ADVERTISEMENT

ವಿಜಯಪುರ: ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಕುಲಪತಿ ಹುದ್ದೆಗೆ ಪೈಪೋಟಿ

ಪುರುಷರು ಸೇರಿದಂತೆ 45 ಅರ್ಜಿ ಸಲ್ಲಿಕೆ; ಸರ್ಕಾರದ ಹಂತದಲ್ಲಿ ಪರಿಶೀಲನೆ

ಬಸವರಾಜ ಸಂಪಳ್ಳಿ
Published 21 ಆಗಸ್ಟ್ 2020, 19:30 IST
Last Updated 21 ಆಗಸ್ಟ್ 2020, 19:30 IST
ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ
ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ   

ವಿಜಯಪುರ: ಇಲ್ಲಿನ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಖಾಲಿ ಇರುವ ಕುಲಪತಿ ಹುದ್ದೆಗೆ ಭಾರೀ ಪೈಪೋಟಿ ಆರಂಭವಾಗಿದೆ.

ಆಗಸ್ಟ್‌ 14ಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿತ್ತು. ಒಟ್ಟು 45 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಬಾರಿ ಪುರುಷ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಿರುವುದು ವಿಶೇಷ. ಕುಲಪತಿ ಹುದ್ದೆ ಗಿಟ್ಟಿಸಿಕೊಳ್ಳಲು ದೊಡ್ಡಮಟ್ಟದ ಲಾಬಿ ಆರಂಭವಾಗಿದೆ.

ಗುಲಬುರ್ಗಾ ವಿಶ್ವವಿದ್ಯಾಲಯದಲ್ಲಿ ಸದ್ಯ ಕಾರ್ಯನಿರ್ವಹಿಸುತ್ತಿರುವ ಪುಷ್ಪಾ ಸವದತ್ತಿ, ಪರಿಮಳಾ ಅಂಬೇಕರ್‌ ಮತ್ತು ಎನ್‌.ಪಾರ್ವತಿ, ಬಳ್ಳಾರಿ ವಿಶ್ವವಿದ್ಯಾಲಯದ ತುಳಸಿಮಾಲಾ, ಮೈಸೂರು ವಿಶ್ವವಿದ್ಯಾಲಯದ ಪ್ರೊ.ಯಾದವ್‌, ಧಾರವಾಡ ವಿಶ್ವವಿದ್ಯಾಲಯದ ಅಶೋಕ ಶೆಟ್ಟರ್‌, ನೂರ್‌ ಜಹಾನ್‌, ಕನ್ನಡ ಉಪನ್ಯಾಸಕಿ ಎಂ.ಎಸ್.ಆಶಾದೇವಿ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‌ ಆರ್‌.ಸುನಂದಮ್ಮ ಮತ್ತು ಹಣಕಾಸು ಅಧಿಕಾರಿ ಆರ್‌.ಸುನಂದಮ್ಮ ಅರ್ಜಿ ಸಲ್ಲಿಸಿದ ಪ್ರಮುಖರಾಗಿದ್ದಾರೆ ಎಂದು ಉನ್ನತ ಶಿಕ್ಷಣ ಇಲಾಖೆ ಮೂಲಗಳು ಖಚಿತಪಡಿಸಿವೆ.

ADVERTISEMENT

ಪ್ರೊ.ಸಬಿಹಾ ಭೂಮಿಗೌಡ ಅವರು ಕುಲಪತಿ ಹುದ್ದೆಯಿಂದ ನಿವೃತ್ತರಾದ ಬಳಿಕ ಪ್ರೊ.ಓಂಕಾರ ಕಾಕಡೆ ಅವರು ಪ್ರಭಾರ ಕುಲಪತಿಯಾಗಿ ಸದ್ಯ ಕಾರ್ಯನಿರ್ವಹಿಸುತ್ತಿದ್ದು, ಇವರ ಅಧಿಕಾರವಧಿ ಡಿಸೆಂಬರ್‌ 13ರ ವರೆಗೆ ಇದೆ. ಅಷ್ಟರಲ್ಲಿ ಹೊಸ ಕುಲಪತಿ ನೇಮಕವಾಗಬೇಕಿದೆ.

ಸಮಿತಿ ನೇಮಕ

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ತೆರವಾಗಿರುವ ಕುಲಪತಿ ಹುದ್ದೆಗೆ ಆಯ್ಕೆ ಸಂಬಂಧ ರಾಜ್ಯ ಸರ್ಕಾರವು ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿದ್ಧೇಗೌಡ ನೇತೃತ್ವದಲ್ಲಿ ಶೋಧನಾ ಸಮಿತಿ ನೇಮಕ ಮಾಡಿದೆ.

ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಬಿ.ಜಿ.ಮೂಲಿಮನಿ, ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ.ಮೀನಾ ಚಂದಾವರಕರ ಮತ್ತು ಹರಿಯಾಣ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸುಷ್ಮಾ ಯಾದವ್‌ ಅವರು ಶೋಧನಾ ಸಮಿತಿಯ ಸದಸ್ಯರಾಗಿದ್ದಾರೆ.

***

ಕುಲಪತಿ ಹುದ್ದೆಗೆ ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸರ್ಕಾರ ಪರಿಶೀಲಿಸಿ, ಪಟ್ಟಿ ಮಾಡಿ ಶೋಧನಾ ಸಮಿತಿಗೆ ಕಳುಹಿಸಲಿದೆ. ಬಳಿಕ ಸಮಿತಿ ಅರ್ಹ ಮೂವರ ಹೆಸರನ್ನು ಶಿಫಾರಸು ಮಾಡಲಿದೆ
–ಪ್ರೊ.ಸಿದ್ದೇಗೌಡ, ಅಧ್ಯಕ್ಷ, ಕುಲಪತಿ ನೇಮಕ ಶೋಧನಾ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.