ADVERTISEMENT

ಬಿಜೆಪಿಯಿಂದ ಉಪಚುನಾವಣೆ ಗೆಲುವಿಗೆ ಕಾರ್ಯತಂತ್ರ

ಬಿಜೆಪಿ ಪ್ರಮುಖರ ಸಮಿತಿ ಸಭೆಯಲ್ಲಿ ತೀರ್ಮಾನ l 17 ಕ್ಷೇತ್ರ ಗೆಲ್ಲಿಸಲು ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2019, 19:20 IST
Last Updated 6 ಸೆಪ್ಟೆಂಬರ್ 2019, 19:20 IST

ಬೆಂಗಳೂರು: 17 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳನ್ನು ಗೆಲ್ಲಲು ಈಗಿನಿಂದಲೇ ಸಿದ್ಧತೆ ನಡೆಸಲು ರಾಜ್ಯ ಬಿಜೆಪಿಯ ಪ್ರಮುಖರ ಸಮಿತಿ ಸಭೆ ನಿರ್ಧರಿಸಿದೆ.

ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ರಾಜ್ಯಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ‘ಉಪ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳನ್ನು ಗೆಲ್ಲುವುದು ನಮ್ಮ ಮುಖ್ಯ ಉದ್ದೇಶ. ಅನರ್ಹಗೊಂಡಿರುವ ಶಾಸಕರಲ್ಲಿ ಯಾರು ಬಿಜೆಪಿ ಸೇರುತ್ತಾರೊ ನೋಡಬೇಕು. ಇವರಿಗೆ ಟಿಕೆಟ್‌ ನೀಡುವ ಬಗ್ಗೆ ತೀರ್ಮಾನಿಸಲಾಗುವುದು. ಅದಕ್ಕಿಂತ ಮುಖ್ಯ ಕ್ಷೇತ್ರಗಳನ್ನು ಗೆಲ್ಲುವುದಾಗಿದೆ’ ಎಂದರು.

‘ಅನರ್ಹ ಶಾಸಕರು ನ್ಯಾಯಾಲಯದಲ್ಲಿ ಹೋರಾಟ ಮುಂದುವರಿಸುತ್ತಾರೆ. ನಾವು ಆ ಎಲ್ಲ ಕ್ಷೇತ್ರಗಳಲ್ಲಿ ಸಿದ್ಧತೆ ಆರಂಭಿಸುತ್ತೇವೆ. ಚುನಾವಣೆ ಯಾವುದೇ ಸಂದರ್ಭದಲ್ಲಿ ಬಂದರೂ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾರ್ಯತಂತ್ರ ರೂಪಿಸಲು ತೀರ್ಮಾನಿಸಲಾಯಿತು’ ಎಂದು ಹೇಳಿದರು.

ADVERTISEMENT

2020ರಲ್ಲಿ ವಿಧಾನಪರಿಷತ್ತಿನ ನಾಲ್ಕು ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ತಕ್ಷಣದಿಂದಲೇ ತಯಾರಿ ನಡೆಸಲಾಗುವುದು. ಅಕ್ಟೋಬರ್‌ನಿಂದ ಸದಸ್ಯತ್ವ ನೋಂದಣಿ ಕಾರ್ಯಕ್ರಮಕ್ಕೆಚಾಲನೆ ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ನಾಲ್ಕೂ ಕ್ಷೇತ್ರಗಳಲ್ಲಿ ಕಾರ್ಯಕರ್ತರ ಸಭೆ ನಡೆಸಲಾಗುವುದು ಎಂದು ಅವರು ತಿಳಿಸಿದರು.

ಸಂಘಟನೆ ಬಲಪಡಿಸುವ ಉದ್ದೇಶದಿಂದ ರಾಜ್ಯದಾದ್ಯಂತ ಸಕ್ರಿಯ ಸದಸ್ಯನೋಂದಣಿ ಕಾರ್ಯಕ್ರಮ ಆರಂಭಿಸಲಾಗುವುದು. ಪಕ್ಷದ ಎಲ್ಲ ಮುಖಂಡರು ಸಕ್ರಿಯ ಸದಸ್ಯರಾಗಬೇಕು. ಪ್ರತಿ ಬೂತ್‌ಗೆ ಇಬ್ಬರಂತೆ ಒಟ್ಟು ಒಂದು ಲಕ್ಷ ಸಕ್ರಿಯ ಸದಸ್ಯರನ್ನು ನೋಂದಾಯಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಪಕ್ಷದ ಎಲ್ಲ ಕಾರ್ಯಕರ್ತರು ನೋಂದಣಿ ಅಭಿಯಾನದಲ್ಲಿ ಭಾಗವಹಿಸುವರು. ಇದೇ 8
ರಿಂದ ಚಾಲನೆ ನೀಡಲಾಗುವುದು ಎಂದು ಲಿಂಬಾವಳಿ ಅವರು ವಿವರಿಸಿದರು.

ಸದಸ್ಯತ್ವ ಅಭಿಯಾನ ಮುಂದುವರಿಸಲಾಗುವುದು. ಈವರೆಗೆ 28 ಲಕ್ಷ ಹೊಸ ಸದಸ್ಯರ ನೋಂದಣಿ ಮಾಡಿದ್ದು, ಅದನ್ನು 50 ಲಕ್ಷಕ್ಕೆ ಹೆಚ್ಚಿಸಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು.

ಕೋರ್‌ ಕಮಿಟಿಯ ಸದಸ್ಯ ಆರ್‌.ಅಶೋಕ್‌ ಅವರನ್ನು ಹೊರತುಪಡಿಸಿ ಉಳಿದ ಸದಸ್ಯರು ಭಾಗವಹಿಸಿದ್ದರು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಪ್ರಹ್ಲಾದ್‌ ಜೋಷಿ, ಸಚಿವ ಸಿ.ಟಿ.ರವಿ ಸಭೆಯಲ್ಲಿದ್ದರು.

ಗಣೇಶ ಬಾಂಡ್‌ ಪದ್ಧತಿ ಕೊನೆಗಾಣಿಸಿ’

ಗಣೇಶ ಪ್ರತಿಷ್ಠಾಪನೆ ಸಂದರ್ಭದಲ್ಲಿ ಆಯೋಜಕರಿಂದ ಮುಚ್ಚಳಿಕೆ(ಬಾಂಡ್‌) ಬರೆಸಿಕೊಳ್ಳುವ ಪದ್ಧತಿಗೆ ಕೊನೆ ಹಾಡಬೇಕು. ಈ ಸಂಬಂಧ ಗೃಹ ಸಚಿವರಿಗೆ ಸೂಚನೆ ನೀಡಬೇಕು ಎಂದು ಕೆಲವು ಸದಸ್ಯರು ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು ಎನ್ನಲಾಗಿದೆ.

‘ಗಣೇಶೋತ್ಸವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆದರೂ ಆಯೋಜಕರೇ ಹೊಣೆ ಎಂದು ಮುಚ್ಚಳಿಕೆ ಬರೆಸಿಕೊಳ್ಳಲಾಗುತ್ತಿದೆ. ಬಿಜೆಪಿ ಸರ್ಕಾರ ಬಂದ ಮೇಲೂ ಇಂತಹ ಕೆಟ್ಟ ಪದ್ಧತಿ ಮುಂದುವರಿಸಿರುವುದು ಸರಿಯಲ್ಲ. ವಿಶ್ವ ಹಿಂದೂ ಪರಿಷತ್ ಸೇರಿದಂತೆ ಹಿಂದೂಪರ ಸಂಘಟನೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿವೆ. ಇದನ್ನು ಕೈಬಿಡಲು ಸರ್ಕಾರ ಮುಂದಾಗಬೇಕು’ ಎಂದು ಕೆಲವರು ಆಗ್ರಹಿಸಿದರು.

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ವಿರುದ್ಧ ಕೆಲವರು ಟೀಕಾಪ್ರಹಾರ ನಡೆಸುತ್ತಿದ್ದು, ಅವರ ರಕ್ಷಣೆಗೆ ಸಚಿವರು ಮತ್ತು ಶಾಸಕರು ಧಾವಿಸಬೇಕು ಎಂದು ಯಡಿಯೂರಪ್ಪ ಸಭೆಯಲ್ಲಿ ತಿಳಿಸಿದರು.

ನಿಗಮ– ಮಂಡಳಿಗಳಲ್ಲಿ ಕಾರ್ಯಕರ್ತರಿಗೂ ಅವಕಾಶ ನೀಡಬೇಕು ಎಂಬ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಅವರ ಸಲಹೆಗೆ ಯಡಿಯೂರಪ್ಪ ಸಮ್ಮತಿಸಲಿಲ್ಲ. ಸಾಕಷ್ಟು ಶಾಸಕರಿಗೆ ನಿಗಮ–ಮಂಡಳಿಗಳಲ್ಲಿ ಆದ್ಯತೆ ನೀಡಬೇಕಾಗಿರುವುದರಿಂದ ಕಾರ್ಯಕರ್ತರಿಗೆ ಆದ್ಯತೆ ನೀಡುವುದು ಕಷ್ಟವಾಗಬಹುದು ಎಂದು ಯಡಿಯೂರಪ್ಪ ಸ್ವಲ್ಪ ಗರಂ ಆಗಿಯೇ ಹೇಳಿದರು ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.