ADVERTISEMENT

ಅಭ್ಯರ್ಥಿ ಬದಲು ಪರೀಕ್ಷೆಗೆ ಕಾನ್‌ಸ್ಟೆಬಲ್‌ ಹಾಜರು: ಬಂಧನ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2020, 19:04 IST
Last Updated 22 ನವೆಂಬರ್ 2020, 19:04 IST
ಮಲ್ಲಿಕಾರ್ಜುನ್ ಬಬಲಣ್ಣನವರ್
ಮಲ್ಲಿಕಾರ್ಜುನ್ ಬಬಲಣ್ಣನವರ್   

ಬೆಂಗಳೂರು: ನಗರದಲ್ಲಿ ಭಾನುವಾರ ನಡೆದ ಕೆಎಸ್‌ಆರ್‌ಪಿ ಕಾನ್‌ಸ್ಟೆಬಲ್‌ ಹುದ್ದೆ ನೇಮಕಾತಿಯ ಲಿಖಿತ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಬದಲಿಗೆ ಪರೀಕ್ಷೆಗೆ ಹಾಜರಾಗಿದ್ದ ಕಾನ್‌ಸ್ಟೆಬಲ್‌ ಸೇರಿ ಇಬ್ಬರನ್ನು ಪಶ್ಚಿಮ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

'ಶೃಂಗೇರಿ ಠಾಣೆಯ ಕಾನ್‌ಸ್ಟೆಬಲ್‌ ನಾಗಪ್ಪ ತುಕ್ಕಣ್ಣನವರ ಹಾಗೂ ಮಲ್ಲಿಕಾರ್ಜುನ್ ಬಬಲಣ್ಣನವರ ಬಂಧಿತರು. ಆರೋಪಿಗಳ ವಿರುದ್ಧ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ' ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ತಿಳಿಸಿದ್ದಾರೆ.

ಕೆಎಸ್‌ಆರ್‌ಪಿ ಹಾಗೂ ಐಆರ್‌ಬಿ ಕಾನ್‌ಸ್ಟೆಬಲ್‌ ಹುದ್ದೆಗಳಿಗೆ ರಾಜ್ಯಾದ್ಯಂತ ಪರೀಕ್ಷಾ ಕೇಂದ್ರಗಳಲ್ಲಿ ಭಾನುವಾರ ಪರೀಕ್ಷೆ ನಡೆಯಿತು. ಪಶ್ಚಿಮ ವಿಭಾಗದಲ್ಲಿ 8 ಪರೀಕ್ಷಾ ಕೇಂದ್ರಗಳಿದ್ದವು.

ADVERTISEMENT

ಕೆಂಗೇರಿ ಠಾಣೆ ವ್ಯಾಪ್ತಿಯ ಚನ್ನಸಂದ್ರದ ಜೆಎಸ್‍ಎಸ್ ಕಾಲೇಜಿನಲ್ಲಿ ಹಾಲಪ್ಪ ನಾರಾಯಣ ಹಲ್ಲೂರು ಎಂಬವರ ಬದಲಿಗೆ ನಾಗಪ್ಪ ತುಕ್ಕಣ್ಣನವರ ಪರೀಕ್ಷೆ ಬರೆಯುತ್ತಿದ್ದರು. ರಾಜಾಜಿನಗರದ ಎಸ್‌ಜೆಆರ್‌ಸಿ ಮಹಿಳಾ ಕಾಲೇಜಿನಲ್ಲಿ ಹನುಮಂತ ವಗ್ಗಣ್ಣನವರ ಎಂಬಾತನ ಬದಲಿಗೆ ಮಲ್ಲಿಕಾರ್ಜುನ್ ಬಬಲಣ್ಣನವರ ಪರೀಕ್ಷೆ ಬರೆಯುವಾಗ ಸಿಕ್ಕಿಬಿದ್ದಿದ್ದಾರೆ.

'ಸಿಕ್ಕಿಬಿದ್ದಿರುವ ಆರೋಪಿಗಳು ಗಾಂಧಿನಗರದ ಹೋಟೆಲ್‍ನಲ್ಲಿ ತಂಗಿದ್ದರು. ಪರೀಕ್ಷೆ ಬರೆಯಬೇಕಿದ್ದ ಅಭ್ಯರ್ಥಿಗಳ ಹೆಸರಲ್ಲಿ ರೂಂ ಬುಕ್ ಮಾಡಲಾಗಿತ್ತು. ಈ ಸಂಬಂಧ ಹೋಟೆಲ್‍ನಲ್ಲಿ ತಪಾಸಣೆ ನಡೆಸಲಾಗಿದೆ. ಒಂದು ಕಾರನ್ನು ಜಪ್ತಿ ಮಾಡಲಾಗಿದೆ. ವಿಚಾರಣೆ ಮುಂದುವರಿದಿದೆ. ಪರೀಕ್ಷೆಯಲ್ಲಿ ನಡೆದಿರುವ ಈ ಅಕ್ರಮದ ಕುರಿತು ಪೊಲೀಸ್ ನೇಮಕಾತಿ ವಿಭಾಗಕ್ಕೆ ವರದಿ ಸಲ್ಲಿಸಲಾಗುವುದು' ಎಂದೂ ಸಂಜೀವ್ ಪಾಟೀಲ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.