ADVERTISEMENT

‌ಕಲಬುರ್ಗಿ: ಬಹಮನಿ ಆಸ್ಪತ್ರೆಯ ‘ಆಯಾ’ಗೂ ಕೋವಿಡ್, ಸೋಂಕಿತರ ಸಂಖ್ಯೆ 11ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2020, 9:46 IST
Last Updated 11 ಏಪ್ರಿಲ್ 2020, 9:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

‌ಕಲಬುರ್ಗಿ: ನಗರದ ಕೆಬಿಎನ್‌ ದರ್ಗಾ ರಸ್ತೆಯಲ್ಲಿರುವ ಬಹಮನಿ (ಖಾಸಗಿ) ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ 38 ವರ್ಷದ ಆಯಾ ಒಬ್ಬರಿಗೆ ಕೋವಿಡ್‌–19 ಸೋಂಕು ತಗುಲಿದ್ದು ಶನಿವಾರ ದೃಢಪ‍ಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 11ಕ್ಕೆ ಏರಿದೆ.

ಕೋವಿಡ್‌ನಿಂದಾಗಿಯೇ ಬುಧವಾರ (ಏ. 9) ಮೃತಪಟ್ಟ 65 ವರ್ಷದ ವೃದ್ಧ ಇದೇ ಬಹಮನಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ನಿಯಮ ಉಲ್ಲಂಘಿಸಿದ ಕಾರಣಕ್ಕೆ ಆಸ್ಪತ್ರೆಯನ್ನು ಬಂದ್‌ ಮಾಡಲಾಗಿದ್ದು, ವೈದ್ಯರು ಸೇರಿ ಎಲ್ಲ ಸಿಬ್ಬಂದಿಯನ್ನೂ ಕ್ವಾರಂಟೈನ್‌ ಮಾಡಲಾಗಿದೆ. ಆದರೆ, ಶುಕ್ರವಾರ ಆಯಾ ಕೆಲಸ ಮಾಡುತ್ತಿದ್ದ ಮಹಿಳೆಗೆ ಲಕ್ಷಣಗಳು ಕಂಡುಬಂದವು. ಅವರ ಕಫದ ಮಾದರಿ ಪರೀಕ್ಷೆಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಇದರಿಂದಾಗಿ ಇಡೀ ಪ್ರದೇಶದಲ್ಲಿ ಭಯದ ವಾತಾವರಣ ಮನೆ ಮಾಡಿದೆ.

ಮೃತಪಟ್ಟ 65 ವರ್ಷದ ವೃದ್ಧ ವಿದೇಶದಿಂದಲೂ ಬಂದಿಲ್ಲ, ದೆಹಲಿಗೂ ಭೇಟಿ ನೀಡಿರಲಿಲ್ಲ. ಆದರೆ, ಪುಣೆಯಲ್ಲಿರುವ ತಮ್ಮ ಸಹೋದರಿ ಮನೆಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಸೋಂಕು ತಗುಲಿರಬಹುದು ಎಂದು ಅಂದಾಜಿಲಾಗಿತ್ತು. ತೀವ್ರ ಜ್ವರ, ಕೆಮ್ಮು, ಉಸಿರಾಟದಿಂದ ಬಳಲುತ್ತಿದ್ದ ಅವರು, ಮೊದಲು ಸ್ಟಾರ್‌ ಆಸ್ಪತ್ರೆ ನಂತರ ಬಹಮನಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಆರೋಗ್ಯ ಸ್ಥಿತಿ ಬಿಗಡಾಯಿಸಿದ ನಂತರ ಖಾಸಗಿ ವೈದ್ಯರು ಅವರನ್ನು ನಗರದ ಇಎಸ್‌ಐ ಆಸ್ಪತ್ರೆಗೆ ಸಾಗಿಸಿದ್ದರು. ಅಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುವ ಹೊತ್ತಿಗೆ ವೃದ್ಧ ಕೊನೆಯುಸಿರೆಳೆದರು.

ADVERTISEMENT

ಆಸ್ಪತ್ರೆಗಳ ಸಿಬ್ಬಂದಿಯ ಮಾದರಿಗಳನ್ನು ತಪಾಸಣೆಗೆ ಕಳುಹಿಸಿದ್ದು, ಎಲ್ಲರನ್ನೂ ಗೃಹಬಂಧನದಲ್ಲಿ ಇಡಲಾಗಿದೆ. ಇವರಲ್ಲಿಯೇ ಒಬ್ಬರಾದ ಆಯಾ ಕೆಲಸ ಮಾಡುವ ಮಹಿಳೆಗೆ ಸೋಂಕು ತಗುಲಿದ್ದು, ಪರಿಸ್ಥಿತಿ ಮತ್ತಷ್ಟು ‘ಗಂಭೀರ’ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.