ADVERTISEMENT

ಪುಠ್ಯಪುಸ್ತಕ ಪರಿಷ್ಕರಣೆ | ಸುರಪುರ ನಾಯಕರ ಕೊಡುಗೆಗೆ ಕತ್ತರಿ: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 7 ಜೂನ್ 2022, 19:45 IST
Last Updated 7 ಜೂನ್ 2022, 19:45 IST
ರಾಜಾ ಮದಕರಿ ನಾಯಕ
ರಾಜಾ ಮದಕರಿ ನಾಯಕ   

ಚಿತ್ರದುರ್ಗ: ಭಾರತೀಯ ಇತಿಹಾಸದಲ್ಲಿ ಸುರಪುರ ಸಂಸ್ಥಾನಕ್ಕೆ ಅಗ್ರಸ್ಥಾನವಿದೆ. ಆದರೆ, ಚರಿತ್ರೆಯ ಅರಿವೇ ಇಲ್ಲದ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯು ‘ಸುರಪುರ ನಾಯಕರ ಚರಿತ್ರೆಯ ಸಾಂಸ್ಕೃತಿಕ ಕೊಡುಗೆ’ಗಳನ್ನು ಕಡಿತಗೊಳಿಸಿರುವುದು ಸುರಪುರದ ಇತಿಹಾಸಕ್ಕೆ ಬಗೆದ ದ್ರೋಹ ಎಂದು ಚಿತ್ರದುರ್ಗದ ನಾಯಕ ಅರಸು ವಂಶಸ್ಥರಾದ ರಾಜಾ ಮದಕರಿ ನಾಯಕ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಪ್ರಜಾವಾಣಿ’ಯಲ್ಲಿ ಜೂನ್‌ 7ರಂದು ಪ್ರಕಟವಾದ ‘ಪಠ್ಯಪುಸ್ತಕದಲ್ಲಿ ಸುರಪುರ ನಾಯಕರ ಕೊಡುಗೆಗೂ ಕತ್ತರಿ!’ ಶೀರ್ಷಿಕೆಯ ವರದಿಗೆ ಪ್ರತಿಕ್ರಿಯಿಸಿ ಪತ್ರ ಬರೆದಿರುವ ಅವರು, ‘ವಿಜಯನಗರದ ಸಂಸ್ಕೃತಿಯ ಸಂರಕ್ಷಣೆ ಹಾಗೂ ಮುಂದುವರಿಕೆಯ ಧ್ಯೇಯೋದ್ದೇಶವನ್ನಿಟ್ಟುಕೊಂಡು ಸುರಪುರ ನಾಯಕರು ವಿಜಯನಗರೋತ್ತರ ಇತಿಹಾಸದಲ್ಲಿ, ಅದರಲ್ಲೂ ಮುಖ್ಯವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ನೆಲದ ಹಿರಿಮೆ–ಗರಿಮೆಯನ್ನು ಮೆರೆದವರು. ದಕ್ಷಿಣ ಭಾರತದಲ್ಲಿ ಛಲದ ಪ್ರತೀಕವೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದವರು’ ಎಂದು ಹೇಳಿದ್ದಾರೆ.

1858ರಲ್ಲಿ ದಕ್ಷಿಣ ಭಾರತದ ಅರಸರನ್ನೆಲ್ಲಾ ಒಂದುಗೂಡಿಸಿ, ಆಂಗ್ಲರ ವಿರುದ್ಧ ಹೋರಾಡಿದ ಹೆಮ್ಮೆ ಈ ಮನೆತನಕ್ಕಿದೆ. ಈ ಸಂಸ್ಥಾನದ ನಾಯಕರ ಸಾಂಸ್ಕೃತಿಕ ವಿಷಯವನ್ನು ಪ್ರೊ.ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದ ಪಠ್ಯಪುಸ್ತಕ ರಚನಾ ಸಮಿತಿಯು ಪಠ್ಯಪುಸ್ತಕದಲ್ಲಿ ಸೇರಿಸಿ, ನ್ಯಾಯ ದೊರಕಿಸಿಕೊಟ್ಟಿತ್ತು. ಆದರೆ, ಏಕಾಏಕಿ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಇತಿಹಾಸ ಕಡಿತಗೊಳಿಸಿರುವುದು ಸರಿಯಲ್ಲ. ಈ ಲೋಪ ಸರಿಪಡಿಸದಿದ್ದರೆ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು’ ಎಂದು ಸರ್ಕಾರವನ್ನು ಎಚ್ಚರಿಸಿದ್ದಾರೆ.

ADVERTISEMENT

ಸಿ.ಎಂ.ಗೆ ದೂರು
ಸುರಪುರ
: ‘ಪರಿಷ್ಕರಣಾ ಸಮಿತಿ ಸುರಪುರ ಇತಿಹಾಸ ತೆಗೆದು ಹಾಕಿದ್ದು ಅಕ್ಷಮ್ಯ. ಈ ಬಗ್ಗೆ ಮುಖ್ಯಮಂತ್ರಿಗೆ ದೂರು ಸಲ್ಲಿಸಲಾಗುವುದು’ ಎಂದು ಸುರಪುರ ಸಂಸ್ಥಾನದ ವಂಶಸ್ಥ ಡಾ. ರಾಜಾ ಕೃಷ್ಣಪ್ಪನಾಯಕ ತಿಳಿಸಿದ್ದಾರೆ.

‘ನಾಡಿಗೆ ವಿಶಿಷ್ಟ ಕೊಡುಗೆ ನೀಡಿದ ಸುರಪುರ ನಾಯಕರ ಇತಿಹಾಸ ಸಂಕ್ಷಿಪ್ತವಾಗಿತ್ತು. ಅದಕ್ಕೆ ಕತ್ತರಿ ಹಾಕಿದ್ದು ಇತಿಹಾಸಕ್ಕೆ ಮಾಡಿದ ಅಪಚಾರ’ ಎಂದು ಸುರಪುರ ಇತಿಹಾಸ ಸಂಶೋಧನಾ ಕೇಂದ್ರದ ನಿರ್ದೇಶಕ ಭಾಸ್ಕರರಾವ ಮುಡಬೂಳ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.