ADVERTISEMENT

ಕಾಲು ಮುರಿದರೂ ಇಬ್ಬರ ಪ್ರಾಣ ಉಳಿಸಿದ ಕಾನ್‌ಸ್ಟೆಬಲ್‌

ಚಂದ್ರಕಾಂತ ಮಸಾನಿ
Published 14 ಆಗಸ್ಟ್ 2018, 20:41 IST
Last Updated 14 ಆಗಸ್ಟ್ 2018, 20:41 IST
ಮಲ್ಲಿಕಾರ್ಜುನ ಜಲ್ದೆ
ಮಲ್ಲಿಕಾರ್ಜುನ ಜಲ್ದೆ   

ಬೀದರ್‌: ಜಿಲ್ಲೆಯ ಕಮಲನಗರ ತಾಲ್ಲೂಕಿನ ಮುರ್ಕಿಯಲ್ಲಿ ಮಕ್ಕಳ ಕಳ್ಳರೆಂಬ ವದಂತಿಯಿಂದಾಗಿ ಗ್ರಾಮಸ್ಥರು ನಡೆಸಿದ ಗುಂಪು ಹಲ್ಲೆಯಲ್ಲಿ ಕಾಲು ಮುರಿದುಕೊಂಡರೂ ಇಬ್ಬರ ಪ್ರಾಣ ರಕ್ಷಿಸಿದ್ದು ಪೊಲೀಸ್‌ ಕಾನ್‌ಸ್ಟೆಬಲ್‌ ಮಲ್ಲಿಕಾರ್ಜುನ ಜಲ್ದೆ ಅವರಿಗೆ ಅದು ಮರೆಯಲಾಗದ ಘಟನೆ.

ಉದ್ರಿಕ್ತ ಗುಂಪು ಸಾವಿರಾರು ಜನರ ಸಮ್ಮುಖದಲ್ಲೇ ಅಮಾಯಕನನ್ನು ಕೈಕಟ್ಟಿ ಎಳೆದು ಬಡಿಗೆಗಳಿಂದ ಹೊಡೆದು, ಕಲ್ಲು ಎತ್ತಿಹಾಕಿ ಅಮಾನವೀಯವಾಗಿ ಕೊಂದು ಹಾಕಿದ ಚಿತ್ರಣ ಕಣ್ಮುಂದೆ ಬಂದರೆ ಸಾಕು ಅವರು ಆತಂಕಗೊಳ್ಳುತ್ತಾರೆ.

ಮುರ್ಕಿ ಘಟನೆಗೆ ಒಂದು ತಿಂಗಳಾಗಿದೆ. ಗುಂಪು ಹಲ್ಲೆಯ ಸಂದರ್ಭದಲ್ಲಿ ಖತಾರ್ ಪ್ರಜೆಯ ರಕ್ಷಣೆ ಮಾಡಲು ಹೋದ ಕಮಲನಗರ ಠಾಣೆಯ ಕಾನ್‌ಸ್ಟೆಬಲ್‌ ಮಲ್ಲಿಕಾರ್ಜುನ ಅವರು ಗುಂಪಿನಿಂದ ತೂರಿ ಬಂದ ದೊಡ್ಡ ಕಲ್ಲೊಂದು ಬಡಿದು ಮೊಣಕಾಲು ಚಿಪ್ಪು ಸೀಳಿ ನಡೆಯಲಾಗದ ಸ್ಥಿತಿಯಲ್ಲಿದ್ದಾರೆ. ಊರುಗೋಲು ಇಲ್ಲದೆ ಹೆಜ್ಜೆಗಳನ್ನು ಇಡುವ ಸ್ಥಿತಿಯಲ್ಲಿ ಇಲ್ಲ. ಆದರೂ ಅವರಲ್ಲಿನ ಧೈರ್ಯ ಮಾತ್ರ ಕಡಿಮೆಯಾಗಿಲ್ಲ.

ADVERTISEMENT

‘ಸಂಜೆ 6 ಗಂಟೆ ಆಗಿರಬಹುದು. ಕಮಲನಗರ ಪೊಲೀಸ್‌ ಠಾಣೆಗೆ ಕರೆಯೊಂದು ಬಂದಿತು. ಮುರ್ಕಿಯಲ್ಲಿ ಕಳ್ಳರು ಬಂದಿದ್ದಾರೆ ತಕ್ಷಣ ಬನ್ನಿ ಎಂದು ಹೇಳಿ ಫೋನ್‌ ಇಟ್ಟರು. ಠಾಣೆಯಲ್ಲಿದ್ದ ಎಎಸ್ಐ ಮನ್ಮಥಪ್ಪ, ಹೆಡ್‌ಕಾನ್‌ಸ್ಟೆಬಲ್‌ ಅಮೃತಪ್ಪ, ಕಾನ್‌ಸ್ಟೆಬಲ್‌ ರಾಜಕುಮಾರ ಹಾಗೂ ನಾನು ಜೀಪ್‌ನಲ್ಲಿ ಹೊರಟೆವು. ಮುರ್ಕಿಗೆ ಹೋದಾಗ ಅಲ್ಲಿ ಸುಮಾರು ಎರಡು ಸಾವಿರ ಜನ ಸೇರಿದ್ದರು. ಹೊಸ ಕಾರೊಂದು ಹಳ್ಳದ ಕೆಳಗೆ ಬಿದ್ದಿತ್ತು. ಅಲ್ಲಿ ಸೇರಿದವರೆಲ್ಲ ಅವರನ್ನು ಹೊಡೆಯಿರಿ, ಹೊಡೆಯಿರಿ... ಎಂದು ಕೂಗಾಡುತ್ತಿದ್ದರು. ಏನಾಗಿದೆ ಎನ್ನುವುದು ನಮಗೂ ತಕ್ಷಣ ತಿಳಿಯಲಿಲ್ಲ’ ಎಂದು ಮಲ್ಲಿಕಾರ್ಜುನ ಜಲ್ದೆ ಅವರು ಕರಾಳ ಘಟನೆಯನ್ನು ವಿವರಿಸಿದರು.

‘ಜೀಪ್‌ನಲ್ಲಿ ತಲವಾರ್‌ ಹಾಗೂ ಶಸ್ತ್ರಾಸ್ತ್ರಗಳು ಇವೆ. ಸಮೀಪ ಹೋಗಬೇಡಿ ಎಂದು ಜನ ಹೆದರಿಸಲು ಪ್ರಯತ್ನಿಸಿದರು. ಅಪಘಾತದಿಂದಾಗಿ ಹಳ್ಳಕ್ಕೆ ಉರುಳಿ ಬಿದ್ದಿದ್ದ ಕಾರಿನಿಂದ ಹೊರಗೆ ಬರಲು ಅದರಲ್ಲಿದ್ದ ಮೂವರು ಹೆದರಿದ್ದರು. ಅಷ್ಟರಲ್ಲಿ ಮುಸ್ಲಿಂ ಯುವಕನೊಬ್ಬ ಅಲ್ಲಿಗೆ ಬಂದು ಅವರು ಮಕ್ಕಳ ಕಳ್ಳರಲ್ಲ ಎಂದು ಕೂಗಿ ಹೇಳ ತೊಡಗಿದ. ಗುಂಪು ಅವನನ್ನು ಹೊಡೆಯಲು ಧಾವಿಸಿತು. ತಕ್ಷಣ ನಾನು ಅಡ್ಡಲಾಗಿ ನಿಂತು ಉದಗೀರ್‌ ರಸ್ತೆಯತ್ತ ಓಡಿ ಹೋಗುವಂತೆ ಆತನಿಗೆ ಸೂಚಿಸಿದೆ. ಆತ ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಹೋದ’ ಎಂದು ಹೇಳಿದರು.

‘ಕಾರಿನೊಳಗೆ ಇದ್ದ ಚಾಲಕ ಸಲಾಹಂನಿಗೆ ಕಟ್ಟಿಗೆ ತುಂಡಿನಿಂದ ಬಲವಾಗಿ ಹೊಡೆದು ಗಾಯಗೊಳಿಸಿದ್ದರು. ಕೆಲವರು ಕಲ್ಲು ತೂರಲು ಆರಂಭಿಸಿದರು. ಇನ್ನು ಕೆಲವರು ತಡೆಯಲು ಪ್ರಯತ್ನಿಸಿದರು. ಈ ನಡುವೆ ಎಎಸ್‌ಐ ಮನ್ಮಥಪ್ಪ ಅವರ ಮೇಲೂ ಕಲ್ಲು ತೂರಿದರು. ಕ್ಷಣಾರ್ಧದಲ್ಲಿ ಗುಂಪಿನ ಮನಸ್ಥಿತಿಯೇ ಬದಲಾಯಿತು’ ಎಂದು ಗುಂಪು ಉದ್ರಿಕ್ತ ರೂಪ ಪಡೆದದ್ದನ್ನು ಎಳೆ ಎಳೆಯಾಗಿ ಬಿಡಿಸಿ ಇಟ್ಟರು.

‘ಕಮಲನಗರ ಪಿಎಸ್‌ಐ ವಿ.ಬಿ.ಯಾದವಾಡ ಇನ್ನಷ್ಟು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಬಂದರು. ಪೊಲೀಸರು ಹಾಗೂ ಗುಂಪಿನಲ್ಲಿದ್ದವರ ಮಧ್ಯೆ ತಳ್ಳಾಟ ಮುಂದುವರಿದಿತ್ತು. ಸಾವಿರಾರು ಜನರನ್ನು ನಿಯಂತ್ರಿಸುವುದು ಕಷ್ಟವಾಯಿತು. ಮೈಯೆಲ್ಲ ಬೆವತು ದೇಹದಲ್ಲಿನ ಶಕ್ತಿ ಕುಂದುತ್ತ ಸಾಗಿತು. ಬೆರಳೆಣಿಕಯ ಪೊಲೀಸರ ಮುಂದೆ ಜನರ ಬಲ ಹೆಚ್ಚಾಯಿತು.’

‘ಗುಂಪಿನಲ್ಲಿದ್ದವರು ಕಾರಿನ ಡಿಕ್ಕಿ ತೆಗೆದು ಕಾರಿನಲ್ಲಿದ್ದ ಎಂಜಿನಿಯರ್‌ ಆಜಂ ಉಸ್ಮಾನ್‌ನನ್ನು ಹಗ್ಗದಿಂದ ಕೈಕಟ್ಟಿ 50 ಮೀಟರ್‌ ವರೆಗೆ ರಸ್ತೆ ಮೇಲೆ ಎಳೆದು ಒಯ್ದರು. ಕೆಲವರು ಕಾರಿನತ್ತ ದೊಡ್ಡ ಕಲ್ಲುಗಳನ್ನು ಎಸೆಯಲು ಶುರು ಮಾಡಿದಾಗ ಪೊಲೀಸರು ತಡೆಗೋಡೆಯಾಗಿ ನಿಂತು ರಕ್ಷಣೆ ಮಾಡಿದರು’ ಎಂದರು.

‘ಆಜಂನನ್ನು ಹಾವಿಗೆ ಹೊಡೆದಂತೆ ಉರುಳಾಡಿಸಿ ಹೊಡೆಯಲು ಆರಂಭಿಸಿದರು. ಸರ್ಕಲ್‌ ಇನ್‌ಸ್ಪೆಕ್ಟರ್‌ ದಿಲೀಪ ಸಾಗರ ಅವರು ಸತ್ತಿದ್ದಾನೆ ಬಿಡ್ರೋ ಎಂದು ಜೋರಾಗಿ ಕೂಗಿಕೊಂಡರೂ ಜನ ಬಿಡಲಿಲ್ಲ. ನಮ್ಮ ಮೇಲೂ ಕಲ್ಲು ತೂರಲು ಆರಂಭಿಸಿದರು. ಎಂಟು, ಒಂಬತ್ತು ಜನ ಪೊಲೀಸರಿಗೂ ಗಂಭೀರ ಗಾಯಗಳಾದವು. ಕೆಲವರಂತೂ ಕಾರಿಗೆ ಬೆಂಕಿ ಹಚ್ಚಲು ಮುಂದಾದರು. ಅಷ್ಟರಲ್ಲಿ ಔರಾದ್‌ ಪಿಎಸ್‌ಐ ನಾನಾಗೌಡ ಅವರು ಪೊಲೀಸ್‌ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿ ಲಾಠಿ ಬೀಸಿ ಜನರನ್ನು ಚದುರಿಸಿದರು’ ಎಂದು ಹೇಳಿದರು.

‘ಕೆಲ ಹೊತ್ತಿನಲ್ಲಿ ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಬಂದರು. ಯಾರೋ ಒಬ್ಬರು ಕಾರಿನ ಮೇಲೆ ದೊಡ್ಡ ಕಲ್ಲು ಎಸೆದಾಗ ಅದನ್ನು ತಡೆಯಲು ಪ್ರಯತ್ನಿಸಿದೆ. ಅದು ನನ್ನ ಮೊಣಕಾಲಿಗೆ ಬಡಿದು ರಕ್ತಸ್ರಾವ ಆಯಿತು. ನೋವು ತಾಳಲಾಗದೆ ಹೊರಳಾಡಿದಾಗ ಕುಶನೂರು ಪೊಲೀಸರು ಕಮಲನಗರ ಆಸ್ಪತ್ರೆಗೆ ತಂದು ದಾಖಲು ಮಾಡಿದರು’ ಎಂದು ತಿಳಿಸಿದರು.

‘ಕಮಲನಗರ ವೈದ್ಯರು ಆಂಬುಲೆನ್ಸ್‌ನಲ್ಲಿ ಭಾಲ್ಕಿಗೆ ಕಳಿಸಿ ಚಿಕಿತ್ಸೆ ಕೊಡಿಸಿದರು. ಹೆಚ್ಚಿನ ಚಿಕಿತ್ಸೆಗೆ ಬೀದರ್‌ನ ಖಾಸಗಿ ಆಸ್ಪತ್ರೆಗೆ ದಾಖಲಾದೆ. ಬೀದರ್‌ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿಸಿದಾಗ ಮೊಣಕಾಲು ಚಿಪ್ಪು ಸೀಳಿರುವುದು ಗೊತ್ತಾಯಿತು. ಚಿಕಿತ್ಸೆಯ ನಂತರ ಈಗ ಕಾಲಿಗೆ ಹಾಕಿದ್ದ ಬ್ಯಾಂಡೇಜ್‌ ತೆಗೆದಿದ್ದಾರೆ. ಆದರೆ ನಡೆದಾಡುವ ಸ್ಥಿತಿಯಲ್ಲಿ ಇಲ್ಲ’ ಎಂದು ಮಲ್ಲಿಕಾರ್ಜುನ ಮಾತು ಮುಗಿಸಿದರು.

ವಾಟ್ಸ್‌ಆ್ಯಪ್‌ನ ಒಂದು ಸಂದೇಶ ಸ್ವಲ್ಪ ಸಮಯದಲ್ಲಿಯೇ ಮುರ್ಕಿ ತಾಂಡಾ, ಮುರ್ಕಿ, ಮುರ್ಕಿವಾಡಿ, ಶಿವಪುರ ಹಾಗೂ ಶಿವಪುರ ತಾಂಡಾದ ಜನ ಒಂದೆಡೆ ಸೇರುವಂತೆ ಮಾಡಿತು. ಒಂದು ಜೀವವನ್ನೂ ಬಲಿ ತೆಗೆದುಕೊಂಡಿತು.

ಜನರಿಗೆ ಮಾನವೀಯ ಪ್ರಜ್ಞೆ ಇಲ್ಲವಾಗಿದೆ. ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದಿತ್ತು. ಜನ ಇಷ್ಟು ಒರಟಾಗಿ ನಡೆದುಕೊಳ್ಳುತ್ತಾರೆ ಎಂದು ಭಾವಿಸಿರಲಿಲ್ಲ ಎನ್ನುವುದು ಮಲ್ಲಿಕಾರ್ಜುನ ಅವರ ಮಾತಿನಲ್ಲಿ ವ್ಯಕ್ತವಾಯಿತು. ಪೊಲೀಸರು ಪ್ರಾಣದ ಹಂಗು ತೊರೆದು ಎರಡು ತಾಸು ಹೋರಾಟ ನಡೆಸಿ ಇಬ್ಬರ ಜೀವ ಉಳಿಸಿದ ಹೆಮ್ಮೆ ಅವರಲ್ಲಿತ್ತು.

**

ಕೃಷಿ ಕಾರ್ಮಿಕನ ಪುತ್ರ

ಬೀದರ್: ಮಲ್ಲಿಕಾರ್ಜುನ ಜಲ್ದೆ ಅವರು ಭಾಲ್ಕಿ ತಾಲ್ಲೂಕಿನ ಧನ್ನೂರ ಗ್ರಾಮದವರು. ತಂದೆ ವೈಜಿನಾಥ ಕೃಷಿ ಕಾರ್ಮಿಕರಾದರೆ, ತಾಯಿ ಕಮಲಾಬಾಯಿ ಮನೆಗೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಮಲ್ಲಿಕಾರ್ಜುನ ಒಬ್ಬರೇ ಪುತ್ರ. ನಾಲ್ವರು ಪುತ್ರಿಯರು ಇದ್ದಾರೆ.

ಧನ್ನೂರ ಗ್ರಾಮದಲ್ಲಿ ಎಸ್ಸೆಸ್ಸೆಲ್ಸಿ ವರೆಗೆ ಓದಿದ್ದು, ಹಲಬರ್ಗಾ ಗ್ರಾಮದಲ್ಲಿ ಪಿಯುಸಿ ಓದಿದ್ದಾರೆ. ಮೈಸೂರಿನ ಕರ್ನಾಟಕ ರಾಜ್ಯ ಮುಕ್ತವಿಶ್ವವಿದ್ಯಾಲಯದಿಂದ ಬಿ.ಎ. ಪದವಿ ಪಡೆದಿದ್ದಾರೆ.

2014ರ ಮೇ 23ರಂದು ವಿಜಯಪುರದ ಇಂಡಿಯನ್‌ ರಿಸರ್ವ್‌ ಬೆಟಾಲಿಯನ್‌ (ಐಆರ್‌ಬಿ) ಸೇರಿದ್ದರು. ಅಲ್ಲಿ17 ತಿಂಗಳು ಕೆಲಸ ಮಾಡಿದ್ದಾರೆ. ಬೀದರ್‌ ಜಿಲ್ಲೆಯಲ್ಲಿ ಕಾನ್‌ಸ್ಟೆಬಲ್‌ ನೌಕರಿ ದೊರೆತ ನಂತರ ಐಆರ್‌ಬಿಗೆ ರಾಜೀನಾಮೆ ನೀಡಿ 2015ರ ಡಿಸೆಂಬರ್‌ 9 ರಂದು ಪೊಲೀಸ್‌ ಇಲಾಖೆಗೆ ಸೇರಿದ್ದಾರೆ.

26 ವರ್ಷದ ಮಲ್ಲಿಕಾರ್ಜುನ ಅವಿವಾಹಿತರು.

**

ಅಸ್ಸಾಂ ರೈಫಲ್‌ ಪ್ಯಾರಾ ಮಿಲಿಟರಿಯಲ್ಲಿ 120 ದಿನ ತರಬೇತಿ ಪಡೆದಿದ್ದೆ. ಗುಂಪು ದಾಳಿಯನ್ನು ಎದುರಿಸುವ ತರಬೇತಿ ಪಡೆದಿದ್ದೆ. ಆದರೂ, ಇಲ್ಲಿ ಗುಂಪನ್ನು ನಿಯಂತ್ರಿಸುವುದು ಬಹಳ ಕಷ್ಟವಾಯಿತು.

–ಮಲ್ಲಿಕಾರ್ಜುನ ಜಲ್ದೆ, ಕಾನ್‌ಸ್ಟೆಬಲ್‌

ಇವನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.