ADVERTISEMENT

ನಟ ಚೇತನ್ ಅಹಿಂಸಾ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕ್ರಿಯೆಗೆ ಅಸ್ತು

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2023, 15:41 IST
Last Updated 19 ಆಗಸ್ಟ್ 2023, 15:41 IST
ನಟ ಚೇತನ್ ಕುಮಾರ್ , ಹೈಕೋರ್ಟ್
ನಟ ಚೇತನ್ ಕುಮಾರ್ , ಹೈಕೋರ್ಟ್   

ಬೆಂಗಳೂರು: ಹಿಜಾಬ್ ಪ್ರಕರಣದಲ್ಲಿ ತೀರ್ಪು ನೀಡಿದ್ದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಆಕ್ಷೇಪಾರ್ಹ ಟ್ವೀಟ್ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕನ್ನಡದ ಚಿತ್ರನಟ ಚೇತನ್ ಕುಮಾರ್ ಹಾಗೂ ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ ಹಾಕಿದ ಆರೋಪದಡಿ ತಮಿಳುನಾಡಿನ 'ತೌಹೀದ್ ಜಮಾತ್' ಅಧ್ಯಕ್ಷ ಆರ್. ರಹಮತ್ ಉಲ್ಲಾ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಕರ್ನಾಟಕದ ಅಡ್ವೊಕೇಟ್ ಜನರಲ್ (ಎಜಿ) ಕೆ. ಶಶಿಕಿರಣ್ ಶೆಟ್ಟಿ ಅನುಮತಿಸಿದ್ದಾರೆ.

'ನ್ಯಾಯಾಂಗ ಮತ್ತು ನ್ಯಾಯಮೂರ್ತಿಗಳ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದಡಿ ಚೇತನ್‌ ಅಹಿಂಸಾ, ರಹಮತ್ ಉಲ್ಲಾ, ಸಿಪಿಐ (ಎಂ) ನಾಯಕ ಸೀತಾರಾಂ ಯೆಚೂರಿ ಹಾಗೂ "ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ" (ಸಿಎಫ್ಐ) ಅಧ್ಯಕ್ಷ ಅತ್ತಾವುಲ್ಲಾ ಪುಂಜಾಲಕಟ್ಟೆ ವಿರುದ್ಧ ನ್ಯಾಯಾಂಗ ನಿಂದನೆ ಕಾಯ್ದೆಯ ಕಲಂ 15(1)(ಬಿ) ಅಡಿ ಕ್ರಮ ಕೈಗೊಳ್ಳಲು ಅನುಮತಿಸಬೇಕು' ಎಂದು ಕೋರಿ ನಗರದ ಸಾಮಾಜಿಕ ಕಾರ್ಯಕರ್ತ ಗಿರೀಶ್ ಭಾರದ್ವಾಜ್ ಮನವಿ ಮಾಡಿದ್ದರು.

ಚೇತನ್ ಟ್ವೀಟ್ ಏನಿತ್ತು?

ADVERTISEMENT

ಅತ್ಯಾಚಾರದ ಆರೋಪಕ್ಕೆ ಸಂಬಂಧಿಸಿದಂತೆ ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾದ ಪ್ರಕರಣದಲ್ಲಿ ಚೇತನ್ ಅಹಿಂಸಾ ಎರಡು ವರ್ಷಗಳ ಹಿಂದೆ ಒಂದು ಟ್ವೀಟ್ ಮಾಡಿದ್ದರು.

'ಈ ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ, ತೀರ್ಪಿನಲ್ಲಿ ಆಘಾತಕಾರಿ ಹೇಳಿಕೆಯೊಂದನ್ನು ಉಲ್ಲೇಖಿಸಿದ್ದಾರೆ. ಈಗ ಅದೇ ನ್ಯಾಯಮೂರ್ತಿ ಶಾಲೆಗಳಲ್ಲಿ ಹಿಜಾಬ್ ಧರಿಸಬಹುದೇ ಅಥವಾ ಇಲ್ಲವೇ ಎಂಬುದನ್ನು ತೀರ್ಮಾನಿಸಲಿದ್ದಾರೆ. ಅವರಿಗೆ ಅಗತ್ಯವಾದ ಸ್ಪಷ್ಟತೆ ಇದೆಯೇ' ಎಂದು ಟ್ವೀಟ್ ನಲ್ಲಿ ಪ್ರಶ್ನೆ ಮಾಡಿದ್ದರು.

ಎ.ಜಿ.ಅನುಮತಿ: 'ಇದು ದುರುದ್ದೇಶಪೂರಿತ, ವ್ಯಾಪ್ತಿ ಮೀರಿದ ಮತ್ತು ವಿವಾದಾತ್ಮಕ ಹೇಳಿಕೆಯಾಗಿದೆ. ನ್ಯಾಯಮೂರ್ತಿಯೊಬ್ಬರ ಮೇಲಿನ ನಿಷ್ಪಕ್ಷಪಾತದ ಬಗ್ಗೆ ಸಾರ್ವಜನಿಕರಿಗೆ ಸಂಶಯ ಮೂಡಿಸುವಂತಿದೆ. ಅವರು ತಮ್ಮ ಸಾಂವಿಧಾನಿಕವಾದ ನ್ಯಾಯಯತ ಕರ್ತವ್ಯ ನಿಭಾಯಿಸಲು ಮುಜುಗರದ ಸನ್ನಿವೇಶ ಸೃಷ್ಟಿಸುತ್ತದೆ. ಹೀಗಾಗಿ, ನಟ ಚೇತನ್ ಅಹಿಂಸಾ ಮಾಡಿರುವ ಟ್ವೀಟ್, ಕಾಯ್ದೆಯ ಕಲಂ 2 (ಸಿ) ಅಡಿ ಕ್ರಿಮಿನಲ್ ನ್ಯಾಯಾಂಗ ನಿಂದನೆಗೆ ಸಮನಾಗಿದೆ. ಈ ಹಿನ್ನೆಲೆಯಲ್ಲಿ ಚೇತನ್ ಅಹಿಂಸಾ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಅರ್ಜಿದಾರರಿಗೆ ಅನುಮತಿಸಿದ್ದೇನೆ' ಎಂದು ಅಡ್ವೊಕೇಟ್ ಜನರಲ್ ವಿವರಿಸಿದ್ದಾರೆ.

ರಹಮತ್ ಉಲ್ಲಾ ಹೇಳಿಕೆ: ಹಿಜಾಬ್ ತೀರ್ಪಿಗೆ ಸಂಬಂಧಿಸಿದಂತೆ, 'ತೌಹೀದ್ ಜಮಾತ್' ನ ರಹಮತ್ ಉಲ್ಲಾ, 'ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆಯಂತೆ ಹೈಕೋರ್ಟ್ ಹಿಜಾಬ್ ತೀರ್ಪು ನೀಡಿದೆ. ಒಂದು ವೇಳೆ ನ್ಯಾಯಮೂರ್ತಿಗಳು ಕೊಲೆಯಾದರೆ ಅವರ ಸಾವಿಗೆ ಅವರೇ ಜವಾಬ್ದಾರಿ' ಎಂದು ಮಧುರೈನಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದರು.

'ಈ ಹೇಳಿಕೆಯು ನ್ಯಾಯಾಂಗ ನಿಂದನೆ ಕಾಯ್ದೆಯ ಕಲಂ 2(ಸಿ) ಅಡಿ ನಿಂದನೆಗೆ ಸಮನಾಗಿದೆ. ಇಂತಹ ಹೇಳಿಕೆಯ ಮೂಲಕ ಅವರು ನ್ಯಾಯಾಂಗದ ಸ್ವಾತಂತ್ರ್ಯ, ಪ್ರಾಮಾಣಿಕತೆ ಮತ್ತು ನ್ಯಾಯಿಕ ಸಾಮರ್ಥ್ಯದ ಹಾಗೂ ನ್ಯಾಯಮೂರ್ತಿಗಳ ನಿಷ್ಪಕ್ಷಪಾತ ನಿಲುವಿನ ಮೇಲೆ ದಾಳಿ ಮಾಡುವುದರ ಜೊತೆಗೆ ನ್ಯಾಯಾಂಗದ ಘನತೆಗೆ ಕುಂದುಂಟು ಮಾಡಿದ್ದಾರೆ' ಎಂದು ಎಜಿ ನೀಡಿರುವ ಅನುಮತಿ ಪತ್ರದಲ್ಲಿ ವಿವರಿಸಲಾಗಿದೆ.

ನ್ಯಾ. ಕೃಷ್ಣ ಎಸ್. ದೀಕ್ಷಿತ್ ಹಾಗೂ ಕೆ.ಶಶಿಕಿರಣ ಶೆಟ್ಟಿ

ಯೆಚೂರಿ ವಿರುದ್ಧದ ಆರೋಪಕ್ಕೆ ನಕಾರ: ಸಿಪಿಐ (ಎಂ) ನಾಯಕ ಸೀತಾರಾಂ ಯೆಚೂರಿ, 'ಹೆಣ್ಣು ಮಕ್ಕಳಿಗೆ ಸಮಾನ ಅವಕಾಶ ಮತ್ತು ಶಿಕ್ಷಣದ ಹಕ್ಕನ್ನು ನಿರಾಕರಿಸುವ ಇದು ತಾರತಮ್ಯದಿಂದ ಕೂಡಿದ ತೀರ್ಪು. ತಾರತಮ್ಯ ರಹಿತವಾಗಿ, ಸಮಾನವಾಗಿ ಹಕ್ಕು ಕಲ್ಪಿಸಿರುವುದರಿಂದ ಕೇರಳ ಮಾನವ ಅಭಿವೃದ್ಧಿಯಲ್ಲಿ ಮುಂದಿದೆ ಎಂದು ನೀಡಿರುವ ಹೇಳಿಕೆ ನ್ಯಾಯಾಂಗ ನಿಂದನೆ ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲ' ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಅಂತೆಯೇ, ಸಿಎಫ್ಐ ನಾಯಕ ಅತ್ತಾವುಲ್ಲಾ ಪುಂಜಾಲಕಟ್ಟೆ, ‘ನ್ಯಾಯಾಲಯವು ತೀರ್ಪು ನೀಡಿದೆಯೇ ವಿನಃ ನ್ಯಾಯದಾನ ಮಾಡಿಲ್ಲ ಎಂದು ನಮಗನ್ನಿಸುತ್ತಿದೆ. ಧಾರ್ಮಿಕ ಪಠ್ಯವನ್ನು ನ್ಯಾಯಾಂಗ ವ್ಯಾಖ್ಯಾನಿಸುವುದು ಎಚ್ಚರಿಕೆಯ ಗಂಟೆ‘ ಎಂದು ಹೇಳಿಕೆ ನೀಡಿದ್ದರು.

'ಯೆಚೂರಿ ಮತ್ತು ಅತ್ತಾವುಲ್ಲಾ ಅವರು ತೀರ್ಪನ್ನು ಟೀಕಿಸಿದ್ದಾರೆಯೇ ವಿನಃ ತೀರ್ಪು ನೀಡಿರುವ ನ್ಯಾಯಮೂರ್ತಿಗಳ ವಿರುದ್ಧ ದಾಳಿ ನಡೆಸಿಲ್ಲ. ಹೀಗಾಗಿ, ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಕೋರಿರುವ ಅರ್ಜಿಯನ್ನು ವಜಾ ಮಾಡಲಾಗಿದೆ' ಎಂದು ಅಡ್ವೊಕೇಟ್ ಜನರಲ್ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.

ಹಿಜಾಬ್‌ ಕುರಿತು ತೀರ್ಪು ನೀಡಿದ್ದ ರಾಜ್ಯ ಹೈಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಜೆ.ಎಂ. ಖಾಜಿ ಅವರಿಗೆ ಸದ್ಯ 'ವೈ' ಶ್ರೇಣಿಯ ಭದ್ರತೆ ಒದಗಿಸಲಾಗಿದೆ.

ನ್ಯಾಯಾಂಗ ನಿಂದನಾ ಕಾಯ್ದೆ ಪ್ರಕಾರ ಯಾರೇ ಆದರೂ, ಎಷ್ಟೇ ಕಠೋರವಾಗಿ ತೀರ್ಪನ್ನು ಸದುದ್ದೇಶದಿಂದ ಟೀಕಿಸಬಹುದು. ಆದರೆ, ತೀರ್ಪನ್ನಿತ್ತ ನ್ಯಾಯಾಲಯ ಅಥವಾ ನ್ಯಾಯಾಧೀಶರನ್ನು ಟೀಕಿಸುವಂತಿಲ್ಲ. ಯಾವುದು ತೀರ್ಪಿನ ಟೀಕೆ ಮತ್ತು ಯಾವುದು ನ್ಯಾಯಾಧೀಶರ ಟೀಕೆ ಎಂಬ ವಿಷಯ ಇನ್ನೂ ಜಿಜ್ಞಾಸೆಗೆ ಒಳಪಟ್ಟ ಅಂಶವೇ ಆಗಿ ಉಳಿದಿದೆ. ಈ ದಿಸೆಯಲ್ಲಿ ಕಾನೂನು ಇನ್ನೂ ಪ್ರಬುದ್ಧಮಾನಕ್ಕೆ ಬರಬೇಕಿದೆ.
ಕೆ.ಶಶಿಕಿರಣ ಶೆಟ್ಟಿ, ಅಡ್ವೊಕೇಟ್ ಜನರಲ್ –ಕರ್ನಾಟಕ ಹೈಕೋರ್ಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.