತ್ತದೆ. ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಹಾಗೂ ದರ ನಿಗದಿಪಡಿಸಿ ಖರಾಬು ಭೂಮಿಯನ್ನು ಹಿಡುವಳಿದಾರರಿಗೆ ನೀಡಬಹುದು ಎಂಬ ಎರಡು ಆದೇಶಗಳ ಹಿಂದೆ ಇಲ್ಲಿ ಜಾಗ ಖರೀದಿಸಿದ ‘ಪ್ರಭಾವಿ’ಗಳ ಕೈವಾಡ ಇದೆ ಎಂದೂ ಅಧಿಕಾರಿ ವಿವರಿಸಿದರು.

ಎಷ್ಟು ಪರಿಹಾರ: ಈ ಭಾಗದಲ್ಲಿ ಒಂದು ಎಕರೆ ಮಾರ್ಗಸೂಚಿ ದರ ₹15 ಲಕ್ಷದಿಂದ ₹18 ಲಕ್ಷದಷ್ಟಿದೆ. ರೈತರಿಗೆ ₹20 ರಿಂದ ₹25 ಲಕ್ಷ ನೀಡಿ ಪುಸಲಾಯಿಸಿ ಖರೀದಿ ಮಾಡಲಾಗಿದೆ. ಕೆಐಎಡಿಬಿ ಭೂ ಸ್ವಾಧೀನಪಡಿಸಿಕೊಂಡರೆ ರೈತರಿಗೆ ಪರಿಹಾರ ಸಿಗುವುದಿಲ್ಲ; ಯಾರು ಭೂಮಿ ಖರೀದಿಸಿದ್ದಾರೋ ಅವರಿಗಷ್ಟೇ ಸಿಗಲಿದೆ.

610 ಎಕರೆಯನ್ನು ರೈತರು ಮಾರಿಲ್ಲ. ಅರ್ಧಕ್ಕಿಂತ ಹೆಚ್ಚು ಭೂಮಿಯನ್ನು ₹5 ಲಕ್ಷದಿಂದ ₹8 ಲಕ್ಷ ಹೆಚ್ಚು ಕೊಟ್ಟು ಖರೀದಿಸಲಾಗಿದೆ. 350 ಎಕರೆಯಷ್ಟು ಖರೀದಿ ಮಾಡಿದ್ದರೂ ₹70 ಕೋಟಿ ಹೂಡಿಕೆ ಮಾಡಿ ₹280 ಕೋಟಿಯಿಂದ ₹300 ಕೋಟಿ ಲಾಭ ಮಾಡಿಕೊಳ್ಳುವ ಲೆಕ್ಕಾಚಾರ ಪ್ರಭಾವಿಗಳದ್ದಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕೆಐಎಡಿಬಿ ಸಿಇಒ ಶಿವಶಂಕರ್ ಅವರನ್ನು ಸಂಪರ್ಕಿಸಲು ಯತ್ನಿಸಿದರೂ ಅವರು ಕರೆ ಸ್ವೀಕರಿಸಲಿಲ್ಲ.

ಕೃಷಿ ಭೂ ರಕ್ಷಣಾ ವೇದಿಕೆವಿರೋಧ
‘ಕೈಗಾರಿಕೆ ಬೇಡ– ಅನ್ನಕೊಡುವ ಹಸಿರಿನ ಬಟ್ಟಲು ಉಳಿಸಿ’ ಎಂದು ಆಗ್ರಹಿಸಿ ತ್ಯಾಮಗೊಂಡ್ಲು ಹೋಬಳಿಯ ಯುವಕರು ’ಕೃಷಿ ಭೂ ರಕ್ಷಣಾ ವೇದಿಕೆ‘ ರಚಿಸಿಕೊಂಡು ಹೋರಾಟಕ್ಕೆ ಮುಂದಾಗಿದ್ದಾರೆ.

‘ಕೋವಿಡ್ ಹಾಗೂ ಆರ್ಥಿಕ ಹಿಂಜರಿತದ ಕಾರಣದಿಂದಾಗಿ ಕೈಗಾರಿಕೆಗಳು ಮುಚ್ಚುತ್ತಿದ್ದು ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಇಂತಹ ಹೊತ್ತಿನಲ್ಲಿ ಕೈಗಾರಿಕಾ ಕಾರ್ಮಿಕರು ಅನ್ನ–ಉದ್ಯೋಗ ಅರಸಿ ಹಳ್ಳಿಗಳ ಕಡೆ ಮುಖ ಮಾಡಿದ್ದಾರೆ. ಬೆಂಗಳೂರಿನಲ್ಲಿ ಕೆಲಸ ಮಾಡುವವರು ತಮ್ಮ ಹಳ್ಳಿಗೆ ಮರಳುತ್ತಿದ್ದು, ಈ ಭಾಗದಲ್ಲಿ ಕೈಗಾರಿಕೆ ಬೇಡ. ಭೂಮಿಯನ್ನೇ ಉಳಿಸಿ ಆಗ್ರಹಿಸಿ ಹೋರಾಟ ನಡೆಸುತ್ತಿದ್ದೇವೆ’ ಎಂದು ವೇದಿಕೆಯ ಮೂರ್ತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.