ADVERTISEMENT

ಕುಕ್ಕರ್‌ ಬಾಂಬ್ | ಇಎಸ್‌ಐ ಸೌಲಭ್ಯದಿಂದ ಚಿಕಿತ್ಸೆ ಪಡೆದಿದ್ದೇನೆ –ಸಂತ್ರಸ್ತ

​ಪ್ರಜಾವಾಣಿ ವಾರ್ತೆ
Published 16 ಜನವರಿ 2023, 21:27 IST
Last Updated 16 ಜನವರಿ 2023, 21:27 IST
ಪುರುಷೋತ್ತಮ ಪೂಜಾರಿ
ಪುರುಷೋತ್ತಮ ಪೂಜಾರಿ   

ಮಂಗಳೂರು: ‘ಖಾಸಗಿ ಉದ್ಯೋಗಿಯಾಗಿರುವ ಮಗಳ ಇಎಸ್‌ಐ ಸೌಲಭ್ಯದಿಂದ ಚಿಕಿತ್ಸೆ ಪಡೆದಿದ್ದೇನೆ. ಇನ್ನು ದೇವರೇ ಗತಿ. ಸರ್ಕಾರದವರು ಚಿಕಿತ್ಸೆ ವೆಚ್ಚ ಭರಿಸುವುದಾಗಿ ಹೇಳಿದ್ದರು. ಇನ್ನೂ ಹಣ ಬಂದಿಲ್ಲ’.

ನಗರದಲ್ಲಿ ನ.19ರಂದು ಸಂಭವಿಸಿದ್ದ ಕುಕ್ಕರ್‌ ಬಾಂಬ್‌ ಸ್ಫೋಟದಲ್ಲಿ ಗಾಯಗೊಂಡ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ (60), ಘಟನೆಯ ಬಳಿಕ ಕುಟುಂಬಕ್ಕೆ ಒದಗಿದ ಸ್ಥಿತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಸೋಮವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರ ಜೊತೆ ಅವರು ಮಾತನಾಡಿದರು.

‘ಸರ್ಕಾರ ಪರಿಹಾರ ಕೊಡುವುದಾಗಿ ಭರವಸೆ ನೀಡಿದೆ. ಯಾವಾಗ ಬರುತ್ತದೆ ಗೊತ್ತಿಲ್ಲ. ಇವತ್ತು ನನ್ನನ್ನು ನೋಡಲು ಬಂದ ಕೆಲವರು ಸ್ವಲ್ಪ ಹಣ ಕೊಟ್ಟರು‘ ಎಂದು ತಿಳಿಸಿದರು.

ADVERTISEMENT

‘ನಾನು 1 ವರ್ಷ ದುಡಿಯುವಂತಿಲ್ಲ ಎಂದು ವೈದ್ಯರು ಸೂಚಿಸಿದ್ದಾರೆ. ವರ್ಷದ ಜೀವನ ಹೇಗೋ ಗೊತ್ತಿಲ್ಲ’ ಎಂದು ಕಣ್ಣೀರಾದರು.

‘ಮಗಳಿಗೆ (ಮೇಘಶ್ರೀ) ಮೇ 3ಕ್ಕೆ ಮದುವೆ ನಿಗದಿಯಾಗಿದೆ. ಗುರುಬೆಳದಿಂಗಳು ಟ್ರಸ್ಟ್‌ನ ಪದ್ಮರಾಜ್‌ ಆರ್‌. ಅವರು ನಮ್ಮ ಮನೆ ನವೀಕರಿಸುತ್ತಿದ್ದಾರೆ. ನಾವು ಈಗ ಗೆಳೆಯರೊಬ್ಬರ ಮನೆಯಲ್ಲಿ ಉಳಿದುಕೊಂಡಿದ್ದೇವೆ. ಅವರು ನಮ್ಮಿಂದ ಬಾಡಿಗೆ ಕೇಳಿಲ್ಲ’ ಎಂದು ಅವರು ನೆರವನ್ನು ಸ್ಮರಿಸಿದರು.

‘ರಿಕ್ಷಾ ಹೊಸತು ಕೊಡಿಸುತ್ತೇವೆ ಎಂದು ಬಿಜೆಪಿಯವರು ಭರವಸೆ ನೀಡಿದ್ದಾರೆ. ಯಾವಾಗ ಕೊಡುತ್ತಾರೋ ಗೊತ್ತಿಲ್ಲ. ಕೊಟ್ಟ ಮೇಲೆ ಕೊಟ್ಟರು ಎನ್ನಬಹುದು’ ಎಂದರು.

ಮೊತ್ತ ಭರಿಸಿದ್ದೇವೆ: ‘ಚಿಕಿತ್ಸೆ ವೆಚ್ಚವನ್ನು ಸರ್ಕಾರದ ಇಎಸ್‌ಐ ಮೂಲಕವೇ ಭರಿಸಿದ್ದೇವೆ. ಕುಟುಂಬದವರು ವ್ಯಯಿಸಿದ ಮೊತ್ತವನ್ನೆಲ್ಲ ಭರಿಸಿದ್ದೇವೆ’ ಎಂದು ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್‌. ಪ್ರತಿಕ್ರಿಯಿಸಿದರು.

‘ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ಸರ್ಕಾರದಿಂದ ಸ್ಪಷ್ಟ ನಿರ್ದೇಶನ ಬಂದಿಲ್ಲ’ ಎಂದು ಜಿಲ್ಲಾಡಳಿತ ಮೂಲಗಳು ತಿಳಿಸಿವೆ.

‘ರಿಕ್ಷಾದಿಂದ ಇಳಿದು ಓಡಿದ್ದ ಆರೋಪಿ’
‘ರಿಕ್ಷಾದಲ್ಲಿ ನಾಗುರಿ ಬಳಿ ಬರುತ್ತಿದ್ದಾಗ ಒಬ್ಬ ಕೈ ಅಡ್ಡ ಹಿಡಿದು ಪಂಪ್‌ವೆಲ್‌ನತ್ತ ಕರೆದೊಯ್ಯುವಂತೆ ಹೇಳಿದ. ಪಂಪ್‌ವೆಲ್‌ ಕಡೆಗೆ ಹೋಗುತ್ತಿದ್ದಾಗ ಡಬ್‌ ಎಂದು ಸದ್ದಾಯಿತು. ಸುತ್ತೆಲ್ಲಾ ಹೊಗೆ ಆವರಿಸಿ ಸಂಪೂರ್ಣ ಕತ್ತಲಾಯಿತು. ರಿಕ್ಷಾವನ್ನ ಮುಂದಕ್ಕೊಯ್ಯಲು ಆಗಿಲ್ಲ. ಸ್ವಲ್ಪ ಮುಂದಕ್ಕೆ ಹೋಗಿ ರಿಕ್ಷಾ ನಿಲ್ಲಿಸಿದೆ. ಅಷ್ಟರಲ್ಲಿ ಪ್ರಯಾಣಿಕ ರಿಕ್ಷಾದಿಂದ ಇಳಿದು ಓಡುತ್ತಿದ್ದ. ಆತನಿಗೂ ಬೆಂಕಿ ತಗುಲಿತ್ತು’ ಎಂದು ಪುರುಷೋತ್ತಮ ಪೂಜಾರಿ ಘಟನೆಯ ಬಗ್ಗೆ ವಿವರಿಸಿದರು.

‘ಆತನ ಕೈಯಲ್ಲಿ ಚೀಲ ಇತ್ತು. ಅದರಲ್ಲಿ ಬಾಂಬ್‌ ಇದೆ ಎಂದು ಗೊತ್ತಾಗಲಿಲ್ಲ. ಆತನ ಜೊತೆ ನಾನು ಮಾತನಾಡಿಯೂ ಇಲ್ಲ. ಜನರನ್ನು ಕರೆದುಕೊಂಡು ಹೋಗುವುದು ಬಿಡುವುದು ಅಷ್ಟೇ ನಮ್ಮ ಕೆಲಸ. ಅವ ಕಳ್ಳನಾ ಎಂತ ನಮಗೆ ಗೊತ್ತುಂಟಾ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.