ADVERTISEMENT

ಸಹಕಾರಿ ಸಂಘದ ಅಧ್ಯಕ್ಷೆ ಬಂಧನ

ಠೇವಣಿದಾರರಿಗೆ ಹಣ ಮರಳಿಸದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2019, 19:34 IST
Last Updated 19 ಸೆಪ್ಟೆಂಬರ್ 2019, 19:34 IST

ಬೆಳಗಾವಿ: ಠೇವಣಿದಾರರಿಗೆ ಹಣ ಮರಳಿಸದ ಪ್ರಕರಣದಲ್ಲಿ, ಜಿಲ್ಲೆಯ ಗೋಕಾಕದ ರೇಣುಕಾಚಾರ್ಯ ಮಹಿಳಾ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷೆ ಶಿವಲೀಲಾ ಲೋಕಯ್ಯ ಹಿರೇಮಠ ಅವರನ್ನು ಗುರುವಾರ ಬಂಧಿಸಿ ಇಲಿನ ಹಿಂಡಲಗಾ ಕಾರಾಗೃಹಕ್ಕೆ ಕಳುಹಿಸಲಾಗಿದೆ.

ಗೋಕಾಕದ ಠೇವಣಿದಾರ ಸತ್ಯಪ್ಪ ಮಾಸ್ತಿಹೊಳಿ ಅವರು ನೀಡಿದ ದೂರಿನ ಅನ್ವಯ ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ‘ಸಂಘವು ಹಲವು ವರ್ಷಗಳಿಂದಲೂ ಆರ್ಥಿಕ ವ್ಯವಹಾರ ನಡೆಸುತ್ತಿದೆ. ಸಾರ್ವಜನಿಕರಿಂದ ಠೇವಣಿ ಸಂಗ್ರಹಿಸಿ ₹10 ಕೋಟಿಗೂ ಹೆಚ್ಚು ವಂಚಿಸಿದೆ. ಠೇವಣಿ ಹಣ ಮರಳಿಸುವಂತೆ ಗ್ರಾಹಕರು ಮಾಡಿದ ಮನವಿಗೆ ಸ್ಪಂದಿಸಿಲ್ಲ’ ಎಂದು ಆರೋಪಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಹಣ ವಾಪಸ್ ಕೊಡುವಂತೆ ಆದೇಶಿಸಿತ್ತು. ಆದರೆ, ಸಂಘದವರು ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ, ಆ. 14ರಂದು ಬಂಧನ ವಾರೆಂಟ್‌ ಹೊರಡಿಸಲಾಗಿತ್ತು.

ಸಂಘದ ಅಧ್ಯಕ್ಷೆ ಶಿವಲೀಲಾ ಅವರನ್ನು ಗೋಕಾಕ ಠಾಣೆ ಪೊಲೀಸರು ಗುರುವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎಸ್.ಡಿ. ಏಕತಾ, ಆರೋಪಿಯನ್ನು ಅ. 3ರವರೆಗೆ ನ್ಯಾಯಾಂಗ ಬಂಧನದಲ್ಲಿಡುವಂತೆ ಆದೇಶಿಸಿದ್ದಾರೆ.

ADVERTISEMENT

ಅರ್ಜಿದಾರರ ಪರವಾಗಿ ವಕೀಲರಾದ ಎನ್.ಆರ್. ಲಾತೂರ್ ಹಾಗೂ ಜಿ.ಎ. ಹಿರೇಮಠ ವಾದ ಮಂಡಿಸಿದ್ದರು.

‘ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಸೂಚನೆ ಮೇರೆಗೆ ಸಂಘದ ಕಾರ್ಯದರ್ಶಿ ಚನ್ನಪರಯ್ಯ ಯೋಗಿಕೊಳ್ಳಮಠ ಅವರನ್ನು ಬಂಧಿಸಲಾಗಿದೆ. ಆ. 30ರಿಂದ ಅವರು ಹಿಂಡಲಗಾ ಜೈಲಿನಲ್ಲಿದ್ದಾರೆ. ನಾಲ್ವರು ಠೇವಣಿದಾರರು ಮೃತಪಟ್ಟಿದ್ದಾರೆ. ಠೇವಣಿದಾರರು ಅವರ ಶವವನ್ನು ಇಟ್ಟು ಸಂಘದ ಎದುರು ಪ್ರತಿಭಟನೆ ನಡೆಸಿದ್ದರು. ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲೂ ಪ್ರತಿಭಟನೆ ನಡೆಸಿದ್ದರು. ಆದರೆ, ಸರ್ಕಾರ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ, ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದರು’ ಎಂದು ವಕೀಲ ಲಾತೂರ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.