ADVERTISEMENT

ಕೊರೊನಾ ಭೀತಿ: ರಾಜ್ಯದಲ್ಲಿ ತುರ್ತು ಪರಿಸ್ಥಿತಿ

ಕೋವಿಡ್‌ಗೆ ದೇಶದಲ್ಲಿ ಎರಡನೇ ಬಲಿ * ರಾಜ್ಯದ 32 ಮಂದಿಗೆ ಪ್ರತ್ಯೇಕ ವಾರ್ಡುಗಳಲ್ಲಿ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 20:56 IST
Last Updated 13 ಮಾರ್ಚ್ 2020, 20:56 IST
ಕೊರೊನಾ
ಕೊರೊನಾ    

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌–19 ಸೋಂಕು ವ್ಯಾಪಕವಾಗಿ ಹರಡುವ ಭೀತಿ ಎದುರಾದ ಬೆನ್ನಲ್ಲೇ, ಶನಿವಾರದಿಂದ ಒಂದು ವಾರರಾಜ್ಯದಾದ್ಯಂತ ಮಾಲ್, ಚಿತ್ರಮಂದಿರ, ಸಭೆ, ಸಮಾರಂಭ, ಜಾತ್ರೆ, ಮದುವೆ, ಸಂತೆ, ಸಮಾವೇಶ, ಪ್ರದರ್ಶನ, ಕ್ರೀಡಾಕೂಟಗಳನ್ನು ಸ್ಥಗಿತಗೊಳಿಸಲು ಸರ್ಕಾರ ತೀರ್ಮಾನಿಸಿದೆ.

ಕಲಬುರ್ಗಿಯಲ್ಲಿ ವ್ಯಕ್ತಿಯೊಬ್ಬರು ಕೋವಿಡ್–19 ರೋಗದಿಂದಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ಅಧಿಕಾರಿಗಳ ಜತೆ ತುರ್ತು ಸಭೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರ ಕೈಗೊಂಡಿರುವ, ಕೈಗೊಳ್ಳಬೇಕಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಿದರು. ಬಳಿಕ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದರು.

ಮೃತಪಟ್ಟ ವ್ಯಕ್ತಿಯೂ ಸೇರಿಕೊಂಡಂತೆ ರಾಜ್ಯದಲ್ಲಿ ಈವರೆಗೆ ಒಟ್ಟು ಆರು ಮಂದಿಗೆ ಕೊರೊನಾ ಸೋಂಕು ತಗುಲಿದೆ.ಬೆಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಲಾ ಏಳು, ಉಡುಪಿಯಲ್ಲಿ ಐವರು ಹಾಗೂ ಹಾಸನ ಮತ್ತು ಕಲಬುರ್ಗಿಯಲ್ಲಿ ತಲಾ ನಾಲ್ವರು ಸೇರಿ ಒಟ್ಟು 32 ಮಂದಿಯನ್ನು ಪ್ರತ್ಯೇಕ ವಾರ್ಡ್‌ಗಳಲ್ಲಿ ಶನಿವಾರ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಹಿಂದೆ ಶಂಕಿತ ರೋಗಿ ಎಂದು ದಾಖಲಾಗಿದ್ದ ಐದು ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ADVERTISEMENT

ಎಲ್ಲ ಜಿಲ್ಲೆಗಳಲ್ಲಿ ವೈರಸ್‌ ಪರೀಕ್ಷಾ ಪ್ರಯೋಗಾಲಯ ತಕ್ಷಣ ಸ್ಥಾಪಿಸಲು ನಿರ್ಧರಿಸಿದೆ. ಇಟಲಿಯಲ್ಲಿ ಸಿಕ್ಕಿ ಹಾಕಿ ಕೊಂಡಿರುವ ರಾಜ್ಯದ ವಿದ್ಯಾರ್ಥಿಗಳನ್ನು ವಾಪಸ್‌ ಕರೆತರುವ ಬಗ್ಗೆಯೂ ಕೇಂದ್ರ ಸರ್ಕಾರದ ಜತೆ ಸಂಪರ್ಕ ಸಾಧಿಸಿದೆ.

ಸೋಂಕು ನಿಯಂತ್ರಣಕ್ಕೆ ಬರುವ ವರೆಗೆ ಎರಡನೇ ಶನಿವಾರ, ಭಾನುವಾರ ಸೇರಿದಂತೆ ಎಲ್ಲ ಸಾರ್ವತ್ರಿಕ ರಜಾ ದಿನಗಳಲ್ಲಿ ಆಸ್ಪತ್ರೆಗಳ ವೈದ್ಯರು, ಸಿಬ್ಬಂದಿ ಕರ್ತವ್ಯ ನಿರ್ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಈಗಾಗಲೇ ರಜೆ ಮೇಲೆ ತೆರಳಿರುವವರೂ ಕರ್ತವ್ಯಕ್ಕೆ ಹಾಜರಾಗುವಂತೆ ತಿಳಿಸಿದೆ.

ವಿದೇಶ ಪ್ರಯಾಣ ಮುಗಿಸಿ ಮರಳಿದವರು ಮತ್ತು ಆ ಪ್ರಯಾಣಿಕರ ಕುಟುಂಬದವರು, ಅವರು ಯಾವುದೇ ದೇಶದಿಂದ ಹಿಂದಿರುಗಿದರೂ ಕಡ್ಡಾಯ ವಾಗಿ 14 ದಿನಗಳ ಕಾಲ ಮನೆಯಲ್ಲಿಯೇ ಪ್ರತ್ಯೇಕವಾಗಿ ಇರಿಸುವಂತೆ ಸರ್ಕಾರ ಸೂಚಿಸಿದೆ. ಖಾಸಗಿ ಆಸ್ಪತ್ರೆಗಳೊಂದಿಗೆ ಸಮನ್ವಯ ವಹಿಸಲು ಸಮಿತಿ ರಚಿಸುವ ಜೊತೆಗೆ, ಸೋಂಕು ಪರೀಕ್ಷೆಗೆ ಹೆಚ್ಚುವರಿ ಪ್ರಯೋಗಾಲಯ ಸ್ಥಾಪಿಸಲು ನಿರ್ಧರಿಸಲಾಗಿದೆ. ಸೋಂಕು ಲಕ್ಷಣ ಇರುವ ರೋಗಿಗಳು ಬಂದರೆ ಕಡ್ಡಾಯವಾಗಿ ಆರೋಗ್ಯ ಇಲಾಖೆಯ ಗಮನಕ್ಕೆ ತರಬೇಕು ಎಂದು ಸೂಚಿಸಲಾಗಿದೆ.

ಶಾಲಾ, ಕಾಲೇಜು ರಜೆ
ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲೆಡೆ ಶಾಲೆಗಳಿಗೆ ಹಾಗೂ ಪದವಿ ಕಾಲೇಜು, ವಿಶ್ವವಿದ್ಯಾಲಯಗಳಿಗೆ ಶನಿವಾರದಿಂದಲೇ (ಮಾ.14) ರಜೆ ನೀಡಲಾಗಿದೆ. 7ನೇ ತರಗತಿ ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಿಗದಿಯಂತೆಯೇ ನಡೆಯಲಿದ್ದು, ಪದವಿ, ವಿಶ್ವವಿದ್ಯಾಲಯ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಎಲ್ಲ ಸರ್ಕಾರಿ, ಖಾಸಗಿ ವಿಶ್ವವಿದ್ಯಾಲಯಗಳು, ಪದವಿ ಕಾಲೇಜುಗಳು ಮತ್ತು ಪಾಲಿಟೆಕ್ನಿಕ್‌ಗಳಿಗೆ ಶನಿ ವಾರದಿಂದ 15 ದಿನಗಳ ಕಾಲ ರಜೆ ನೀಡಲಾಗಿದೆ.

ಅದ್ದೂರಿ ಮದುವೆಗೆ ನಿರ್ಬಂಧ
ಅದ್ದೂರಿ ವಿವಾಹ ಸಮಾರಂಭದ ಬದಲು ಸರಳ ಮದುವೆಗೆ ಆದ್ಯತೆ ನೀಡು ವಂತೆ ಸರ್ಕಾರ ಸೂಚನೆ ನೀಡಿದೆ. ಮದುವೆಗೆ ಹೆಚ್ಚಿನ ಜನರನ್ನು ಆಹ್ವಾನಿಸದೆ, ಗರಿಷ್ಠ 100 ಜನರಿಗೆ ಸೀಮಿತಗೊಳಿಸಿ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಮನವೊಲಿಸುವ ಕೆಲಸವನ್ನು ಅಧಿಕಾರಿಗಳಿಗೆ ವಹಿಸಲಾಗಿದೆ.

ಐಪಿಎಲ್‌ ಮುಂದಕ್ಕೆ; ಏಕದಿನ ಸರಣಿ ರದ್ದು
lಇದೇ ತಿಂಗಳ 29ರಂದು ಆರಂಭವಾಗಬೇಕಾಗಿದ್ದ ಐಪಿಎಲ್‌ ಟೂರ್ನಿ ಯನ್ನು ಏಪ್ರಿಲ್‌ 15ಕ್ಕೆ ಮುಂದೂಡಲಾಗಿದೆ ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಶುಕ್ರವಾರ ಪ್ರಕಟಿಸಿದೆ.

lಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಏಕದಿನ ಸರಣಿಯ ಎರಡು ಮತ್ತು ಮೂರನೇ ಪಂದ್ಯಗಳು ರದ್ದಾಗಿವೆ.

lರಾಷ್ಟ್ರ ರಾಜಧಾನಿಯಲ್ಲಿ ಇನ್ನೂ ಒಂದು ತಿಂಗಳು ಯಾವುದೇ ಕ್ರೀಡಾಕೂಟಗಳನ್ನು ನಡೆಸುವಂತಿಲ್ಲ–ಮನೀಶ್‌ ಸಿಸೋಡಿಯಾ

ದೆಹಲಿ: ಕೋವಿಡ್‌ಗೆ ಮಹಿಳೆ ಬಲಿ
69 ವರ್ಷದ ಮಹಿಳೆಯೊಬ್ಬರು ಕೋವಿಡ್‌ನಿಂದಾಗಿ ದೆಹಲಿಯಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಇದು ದೇಶದಲ್ಲಿ ಕೋವಿಡ್‌ನಿಂದ ಸಾವಿಗೀಡಾದ ಎರಡನೇ ಪ್ರಕರಣ.

ಮಧುಮೇಹ ಮತ್ತು ರಕ್ತದೊತ್ತಡ ಕಾಯಿಲೆಯಿಂದ ಬಳಲುತ್ತಿದ್ದು ಕೊರೊನಾ ಸೋಂಕಿಗೂ ತುತ್ತಾಗಿದ್ದರು. ರಾಮ ಮನೋಹರ ಲೋಹಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಟಲಿಯಿಂದ ವಾಪಸ್‌ ಆಗಿರುವ ಅವರ ಮಗ ಕೂಡ ಕೋವಿಡ್‌ ಪೀಡಿತರಾಗಿದ್ದಾರೆ.

11 ರಾಜ್ಯಗಳಿಗೆ ಹಬ್ಬಿದ ಸೋಂಕು
l11ಕ್ಕೂ ಹೆಚ್ಚು ರಾಜ್ಯಗಳಲ್ಲಿ ವೈರಸ್‌ ಸೋಂಕು. ಇದುವರೆಗೆ 81 ಪ್ರಕರಣ

lಎಲ್ಲ ನೇಮಕಾತಿ ರ‍್ಯಾಲಿಗಳನ್ನು ಮುಂದೂಡಿದ ಭಾರತೀಯ ಸೇನೆ.

lತುರ್ತು ಪ್ರಕರಣಗಳ ವಿಚಾರಣೆ ಮಾತ್ರ, ಸಂಬಂಧಪಟ್ಟ ವಕೀಲರಿಗೆ ಮಾತ್ರ ಪ್ರವೇಶ: ಸುಪ್ರೀಂ ಕೋರ್ಟ್‌

lದೇಶದಾದ್ಯಂತ 42 ಸಾವಿರಕ್ಕೂ ಹೆಚ್ಚು ಮಂದಿ ಮೇಲೆ ನಿಗಾ

lಜಗತ್ತಿನಾದ್ಯಂತ 5000ಕ್ಕೂ ಹೆಚ್ಚು ಸಾವು

lವೈರಸ್‌ ಸೋಂಕು ಕೇಂದ್ರವಾದ ಯುರೋಪ್‌: ಡಬ್ಲ್ಯುಎಚ್‌ಒ

ಯಾವುದಕ್ಕೆ ನಿರ್ಬಂಧ

l ರಾಜ್ಯದ ಎಲ್ಲ ಜಿಲ್ಲೆಗಳಲ್ಲಿನ ಜಾತ್ರಾ ಮಹೋತ್ಸವಕ್ಕೆ ನಿರ್ಬಂಧ

l ನೈಟ್‌ ಕ್ಲಬ್‌, ಪಬ್‌ಗಳು ನಡೆಯುವಂತಿಲ್ಲ

l ಮಲ್ಟಿಪ್ಲೆಕ್ಸ್‌ ಸೇರಿದಂತೆ ಎಲ್ಲ ಚಿತ್ರಮಂದಿರಗಳ ಬಂದ್

l ದರ್ಶನ, ಸಂತೆ, ಸಭೆ, ಸಮ್ಮೇಳನಗಳಿಗೆ ಅಡ್ಡಿ

l ಬೃಹತ್ ಸಮಾರಂಭ, ಬೇಸಿಗೆ ಶಿಬಿರಗಳಿಗೆ ಅಡ್ಡಿ

l ಈಜುಕೊಳ, ಕ್ರೀಡಾಕೂಟಗಳು ನಡೆಯುವಂತಿಲ್ಲ

l ಕೋಚಿಂಗ್‌ ಕ್ಲಾಸ್‌ಗಳು, ಕಾರ್ಯಾಗಾರ ನಡೆಸಬಾರದು

ಏನು ಇರಲಿದೆ?

l ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು, ಮೆಡಿಕಲ್ ಶಾಪ್, ಆಸ್ಪತ್ರೆ ಅಬಾಧಿತ

l ತರಕಾರಿ, ಹಾಲು, ಕಿರಾಣಿ ಅಂಗಡಿಗೆ ಅಡ್ಡಿಯಿಲ್ಲ.

l ವಿಧಾನಮಂಡಲ ಅಧಿವೇಶನ ನಡೆಯಲಿದೆ

l ಖಾಸಗಿ ಕಚೇರಿಗಳು ಕಾರ್ಯ ನಿರ್ವಹಿಸಬಹುದು

l ಬಸ್, ರೈಲು ಸೇರಿದಂತೆ ಸಾರಿಗೆ ವ್ಯವಸ್ಥೆ

l ಹೋಟೆಲ್–ಉಪಾಹಾರಗೃಹ, ಬಾರ್ ಆ್ಯಂಡ್ ರೆಸ್ಟೋರಂಟ್‌ಗಳಿಗೆ ನಿರ್ಬಂಧ ಇರುವುದಿಲ್ಲ

ಮುಂದಿನ ವಾರದ ಪ್ರಮುಖ ಜಾತ್ರೆಗಳು

lಕೋಲಾರಮ್ಮ ಜಾತ್ರೆ(ದಿ.15)

lಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ಜಾತ್ರೆ(ದಿ.16)

lಚಿತ್ರದುರ್ಗ ಜಿಲ್ಲೆ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಜಾತ್ರೆ–ಮರಿಪರಿಷೆ(ದಿ.16)

lಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಬ್ರಹ್ಮ ರಥೋತ್ಸವ ಸರಳವಾಗಿ ಆಚರಣೆ(ದಿ.17)

lತುಮಕೂರು ಜಿಲ್ಲೆ ಮಧುಗಿರಿ ಪಟ್ಟಣದ ದಂಡಿನ ಮಾರಮ್ಮ ದೇವಿ ಜಾತ್ರೆಯ ಬೆಳ್ಳಿ ಪಲ್ಲಕ್ಕಿ(ದಿ.18)

lಚಾಮರಾಜನಗರದಲ್ಲಿ ಹಿಮವದ್ ಗೋಪಾಲಸ್ವಾಮಿ ರಥೋತ್ಸವ(ದಿ.20)

*
ಸೋಂಕು ಹರಡದಂತೆ ಕಟ್ಟೆಚ್ಚರ ವಹಿಸಲಾಗಿದೆ. ಅನಗತ್ಯವಾಗಿ ಆತಂಕಕ್ಕೆ ಒಳಗಾಗಬೇಕಾಗಿಲ್ಲ. ಮುನ್ನೆಚ್ಚರಿಕೆ ಕ್ರಮ ವಹಿಸಬೇಕು
–ಬಿ.ಎಸ್‌. ಯಡಿಯೂರಪ್ಪ, ಮುಖ್ಯಮಂತ್ರಿ

*
ವೈರಸ್‌ ಹರಡದಂತೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿಯನ್ನು ಮನೆಮನೆಗೆ ಕಳುಹಿಸಬೇಕು
–ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.