ADVERTISEMENT

ಗೃಹಲಕ್ಷಿ ಹೆಸರಿನಲ್ಲಿ ಸಹಕಾರ ಸಂಘಕ್ಕೆ ಅಸ್ತು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 15:54 IST
Last Updated 19 ಅಕ್ಟೋಬರ್ 2025, 15:54 IST
<div class="paragraphs"><p>ಕಡತ</p></div>

ಕಡತ

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ಗೃಹಲಕ್ಷಿ ವಿವಿಧೊದ್ದೇಶ ಸಹಕಾರ ಸಂಘ ಸ್ಥಾಪಿಸಿ, ನೋಂದಣಿ ಪೂರ್ವದಲ್ಲೇ ಷೇರು ಸಂಗ್ರಹಿಸಲು ಸಹಕಾರ ಇಲಾಖೆಯು ಅನುಮತಿ ನೀಡಿದೆ.

ADVERTISEMENT

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರು ಸಹಕಾರ ಇಲಾಖೆ, ಸಹಕಾರ ಸಂಘಗಳ ನಿಬಂಧಕರಿಗೆ ಇದೇ 15ರಂದು ಪತ್ರ ಬರೆದಿದ್ದರು. ಗೃಹಲಕ್ಷಿ  ವಿವಿಧೋದ್ದೇಶ ಸಹಕಾರ ಸಂಘವನ್ನು ಸ್ಥಾಪಿಸುವ ಪ್ರಸ್ತಾವವನ್ನು ಪತ್ರದೊಂದಿಗೆ ಸಲ್ಲಿಸಿದ್ದರು. 

ಪ್ರಸ್ತಾವನೆಯಲ್ಲಿನ ಉದ್ದೇಶಿತ ಸಂಘದ ಕಾರ್ಯ ಸಾಧ್ಯತೆಯನ್ನು ಪರಿಶೀಲಿಸಿದ್ದ ಬೆಂಗಳೂರು ವಲಯದ ಸಹಕಾರ ಸಂಘಗಳ ಸಹಾಯಕ ನಿಬಂಧಕರು, ‘ಈ ಸಂಘವನ್ನು ಸ್ಥಾಪಿಸಬಹುದು. ಈಗಾಗಲೇ ಅಸ್ತಿತ್ವದಲ್ಲಿರುವ ಸಹಕಾರ ಸಂಘಗಳಿಗೆ, ಈ ಸಂಘದಿಂದ ಯಾವುದೇ ತೊಂದರೆ ಇರುವುದಿಲ್ಲ’ ಎಂದು ವರದಿ ನೀಡಿದ್ದರು.

ಸಹಕಾರ ಸಂಘಗಳ ಹೆಚ್ಚುವರಿ ನಿಬಂಧಕರು ಈ ವರದಿಯ ಆಧಾರದಲ್ಲಿ, ಗೃಹಲಕ್ಷಿ ವಿವಿಧೊದ್ದೇಶ ಸಂಘವನ್ನು ಸ್ಥಾಪಿಸಲು ಅನುಮತಿ ನೀಡಿರುತ್ತಾರೆ. ಜತೆಗೆ ಸಂಘದ ನೋಂದಣಿ ಪೂರ್ವದಲ್ಲೇ 1,000 ಸದಸ್ಯರನ್ನು ಗುರುತಿಸಿ, ಅವರಿಂದ ಕನಿಷ್ಠ ₹20 ಲಕ್ಷ ಮೌಲ್ಯದ ಷೇರುಗಳನ್ನು ಸಂಗ್ರಹಿಸಲು ಅನುಮತಿ ನೀಡಿ ಆದೇಶಿಸಿದ್ದಾರೆ. 

ಜತೆಗೆ, ‘ರಾಜ್ಯದ ಯಾವುದೇ ಭಾಗದಲ್ಲಿ ಸ್ಥಾಪಿಸಲಾಗಿರುವ ಇದೇ ಉದ್ದೇಶದ ಸಹಕಾರ ಸಂಘಗಳ ಸದಸ್ಯರನ್ನು ಷೇರು ಸಂಗ್ರಹಕ್ಕೆ ಆಯ್ಕೆ ಮಾಡಿಕೊಳ್ಳಬಾರದು. ಉದ್ದೇಶಿತ ಸದಸ್ಯರಿಂದ ಈ ಸಂಬಂಧ ಘೋಷಣಾ ಪತ್ರವನ್ನು ಪಡೆದುಕೊಳ್ಳಬೇಕು. ಅಪೆಕ್ಸ್‌ ಬ್ಯಾಂಕ್‌ನ ಕೇಂದ್ರ ಕಚೇರಿಯಲ್ಲಿ ಉದ್ದೇಶಿತ ಸಂಘದ ಹೆಸರಿನಲ್ಲಿ ಅಮಾನತ್ ಖಾತೆ ತೆರೆಯಬೇಕು. ಸದಸ್ಯರಿಂದ ಸಂಗ್ರಹಿಸಿದ ಹಣವನ್ನು ಮರುದಿನವೇ ಈ ಖಾತೆಗೆ ಜಮೆ ಮಾಡಬೇಕು’ ಎಂದು ಷರತ್ತು ವಿಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.