ADVERTISEMENT

ಸಹಕಾರ ಕ್ಷೇತ್ರದಿಂದಲೇ ಹಳ್ಳಿಗಳ ಪ್ರಗತಿ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 23:42 IST
Last Updated 14 ನವೆಂಬರ್ 2025, 23:42 IST
ಸಹಕಾರ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಸಹಕಾರ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು –ಪ್ರಜಾವಾಣಿ ಚಿತ್ರ
ಸಹಕಾರ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಸಹಕಾರ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಗ್ರಾಮೀಣ ಭಾರತವನ್ನು ಪ್ರಗತಿಯತ್ತ ಕೊಂಡೊಯ್ಯುವ ಉದ್ದೇಶದಿಂದ ದೇಶದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರು ಸಹಕಾರ ಕ್ಷೇತ್ರಕ್ಕೆ ಚೈತನ್ಯ ನೀಡಿದರು. ದೇಶದ ಗ್ರಾಮೀಣ ಪ್ರದೇಶವು ಸಹಕಾರ ಕ್ಷೇತ್ರದಿಂದಲೇ ಗಟ್ಟಿಗೊಂಡಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ಅರಮನೆ ಮೈದಾನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ 72ನೇ ಅಖಿಲ ಭಾರತ ಸಹಕಾರ ಸಪ್ತಾಹಕ್ಕೆ ಅವರು ಚಾಲನೆ ನೀಡಿದರು. ಸಹಕಾರ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ‘ಸಹಕಾರ ರತ್ನ’ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

‘ಯಾವುದೇ ಗ್ರಾಮವು ಉದ್ಧಾರ ಆಗಬೇಕಾದರೆ ಆ ಗ್ರಾಮದಲ್ಲಿ ಒಂದು ಶಾಲೆ, ಒಂದು ಸಹಕಾರಿ ಸಂಘ, ಒಂದು ಆಸ್ಪತ್ರೆ ಇರಬೇಕು ಎನ್ನುವುದು ನೆಹರೂ ಅವರ ಕಲ್ಪನೆಯಾಗಿತ್ತು. ಆ ಕಲ್ಪನೆಯನ್ನು ಸಾಕಾರಗೊಳಿಸುವ ಉದ್ದೇಶದಿಂದಲೇ ಸಹಕಾರ ಚಳವಳಿಗೆ ನೆಹರೂ ಮತ್ತು ಮಹಾತ್ಮ ಗಾಂಧಿ ಅವರು ಶಕ್ತಿ ನೀಡಿದರು’ ಎಂದು ಹೇಳಿದರು.

ADVERTISEMENT

‘ಏಷ್ಯಾದಲ್ಲಿಯೇ ಮೊದಲ ಬಾರಿಗೆ ಸಹಕಾರ ಬ್ಯಾಂಕ್‌ ಸ್ಥಾಪನೆಯಾಗಿದ್ದು ಕರ್ನಾಟಕದಲ್ಲಿ. ಹೀಗಾಗಿಯೇ ಕರ್ನಾಟಕವನ್ನು ಭಾರತದ ಸಹಕಾರ ಕ್ಷೇತ್ರದ ರಾಜಧಾನಿ, ತೊಟ್ಟಿಲು ಎಂದೆಲ್ಲಾ ಕರೆಯುತ್ತಾರೆ. ರಾಜ್ಯದ ಹಾಲು ಮಹಾಮಂಡಳಿಗಳ ಮೂಲಕ ಪ್ರತಿದಿನ ಒಂದು ಕೋಟಿ ಲೀಟರ್‌ಗೂ ಹೆಚ್ಚು ಹಾಲು ಉತ್ಪಾದನೆಯಾಗುತ್ತಿದ್ದು, ವಾರ್ಷಿಕ ₹25,000 ಕೋಟಿ ವಹಿವಾಟು ನಡೆಸುತ್ತಿವೆ. ಇದು, ರಾಜ್ಯದಲ್ಲಿ ಸಹಕಾರ ತತ್ವ ಪರಿಣಾಮಕಾರಿ ಅನುಷ್ಠಾನಕ್ಕೆ ಉತ್ತಮ ನಿದರ್ಶನ’ ಎಂದರು.

ಪುತ್ಥಳಿ ಅನಾವರಣ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಆವರಣದಲ್ಲಿ ಸ್ಥಾಪಿಸಲಾಗಿರುವ ಸಹಕಾರ ಕ್ಷೇತ್ರದ ಧುರೀಣ ಬಿ.ಎಸ್‌.ವಿಶ್ವನಾಥ್ ಅವರ ಪುತ್ಥಳಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಅನಾವರಣ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.