ADVERTISEMENT

ಹಿಂದೂ ಮುಖಂಡರ ಹತ್ಯೆಗೆ ಸಂಚು: ವಿಶೇಷ ನ್ಯಾಯಾಲಯದಲ್ಲಿ ಆರೋಪ ಸಾಬೀತು

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2023, 22:15 IST
Last Updated 24 ಫೆಬ್ರುವರಿ 2023, 22:15 IST
   

ಬೆಂಗಳೂರು: ಭಯೋತ್ಪಾದನೆ ಕೃತ್ಯ ಎಸಗಲು ಹಾಗೂ ಹಿಂದೂ ಮುಖಂಡರ ಹತ್ಯೆಗೆ ಸಂಚು ರೂಪಿಸಿದ್ದ ಪ್ರಕರಣದಲ್ಲಿ ಬಂಧಿಸಲಾಗಿದ್ದ ಮೂವರು ಶಂಕಿತರ ವಿರುದ್ಧದ ಆರೋಪಗಳು ವಿಶೇಷ ನ್ಯಾಯಾಲಯದಲ್ಲಿ ಸಾಬೀತಾಗಿವೆ.

‘ಲಷ್ಕರ್–ಎ–ತಯಬಾ’ ನಿಷೇಧಿತ ಉಗ್ರ ಸಂಘಟನೆ ಜೊತೆ ನಂಟು ಇಟ್ಟುಕೊಂಡಿದ್ದ ಪಾಕಿಸ್ತಾನದ ಮೊಹಮ್ಮದ್ ಫಹಾದ್ ಹೈ ಅಲಿಯಾಸ್ ಖೋಯಾ (30), ಬೆಂಗಳೂರು ಟಿಪ್ಪು ನಗರದ ಸೈಯದ್ ಅಬ್ದುಲ್ ರೆಹಮಾನ್ (25) ಹಾಗೂ ಚಿಂತಾಮಣಿಯ ಅಪ್ಸರ್ ಪಾಷಾ ಅಲಿಯಾಸ್ ಖಷೀರುದ್ದೀನ್ (32) ಅವರನ್ನು ಸಿಸಿಬಿ ಪೊಲೀಸರು 2012ರಲ್ಲಿ ಬಂಧಿಸಿದ್ದರು. ಪಿಸ್ತೂಲ್, 4 ಜೀವಂತ ಗುಂಡುಗಳು, ಎರಡು ಮೊಬೈಲ್ ಹಾಗೂ ಸ್ಫೋಟಕ ವಸ್ತುಗಳನ್ನು ಜಪ್ತಿ ಮಾಡಿದ್ದರು.

ತನಿಖೆ ನಡೆಸಿದ್ದ ಎಸಿಪಿ ಎನ್‌. ಚಲಪತಿ ನೇತೃತ್ವದ ತಂಡ, ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ್ದ ನ್ಯಾಯಾಲಯವು ಆರೋಪಿಗಳು ತಪ್ಪಿತಸ್ಥರೆಂದು ತೀರ್ಮಾನಿಸಿದೆ. ಶಿಕ್ಷೆ ಪ್ರಮಾಣವನ್ನು ಫೆ. 27ಕ್ಕೆ ಘೋಷಿಸುವ ಸಾಧ್ಯತೆ ಇದೆ. ಸರ್ಕಾರದ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ಸಿ.ಎ. ರವೀಂದ್ರ ವಾದಿಸಿದ್ದರು.

ADVERTISEMENT

ಜೈಲಿನಲ್ಲಿ ಸಂಚು: ‘ಪಾಕಿಸ್ತಾನದ ಕರಾಚಿಯ ಉತ್ತರ ನಿಜಾಮ್‌ಬಾದ್‌ನ ಮೊಹಮ್ಮದ್ ಫಹಾದ್ ಹೈ, ತಂದೆ ಅಬ್ದುಲ್ ಹೈ ಜೊತೆ ಮೈಸೂರಿಗೆ ಬಂದಿದ್ದ. ಅಬ್ದುಲ್‌ಗೆ ಇಬ್ಬರು ಪತ್ನಿಯರು. ಒಬ್ಬರು ಭಾರತೀಯರು ಹಾಗೂ ಇನೊಬ್ಬರು ಪಾಕಿಸ್ತಾನ್‌ದವರು’ ಎಂದು ಸಿಸಿಬಿ ಮೂಲಗಳು ಹೇಳಿವೆ.

‘ಪಾಕಿಸ್ತಾನದಲ್ಲಿರುವಾಗ ಕೆಲವರ ಜೊತೆ ಒಡನಾಟ ಹೊಂದಿದ್ದ ಮೊಹಮ್ಮದ್ ಫಹಾದ್, ತಂದೆ ಜೊತೆ ಭಾರತಕ್ಕೆ ಬಂದ ಬಳಿಕವೂ ಭಯೋತ್ಪಾದನಾ ಕೃತ್ಯದಲ್ಲಿ ತೊಡಗಿದ್ದ. ಕೇರಳ ಹಾಗೂ ಮೈಸೂರಿನ ವಿಜಯನಗರ ಠಾಣೆಯಲ್ಲಿ ದಾಖಲಾಗಿದ್ದ ದೇಶದ್ರೋಹ ಪ್ರಕರಣದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಈತನನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು.’

‘ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಮೇಲೆ ನಡೆದಿದ್ದ ಉಗ್ರರ ದಾಳಿ ಪ್ರಕರಣದಲ್ಲಿ ಅಪ್ಸರ್ ಪಾಷಾ ಜೈಲು ಸೇರಿದ್ದ. ಕೊಲೆ ಹಾಗೂ ಕಳ್ಳತನ ಪ್ರಕರಣದಲ್ಲಿ ಸೈಯದ್ ಅಬ್ದುಲ್ ರೆಹಮಾನ್ ಸಹ ಪರಪ್ಪನ ಅಗ್ರಹಾರಕ್ಕೆ ಬಂದಿದ್ದ. ಮೂವರೂ ಜೈಲಿನಲ್ಲಿ ಸ್ನೇಹಿತರಾಗಿದ್ದರು. ಹಿಂದೂ ಮುಖಂಡರನ್ನು ಹತ್ಯೆ ಮಾಡಲು ಹಾಗೂ ರಾಜ್ಯದಲ್ಲಿ ಭಯೋತ್ಪಾದನೆ ಕೃತ್ಯ ಎಸಗಲು ಸಂಚು ರೂಪಿಸಿದ್ದರು. ಮುಸ್ಲಿಂ ಯುವಕರನ್ನು ಪ್ರಚೋದಿಸಿ ಭಯೋತ್ಪಾದನಾ ಕೃತ್ಯಕ್ಕೆ ಬಳಸುವುದು ಆರೋಪಿಗಳ ಉದ್ದೇಶವಾಗಿತ್ತು’ ಎಂದು ಮೂಲಗಳು ತಿಳಿಸಿವೆ.

‘ಮೊಹಮ್ಮದ್ ಫಹಾದ್‌ಗೆ ಎರಡು ಪ್ರಕರಣಗಳಲ್ಲಿ 10 ಶಿಕ್ಷೆಯಾಗಿದೆ. ಅಪ್ಸರ್ ಪಾಷಾಗೆ ಐಐಎಸ್ಸಿ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಆಗಿದೆ’ ಎಂದು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.