ADVERTISEMENT

ಕೊರೊನಾ ನಿರ್ವಹಣೆಗೆ ಅತಿ ಶ್ರೀಮಂತರಿಗೆ ತೆರಿಗೆ ವಿಧಿಸಿ

ಪ್ರಧಾನಮಂತ್ರಿಗೆ ಬರೆದ ಪತ್ರದಲ್ಲಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಮೇ 2020, 20:22 IST
Last Updated 25 ಮೇ 2020, 20:22 IST
   

ಬೆಂಗಳೂರು: ಕೊರೊನಾ ತಂದಿತ್ತಿರುವ ಸಂಕಷ್ಟ ನಿಭಾಯಿಸಿ ವಿಶ್ವ ಮಟ್ಟದಲ್ಲಿ ತಲೆ ಎತ್ತಿ ನಿಲ್ಲಲು ಶೇ 1 ರಷ್ಟಿರುವ ಅತಿ ಶ್ರೀಮಂತರಿಗೆ ಸಂಪತ್ತಿನ ಮೇಲೆ ಶೇ 2ರಷ್ಟುತೆರಿಗೆ ವಿಧಿಸಿ ಸಂಪನ್ಮೂಲ ಸಂಗ್ರಹಿಸಬೇಕು ಎಂದು ನಾಡಿನ ಸಾಹಿತಿಗಳು ಹಾಗೂ ಹೋರಾಟಗಾರರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

’ಸಂಪತ್ತಿನ ತೆರಿಗೆ ವಿಧಿಸುವಂತೆ ದೇಶದ ಪ್ರಜ್ಞಾವಂತರು ಮೇ 1ರಂದು ಮನವಿ ಪತ್ರವನ್ನು ಬರೆದು ಅಭಿಯಾನ ಆರಂಭಿಸಿದ್ದಾರೆ. ಕರ್ನಾಟಕದ ಜಾಗೃತ ಸಮುದಾಯ ಕೂಡ ಇದಕ್ಕೆ ಬೆಂಬಲಿಸಿದ್ದು, ಪ್ರತಿಯೊಬ್ಬರೂ ಈ ಆಂದೋಲನದಲ್ಲಿ ಕೈಜೋಡಿಸಬೇಕು‘ ಎಂದು ಸಾಹಿತಿ ದೇವನೂರ ಮಹಾದೇವ, ಪುರುಷೋತ್ತಮ ಬಿಳಿಮಲೆ, ಸಾಮಾಜಿಕ ಮಾನವ ಶಾಸ್ತ್ರಜ್ಞೆ ಎ.ಆರ್. ವಾಸವಿ, ನಿವೃತ್ತ ಪ್ರಾಧ್ಯಾಪಕರಾದ ವಿ.ಕೆ. ನಟರಾಜ್‌, ಟಿ.ಆರ್. ಚಂದ್ರಶೇಖರ, ಪ್ರಕಾಶ್ ಕಮ್ಮರಡಿ, ಆಹಾರ ತಜ್ಞ ಕೆ.ಸಿ. ರಘು, ಲೇಖಕಿಯರಾದ ದು. ಸರಸ್ವತಿ, ರೂಪಾ ಹಾಸನ ಮತ್ತಿತರರು ಮನವಿ ಮಾಡಿದ್ದಾರೆ.

ಭಾರತವು ಕಲ್ಯಾಣರಾಜ್ಯ ಕಡೆಗೆ ಚಲಿಸಬೇಕೆಂಬ ಆಶಯಗಳು ಇದ್ದಾಗ 1957ರಲ್ಲೇ ಸಂಪತ್ತಿನ ಮೇಲೆ ತೆರಿಗೆ ಪರಿಕಲ್ಪನೆ ಜಾರಿಯಲ್ಲಿತ್ತು. ಆದರೆ, ಅದು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿರಲಿಲ್ಲ. 1991ರ ನಂತರ ಮಾರುಕಟ್ಟೆ ಶಕ್ತಿಗಳು ಆಳ್ವಿಕೆಯನ್ನು ನಿಯಂತ್ರಿಸತೊಡಗಿದ ಪರಿಣಾಮವಾಗಿ 2015ರಲ್ಲಿ ಕೇಂದ್ರ ಸರ್ಕಾರವು ಸಂಪತ್ತಿನ ಮೇಲಿನ ತೆರಿಗೆ ಪರಿಕಲ್ಪನೆಯನ್ನೇ ರದ್ದುಮಾಡಿಬಿಟ್ಟಿತು. ಆದರೀಗ, ಒಂದು ಲಕ್ಷ ದಾಟಿ ಓಡುತ್ತಿರುವ ಕೊರೋನಾ ಸೋಂಕಿನ ದಾಳಿಯಿಂದ ತತ್ತರಿಸುತ್ತಿರುವ ಭಾರತವು ಚೇತರಿಸಿಕೊಳ್ಳುವಂತಾಗಲು ಶೇ 1ರಷ್ಟಿರುವ ಅತಿಶ್ರೀಮಂತರಿಗೆ ಕೇವಲ ಶೇ 2ರಷ್ಟು ಸಂಪತ್ತಿನ ತೆರಿಗೆ ವಿಧಿಸಿಯಾದರೂ ಕೊರೊನಾ ತಹಬಂದಿಗೆ ತರುವುದು ಇಂದಿನ ತುರ್ತಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ADVERTISEMENT

ವಿಪ್ರೊ ಸಂಸ್ಥೆಯ ಅಜೀಂ ಪ್ರೇಮ್‍ಜಿಯವರು ಈಗಾಗಲೇ ತಮ್ಮ ಒಟ್ಟು ಸಂಪತ್ತಿನ ಶೇ 2 ರಷ್ಟನ್ನು ಕೊರೊನಾ ಬಿಕ್ಕಟ್ಟಿನ ನಿವಾರಣೆಗಾಗಿ ಬಿಟ್ಟುಕೊಟ್ಟಿದ್ದಾರೆ. ಇದನ್ನೇ ಗಮನಿಸಿ ಹೇಳುವುದಾದರೆ ಈ ಸಾಧ್ಯತೆ ಅಂತಹ ಕಷ್ಟದಾಯಕವಾದುದ್ದೇನೂ ಅಲ್ಲ. ಈ ವಿಚಾರದಲ್ಲಿ ಜನರಿಂದ ಆಯ್ಕೆಯಾದ ಮತ್ತು ಶಕ್ತಿಯುತವಾದ ಯಾವುದೇ ಸರ್ಕಾರವು ಹಿಂದೆ-ಮುಂದೆ ನೋಡದೆ ತುಂಬಾ ಶೀಘ್ರವಾಗಿ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ಅವರು ಸಲಹೆ ನೀಡಿದ್ದಾರೆ.

ಕೊರೊನಾ ಬಿಕ್ಕಟ್ಟು ಎದುರಿಸಲು ಪ್ರಧಾನ ಮಂತ್ರಿಗಳು ₹20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದ್ದಾರೆ.

ಪ್ಯಾಕೇಜ್‍ನ ಒಳಹೊಕ್ಕು ನೋಡಿದರೆ, ಸ್ವಾಯತ್ತ ಸಂಸ್ಥೆಯಾದ ರಿಸರ್ವ್ ಬ್ಯಾಂಕ್‍ ಆಫ್ ಇಂಡಿಯಾವು ತನ್ನ ಹಣಕಾಸು (ಮಾನಿಟರಿ) ನೀತಿಗೆ ಅನುಗುಣವಾಗಿ ಪ್ರಕಟಿಸಿದ ಕ್ರಮಗಳು, ಬಡ್ಡಿದರ ಮತ್ತು ಬ್ಯಾಂಕ್ ನಿರ್ವಹಣೆ ಕುರಿತಾಗಿ ಮಾಡಿರುವ ಘೋಷಣೆಗಳನ್ನು ಸರ್ಕಾರ ತನ್ನದೇ ಎಂಬಂತೆ ಬಿಂಬಿಸಿಕೊಂಡಿದೆ. ಬಜೆಟ್‌ನಲ್ಲಿ ಮಾಡಿದ್ದ ಘೋಷಣೆಗಳನ್ನೂ ಮತ್ತು ಕೇಂದ್ರ ಸರ್ಕಾರ ಕಾಲಕಾಲಕ್ಕೆ ನಿಗದಿಪಡಿಸುತ್ತಾ ಬರುವ ಹಣಕಾಸಿನ ನೆರವನ್ನು ಕ್ರೋಡೀಕರಿಸಿ ₹ 20 ಲಕ್ಷ ಕೋಟಿ ಎಂದು ಹೇಳಿಕೊಂಡಿರುವುದು ಗೊತ್ತಾಗುತ್ತದೆ.

₹ 20 ಲಕ್ಷ ಕೋಟಿ ಪ್ಯಾಕೇಜಿನಲ್ಲಿ ಎಲ್ಲಾ ಕೂಡಿ ಕಳೆದರೆ, ಕೋವಿಡ್‍ನ ಆರ್ಥಿಕ ಮುಗ್ಗಟ್ಟು ಎದುರಿಸಲು ಸರ್ಕಾರ ವಾಸ್ತವವಾಗಿ ಘೋಷಿಸಿರುವುದು ಹೆಚ್ಚೆಂದರೆ ₹2 ಲಕ್ಷ ಕೋಟಿ ರೂಪಾಯಿಗಳಾಗಬಹುದಷ್ಟೆ ಎಂದು ಆರ್ಥಿಕ ತಜ್ಞರೂ, ವಿವಿಧ ಬ್ಯಾಂಕಿನ ಮುಖ್ಯಸ್ಥರೂ ಹೇಳುತ್ತಿದ್ದಾರೆ. ಸರ್ಕಾರವೂ ಇದನ್ನು ನಿರಾಕರಿಸಿಲ್ಲ. ವಾಸ್ತವ ಹೀಗಿರುವಾಗ, ಈ ಕೊರೊನಾ ಸಂದರ್ಭದಲ್ಲಿನ ಸಮಾಜೋ-ಆರ್ಥಿಕ ಬಿಕ್ಕಟ್ಟನ್ನು ನಿಜವಾಗಿ, ಯಶಸ್ವಿಯಾಗಿ ಮತ್ತು ಮಾನವೀಯವಾಗಿ ನಿರ್ವಹಿಸಲು ಸಂಪತ್ತಿನ ಮೇಲೆ ತೆರಿಗೆ ವಿಧಿಸುವ ಪದ್ಧತಿಯನ್ನು ಜಾರಿಗೆ ತನ್ನಿ ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.