ADVERTISEMENT

ಕೋವಿಡ್-19 ಭೀತಿ: ಮೂವರು ವೈದ್ಯದಂಪತಿ ಸೇರಿ 16 ಮಂದಿಯ ಮೇಲೆ ನಿಗಾ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 9:16 IST
Last Updated 14 ಮಾರ್ಚ್ 2020, 9:16 IST
   

ಬಾಗಲಕೋಟೆ: ಕೋವಿಡ್-19 ಭೀತಿಯ ಹಿನ್ನೆಲೆಯಲ್ಲಿ ವಿದೇಶದಿಂದ ಮರಳಿದ ನಗರದ ಮೂವರು ವೈದ್ಯ ದಂಪತಿ ಸೇರಿ 16 ಮಂದಿಯನ್ನು 14 ದಿನಗಳ ನಿಗಾದಲ್ಲಿ (ಕ್ವಾರೆಂಟೈನ್) ಇಡಲಾಗಿದೆ.

ಹೋಳಿ ಹಬ್ಬದ ರಜೆ ಹಿನ್ನೆಲೆಯಲ್ಲಿ ಮೂವರು ವೈದ್ಯ ದಂಪತಿ ಸೇರಿದಂತೆ ಎಂಟು ಮಂದಿ ದುಬೈಗೆ ಪ್ರವಾಸ ತೆರಳಿದ್ದರು. ಶುಕ್ರವಾರ ನಗರಕ್ಕೆ ಹಿಂತಿರುಗಿದ್ದಾರೆ. ಮುಂದಿನ 14 ದಿನಗಳ ಕಾಲ ಮನೆ ಬಿಟ್ಟು ಹೊರಗೆ ಹೋಗದಂತೆ ಸೂಚಿಸಿ ಅವರ ಮೇಲೆ ನಿಗಾ ವಹಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅನಂತ ದೇಸಾಯಿ ಪ್ರಜಾವಾಣಿಗೆ ತಿಳಿಸಿದರು.

ಇಲ್ಲಿಯವರೆಗೆ ಜಿಲ್ಲೆಯಲ್ಲಿ ವಿದೇಶದಿಂದ ಮರಳಿದ 16 ಮಂದಿಯ ಮೇಲೆ ನಿಗಾ ಇಡಲಾಗಿದೆ ಎಂದು ಹೇಳಿದರು.

ADVERTISEMENT

ಫ್ರಾನ್ಸ್ ಪ್ರವಾಸಿ ನಿರ್ಗಮನ: ಬಾದಾಮಿ ಪ್ರವಾಸಕ್ಕೆ ಬಂದಿದ್ದ ಫ್ರಾನ್ಸ್ ಪ್ರಜೆಯೊಬ್ಬರಿಗೆ ಕ್ವಾರಂಟೀನ್ ನಲ್ಲಿ ಇಡಲು ಮುಂದಾಗಿದ್ದೆವು. 14 ದಿನ ಹೋಟೆಲ್ ನಿಂದ ಹೊರಗೆ ತೆರಳದಂತೆ ಸೂಚಿಸಿದ್ದೆವು. ಆದರೆ ಅವರು ಏಕಾಏಕಿ ಕೊಠಡಿ ಖಾಲಿ ಮಾಡಿಕೊಂಡು ಹಾಸನಕ್ಕೆ ತೆರಳಿದ್ದಾರೆ. ಆ ಬಗ್ಗೆ ಹಾಸನ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ಸಂಬಂಧಿಸಿದ ಪ್ರವಾಸಿಯ ಸಂಪರ್ಕ ಸಂಖ್ಯೆಯನ್ನು ಅಲ್ಲಿನ ಅಧಿಕಾರಿಗಳಿಗೆ ಕೊಟ್ಟಿದ್ದೇವೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ರಾಜೇಂದ್ರ ತಿಳಿಸಿದರು.

ಜಾತ್ರೆ ಮುಂದಕ್ಕೆ:ಯುಗಾದಿ ಹಬ್ಬದ ಅಂಗವಾಗಿ ಇಲ್ಲಿನ ಕಣವಿ ವೀರಭದ್ರೇಶ್ವರ ವಾರ್ಷಿಕ ಜಾತ್ರೆ ಹಾಗೂ ಅಗ್ನಿ ಹಾಯುವ ಕಾರ್ಯಕ್ರಮವನ್ನು ಕೋವಿಡ್-19 ಭೀತಿ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ ಎಂದು ಶಾಸಕ ವೀರಣ್ಣ ಚರಂತಿಮಠ ತಿಳಿಸಿದರು.

ಶ್ರೀಶೈಲ ಯಾತ್ರೆಗೆ ಕರಿ ನೆರಳು: ಆಂಧ್ರಪ್ರದೇಶದ ಶ್ರೀಶೈಲದಲ್ಲಿ ಯುಗಾದಿ ದಿನ ನಡೆಯುವ ಮಲ್ಲಿಕಾರ್ಜುನ ರಥೋತ್ಸವಕ್ಕೆ ತೆರಳುವವರಿಗೆ ಕೋವಿಡ್-19 ಭೀತಿ ಎದುರಾಗಿದೆ.

ಶ್ರೀಶೈಲಕ್ಕೆ ಮಾರ್ಚ್ 25ರಂದು ತೆರಳಲು ಭಕ್ತಾದಿಗಳ ಅನುಕೂಲಕ್ಕೆ 10 ಬಸ್ ಗಳನ್ನು ಮುಂಗಡ ಕಾಯ್ದಿರಿಸಲಾಗಿದೆ. ಈಗ ಅವುಗಳನ್ನು ರದ್ದುಪಡಿಸಲು ಯೋಚಿಸುತ್ತಿದ್ದೇವೆ. ಆ ಬಗ್ಗೆ ಮಾರ್ಗದರ್ಶನ ಪಡೆಯಲು ಶ್ರೀಶೈಲ ದೇವಸ್ಥಾನ ಟ್ರಸ್ಟ್ ನವರನ್ನು ಸಂಪರ್ಕಿಸಿದ್ದು, ಅವರು ಭಾನುವಾರ ಆ ಬಗ್ಗೆ ಸ್ಪಷ್ಟಪಡಿಸುವುದಾಗಿ ಹೇಳಿದ್ದಾರೆ. ಯಾತ್ರೆ ಕೈಗೊಳ್ಳುವ ಬಗ್ಗೆ ನಂತರ ತೀರ್ಮಾನಿಸಲಾಗುವುದು ಎಂದು ಯಾತ್ರಾ ಸಮಿತಿ ಮುಖಂಡ ಮಹೇಶ ಕಮತಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.