ADVERTISEMENT

ರಾಜ್ಯಕ್ಕೆ ‘ಮಹಾ’ ಕಂಟಕ; ಮೃತರ ಸಂಖ್ಯೆ 41

ಒಂದೇ ದಿನ 67 ಮಂದಿಗೆ ಸೋಂಕು

​ಪ್ರಜಾವಾಣಿ ವಾರ್ತೆ
Published 21 ಮೇ 2020, 5:35 IST
Last Updated 21 ಮೇ 2020, 5:35 IST
ಕೊರೊನಾ
ಕೊರೊನಾ   

ಬೆಂಗಳೂರು: ಮಹಾರಾಷ್ಟ್ರದಿಂದ ವಾಪಸ್‌ ಆಗಿದ್ದ 51 ಮಂದಿ ಸೇರಿದಂತೆ ರಾಜ್ಯದಲ್ಲಿ ಬುಧವಾರ ಒಂದೇ ದಿನ 67 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಕೋವಿಡ್ ಪೀಡಿತರ ಸಂಖ್ಯೆ 1,462ಕ್ಕೆ ಏರಿಕೆಯಾಗಿದೆ.

ಅನ್ಯ ರಾಜ್ಯಗಳಿಗೆ ಪ್ರಯಾಣ ಮಾಡಿದ ಇತಿಹಾಸ ಹೊಂದಿರುವವರಲ್ಲಿ ಹೆಚ್ಚಾಗಿ ಸೋಂಕು ಕಾಣಿಸಿಕೊಳ್ಳಲಾರಂಭಿಸಿದೆ. ಮುಂಬೈನಿಂದ ಬಂದವರು ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್‌ ಪೀಡಿತರಾಗುತ್ತಿರುವುದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ತಪಾಸಣೆ ವೇಳೆ ಸೋಂಕು ಲಕ್ಷಣಗಳು ಕಾಣಿಸಿಕೊಳ್ಳದಿದ್ದರೂ ಬಳಿಕ ರೋಗ ದೃಢಪಡುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷೆಯ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಬುಧವಾರ ಒಂದೇ ದಿನ 8,182 ಮಂದಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ.

ಹಾಸನದಲ್ಲಿ 21, ಬೀದರ್‌ನಲ್ಲಿ 10, ಮಂಡ್ಯದಲ್ಲಿ 8, ಕಲಬುರ್ಗಿಯಲ್ಲಿ 7, ಉಡುಪಿಯಲ್ಲಿ 6, ಬೆಂಗಳೂರು, ತುಮಕೂರು, ರಾಯಚೂರಿನಲ್ಲಿ ತಲಾ 4 ಹಾಗೂ ಉತ್ತರ ಕನ್ನಡ, ದಕ್ಷಿಣ ಕನ್ನಡ, ಯಾದಗಿರಿಯಲ್ಲಿ ತಲಾ ಒಂದು ಪ್ರಕರಣ ವರದಿಯಾಗಿವೆ.

ADVERTISEMENT

ಬೆಂಗಳೂರಿನಲ್ಲಿ 43 ವರ್ಷದ ವ್ಯಕ್ತಿ ಮೃತರಾಗಿದ್ದಾರೆ. ರಕ್ತದೊತ್ತಡ ಹಾಗೂ ಹೃದಯ ಕಾಯಿಲೆ ಹೊಂದಿದ್ದ ಅವರು, ತಮಿಳುನಾಡಿನ ವೆಲ್ಲೂರಿಗೆ ಪ್ರಯಾಣ ಮಾಡಿದ ಇತಿಹಾಸ ಹೊಂದಿದ್ದರು. ರಾಜ್ಯದಲ್ಲಿ ಸೋಂಕಿಗೆ ಮೃತಪಟ್ಟವರ ಸಂಖ್ಯೆ 41ಕ್ಕೆ ತಲುಪಿದೆ.

‘ರಾಜ್ಯದಲ್ಲಿ ಈಗ ಇನ್ನೂ ನಾಲ್ಕು ಪ್ರಯೋಗಾಲಯಗಳಿಗೆಹೊಸದಾಗಿ ಅನುಮೋದನೆ ಸಿಕ್ಕಿದೆ.ಪರೀಕ್ಷೆಯ ಸಂಖ್ಯೆಯನ್ನು ಹೆಚ್ಚಳ ಮಾಡಲಾಗುವುದು’ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.

ಕಬಡ್ಡಿ, ಈಜು, ಜಿಮ್‌ ಬಿಟ್ಟು ಉಳಿದ ಕ್ರೀಡೆಗಳಿಗೆ ಅವಕಾಶ

ಕಬಡ್ಡಿ, ಈಜು, ಜಿಮ್‌‌ ಬಿಟ್ಟು ಉಳಿದ ಎಲ್ಲ ಕ್ರೀಡಾ ಚಟುವಟಿಕೆಗಳಿಗೆ ಮತ್ತು ಅಭ್ಯಾಸಕ್ಕೆ ಅನುಮತಿ ನೀಡಲಾಗಿದೆ ಎಂದು ಕ್ರೀಡಾ ಮತ್ತು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.

ಅಂತರ ಕಾಪಾಡಿಕೊಂಡು ಆಡಬಹುದಾದ ಎಲ್ಲ ಕ್ರೀಡೆಗಳಿಗೂ ಅವಕಾಶ ಇದೆ. ಆದರೆ, ಪ್ರೇಕ್ಷಕರಿಗೆ ಪ್ರವೇಶ ನೀಡುವಂತಿಲ್ಲ. ಮಾಸ್ಕ್‌, ಸ್ಯಾನಿಟೈಸರ್‌ಗಳನ್ನು ಕಡ್ಡಾಯವಾಗಿ ಬಳಸಬೇಕು ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮೇ 31 ರವರೆಗೆ ಕ್ರೀಡಾ ಕ್ಲಬ್‌ಗಳಲ್ಲಿ ರಿಕ್ರಿಯೇಷನ್‌, ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೂ ಅವಕಾಶ ಇರುವುದಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣ
ದಲ್ಲಿ ಕ್ರಿಕೆಟ್‌ ಆಡಿದರೂ ಮಾಸ್ಕ್‌ ಹಾಕಿಕೊಳ್ಳಬೇಕು ಎಂದೂ
ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.