ADVERTISEMENT

ಹಂಪಿ ಕನ್ನಡ ವಿ.ವಿ. ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

ಕುವೆಂಪು ಸಮಗ್ರ ಸಾಹಿತ್ಯದ 12ನೇ ಸಂಪುಟದ ಕೃತಿಚೌರ್ಯ ಪ್ರಕರಣ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2023, 23:25 IST
Last Updated 13 ಮಾರ್ಚ್ 2023, 23:25 IST
ಕುವೆಂಪು ಸಮಗ್ರ ಸಾಹಿತ್ಯದ 12ನೇ ಸಂಪುಟ
ಕುವೆಂಪು ಸಮಗ್ರ ಸಾಹಿತ್ಯದ 12ನೇ ಸಂಪುಟ   

ಹೊಸಪೇಟೆ (ವಿಜಯನಗರ): ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿರುವ ಕುವೆಂಪು ಸಮಗ್ರ ಸಾಹಿತ್ಯದ 12ನೇ ಸಂಪುಟದ ಮಾರಾಟಕ್ಕೆ ಸಂಬಂಧಿಸಿದಂತೆ ಕನ್ನಡ ವಿ.ವಿ. ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ಸೋಮವಾರ ವಜಾಗೊಳಿಸಿ ಆದೇಶ ಹೊರಡಿಸಿದೆ.

ಕೆಳಹಂತದ ನ್ಯಾಯಾಲಯದಲ್ಲಿ (ಬೆಂಗಳೂರಿನ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷೆನ್ಸ್‌ ನ್ಯಾಯಾಲಯ) ಪ್ರಕರಣದ ವಿಚಾರಣೆ ನಡೆಸಿ, ಆರು ತಿಂಗಳೊಳಗೆ ವಿಲೇವಾರಿಗೊಳಿಸಬೇಕು. ಅಲ್ಲಿಯವರೆಗೆ 12ನೇ ಸಂಪುಟ ಮಾರಾಟ ಮಾಡುವಂತಿಲ್ಲ ಎಂದು ನ್ಯಾಯಮೂರ್ತಿ ಎಸ್‌.ಆರ್‌. ಕೃಷ್ಣಕುಮಾರ್‌ ಆದೇಶ ಹೊರಡಿಸಿದ್ದಾರೆ.

‘ಕೆಳಹಂತದ ನ್ಯಾಯಾಲಯದಲ್ಲಿ ಪ್ರಕರಣದ ಅಂತಿಮ ತೀರ್ಪು ಬರುವವರೆಗೆ 12ನೇ ಸಂಪುಟವನ್ನು ಶೈಕ್ಷಣಿಕ ಮತ್ತು ಸಂಶೋಧನಾ ಕೆಲಸಕ್ಕೆ ಹೊರತುಪಡಿಸಿದರೆ ಅನ್ಯ ಉದ್ದೇಶಕ್ಕೆ ಬಳಸುವುದಿಲ್ಲ. ಅದನ್ನು ಮಾರಾಟ ಕೂಡ ಮಾಡುವುದಿಲ್ಲ ಎಂದು ಕನ್ನಡ ವಿಶ್ವವಿದ್ಯಾಲಯವು ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಕೂಡ ಸಲ್ಲಿಸಿದೆ’ ಎಂದು ಪುಸ್ತಕದ ಲೇಖಕ ಪುಸ್ತಕಮನೆ ಹರಿಹರಪ್ರಿಯ ಪರ ವಕೀಲ ಎಚ್‌.ಎಸ್. ವಿವೇಕಾನಂದ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

**

ಹೈಕೋರ್ಟ್‌ ಆದೇಶದಿಂದ ಖುಷಿಯಾಗಿದೆ. ನನಗೆ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರೆಸುವೆ.
–ಪುಸ್ತಕಮನೆ ಹರಿಹರಪ್ರಿಯ, ಲೇಖಕ

**

ಹೈಕೋರ್ಟ್‌ ತೀರ್ಪು ಏನಾಗಿದೆ ಗೊತ್ತಿಲ್ಲ. ಅದರ ಬಗ್ಗೆ ಮಾಹಿತಿ ತರಿಸಿಕೊಂಡ ನಂತರ ಪ್ರತಿಕ್ರಿಯಿಸುವೆ.
–ಪ್ರೊ.ಎ.ಸುಬ್ಬಣ್ಣ ರೈ, ಕುಲಸಚಿವ, ಹಂಪಿ ಕನ್ನಡ ವಿ.ವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.