ADVERTISEMENT

ತಗ್ಗು ಪ್ರದೇಶಗಳಲ್ಲಿ ನೆಲಮಾಳಿಗೆ ನಿರ್ಮಾಣ ನಿಷೇಧ: ಡಿ.ಕೆ. ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 20 ಮೇ 2025, 20:45 IST
Last Updated 20 ಮೇ 2025, 20:45 IST
ಬೆಂಗಳೂರಿನ ಎಂ.ಎಸ್. ಪಾಳ್ಯದಲ್ಲಿ ವಿದ್ಯುತ್‌ ಅವಘಡದಿಂದ ಮೃತಪಟ್ಟ ಮನಮೋಹನ್‌ ಕಾಮತ್‌, ದಿನೇಶ್‌ ಅವರ ಕುಟುಂಬದ ಸದಸ್ಯರನ್ನು ಮಂಗಳವಾರ ಭೇಟಿ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌,  ಸಾಂತ್ವನ ಹೇಳಿದರು.
ಬೆಂಗಳೂರಿನ ಎಂ.ಎಸ್. ಪಾಳ್ಯದಲ್ಲಿ ವಿದ್ಯುತ್‌ ಅವಘಡದಿಂದ ಮೃತಪಟ್ಟ ಮನಮೋಹನ್‌ ಕಾಮತ್‌, ದಿನೇಶ್‌ ಅವರ ಕುಟುಂಬದ ಸದಸ್ಯರನ್ನು ಮಂಗಳವಾರ ಭೇಟಿ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌,  ಸಾಂತ್ವನ ಹೇಳಿದರು.   

ಬೆಂಗಳೂರು: ಕೆರೆಗಳ ಹತ್ತಿರ ಹಾಗೂ ತಗ್ಗು ಪ್ರದೇಶಗಳಲ್ಲಿ ನೆಲಮಾಳಿಗೆ ನಿರ್ಮಾಣ ಮಾಡಿ ವಾಹನ ನಿಲ್ದಾಣಕ್ಕೆ ಅವಕಾಶ ನೀಡದಂತೆ ಕಾನೂನು ರೂಪಿಸಲಾಗುವುದು. ಮಳೆ ಕಡಿಮೆಯಾದ ನಂತರ ಕಾರ್ಯಸೂಚಿ ಬಿಡುಗಡೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಬೆಂಗಳೂರಿನಲ್ಲಿ ಸೋಮವಾರ ರಾತ್ರಿ ವಿದ್ಯುತ್ ಅವಘಡ ನಡೆದ ಬಿಟಿಎಂ 2ನೇ ಹಂತದ ಡಾಲರ್ಸ್‌ ಕಾಲೊನಿ ಬಳಿಯ ಎಂ.ಎಸ್. ಪಾಳ್ಯಕ್ಕೆ ಭೇಟಿ ನೀಡಿ, ಮೃತರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ನಂತರ ಮಾತನಾಡಿದ ಅವರು, ಎತ್ತರದ ಪ್ರದೇಶಗಳ ಪ್ರತಿ ಮನೆಯ ನೆಲಮಾಳಿಗೆಯಲ್ಲೇ ವಾಹನಗಳ ನಿಲುಗಡೆ ಕಡ್ಡಾಯಗೊಳಿಸಲು ಯೋಜನೆ ರೂಪಿಸಲಾಗುವುದು ಎಂದರು.

ನೆಲಮಹಡಿಯಲ್ಲಿ ಸಿಲುಕಿದ್ದ ನೀರನ್ನು ಈಗಾಗಲೇ ಪಂಪ್‌ ಮೂಲಕ ಹೊರಹಾಕಲಾಗಿದೆ. ಪೊಲೀಸರು ಹಾಗೂ ಸಹಾಯ ಮಾಡಲು ಬಂದ ಅಧಿಕಾರಿಗಳೂ ವಿದ್ಯುತ್‌ ಸ್ಪರ್ಶದಿಂದ ತೊಂದರೆ ಅನುಭವಿಸಿದ್ದಾರೆ. ಮಳೆಯಿಂದ ಮೃತಪಟ್ಟ ನಾಗರಿಕರ ಕುಟುಂಬಗಳಿಗೆ ತಲಾ ₹5 ಲಕ್ಷ ಪರಿಹಾರ ನೀಡಲಾಗುವುದು ಎಂದು ಹೇಳಿದರು. 

ADVERTISEMENT

‘ಬಿಬಿಎಂಪಿ ಹಾಗೂ ಬೆಂಗಳೂರು ನಗರ ನೀರು ಸರಬರಾಜು ಮಂಡಳಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನ್ನುವ ಆರೋಪ ಸರಿಯಲ್ಲ. 1.40 ಕೋಟಿ ಜನಸಂಖ್ಯೆ ಇದೆ. ಎಲ್ಲರೂ ಒಂದು ತಂಡವಾಗಿ ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪರಿಸ್ಥಿತಿಯನ್ನು ಅವಲೋಕಿಸಿ, ನೆರವು ನೀಡಲಾಗುತ್ತಿದೆ. ಕೆಲವರು ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ’ ಎಂದು ಆರೋಪಿಸಿದರು.  

‘ಇಂತಹ ಸಮಯದಲ್ಲಿ ಜನರಿಗೆ ನೆರವಾಗದೆ, ಸರ್ಕಾರದ ಜತೆ ಕೈಜೋಡಿಸದೇ ಬಿಜೆಪಿ ನಾಯಕರು ಟೀಕೆ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ನಾವು ಎರಡು ವರ್ಷದ ಸಂಭ್ರಮಾಚರಣೆ ಮಾಡಿದ್ದೇವೆ. ನರೇಂದ್ರ ಮೋದಿ ಸರ್ಕಾರಕ್ಕೆ ಐದು ವರ್ಷ ತುಂಬಿದಾಗ ಸಂಭ್ರಮ ಮಾಡಿರಲಿಲ್ಲವೇ? ಸಂತೋಷ ಪಡಬೇಡ ಎಂದು ಹೇಳಿದರೆ ಹೇಗೆ? ಕಾರ್ಯಕ್ರಮ ಮೊದಲೇ ನಿಗದಿಯಾಗಿತ್ತು ಅಲ್ಲವೇ’ ಎಂದು ಪ್ರಶ್ನಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.