ADVERTISEMENT

ಲಾಕ್‌ಡೌನ್‌ ಪರಿಣಾಮ: ಕೇರಳದಿಂದ ಕಾಲ್ನಡಿಗೆಯಲ್ಲಿ ರಾಜ್ಯಕ್ಕೆ ಮರಳಿದ ಕಾರ್ಮಿಕರು

ಹೋಂ ಕ್ವಾರಂಟೈನ್‌ಗೆ ರಾಜ್ಯಕ್ಕೆ ಬಂದ ಕಾರ್ಮಿಕರು

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2020, 14:30 IST
Last Updated 27 ಮಾರ್ಚ್ 2020, 14:30 IST
ವಿರಾಜಪೇಟೆ ಸಮೀಪದ ಏಕಲವ್ಯ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕಟ್ಟಡದಲ್ಲಿ ಕೇರಳದಿಂದ ವಲಸೆ ಬಂದಿರುವ 133 ಕಾರ್ಮಿಕರನ್ನು ಶುಕ್ರವಾರ ತಪಾಸಣೆ ನಡೆಸಿ ನಿಗಾದಲ್ಲಿ ಇಡಲಾಗಿದೆ 
ವಿರಾಜಪೇಟೆ ಸಮೀಪದ ಏಕಲವ್ಯ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕಟ್ಟಡದಲ್ಲಿ ಕೇರಳದಿಂದ ವಲಸೆ ಬಂದಿರುವ 133 ಕಾರ್ಮಿಕರನ್ನು ಶುಕ್ರವಾರ ತಪಾಸಣೆ ನಡೆಸಿ ನಿಗಾದಲ್ಲಿ ಇಡಲಾಗಿದೆ    

ವಿರಾಜಪೇಟೆ: ಕೇರಳ ರಾಜ್ಯದಲ್ಲಿ ಕೊರೊನಾ ವೈರಸ್‌ ಕ್ಷಿಪ್ರವಾಗಿ ಹರಡುತ್ತಿದ್ದು, ಆ ರಾಜ್ಯಕ್ಕೆ ಕೂಲಿ ಅರಸಿ ಹೋಗಿದ್ದ ರಾಯಚೂರು, ಗದಗ, ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಗಳ ಕಾರ್ಮಿಕರು ರಾಜ್ಯದತ್ತ ಮರಳುತ್ತಿದ್ದಾರೆ.

ಕೇರಳದ ಕಣ್ಣಾನೂರು, ಕೂತುಪರಂಬು ಸೇರಿದಂತೆ ವಿವಿಧ ಸ್ಥಳಗಳಿಗೆ ವಲಸೆ ಹೋಗಿದ್ದ 21 ಮಹಿಳೆಯರೂ ಸೇರಿದಂತೆ 133 ಕಾರ್ಮಿಕರು ಕಾಲ್ನಡಿಗೆಯಲ್ಲೇ ಕೊಡಗು ಗಡಿಭಾಗಕ್ಕೆ ಶುಕ್ರವಾರ ಬಂದು ತಲುಪಿದರು. ವಾಹನ ವ್ಯವಸ್ಥೆ ಇಲ್ಲದೇ ಅವರು ಮಾಕುಟ್ಟ ಹೆದ್ದಾರಿಯಲ್ಲೇ ನಡೆದು ಕೊಡಗಿನ ಪೆರುಂಬಾಡಿಗೆ ಬಂದಿದ್ದ ಅವರ ಮುಖದಲ್ಲಿ ಆತಂಕವಿತ್ತು.

‘ಕೇರಳ ಸಂಪೂರ್ಣ ಲಾಕ್‌ಡೌನ್‌ ಆಗಿದೆ. ಅಲ್ಲಿ ದಿನದಿಂದ ದಿನಕ್ಕೆ ಆತಂಕ ಹೆಚ್ಚುತ್ತಿದೆ. ಇನ್ನೂ ಕೆಲವು ಕಾರ್ಮಿಕರು ಕಾಲ್ನಡಿಗೆಯಲ್ಲಿ ಬರುತ್ತಿದ್ದಾರೆ. ಅರಣ್ಯ ಪ್ರದೇಶ ದಾರಿಯಲ್ಲೂ ಯಾವುದೇ ಅಂಗಡಿಗಳು ಇರಲಿಲ್ಲ. ಇದ್ದಷ್ಟು ಬಿಸ್ಕತ್‌ ತಿಂದು ವಿರಾಜಪೇಟೆ ತಲುಪಿದ್ದೇವೆ. ಮಹಿಳೆಯರು ಹಾಗೂ ಮಕ್ಕಳು ಅಳುತ್ತಲೇ ನಡೆದು ಬಂದರು’ ಎಂದು ಕಾರ್ಮಿಕರೊಬ್ಬರು ಹೇಳಿದರು.

ADVERTISEMENT

ಥರ್ಮಲ್ ಸ್ಕ್ರೀನಿಂಗ್‌ ಸೇರಿದಂತೆ ವಿವಿಧ ತಪಾಸಣೆ ನಡೆಸಿ, ವಿರಾಜಪೇಟೆಯ ಬಾಳುಗೋಡಿನ ಏಕಲವ್ಯ ಶಾಲೆ ಹಾಗೂ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಎಲ್ಲ ಕಾರ್ಮಿಕರನ್ನು ಹೋಂ ಕ್ವಾರಂಟೈನ್‌ನಲ್ಲಿ ನಿಗಾ ವಹಿಸಲಾಗಿದೆ. ಅಲ್ಲಿಯೇ ಅವರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.

ಮತ್ತೊಮ್ಮೆ ಪರೀಕ್ಷೆಯ ನಂತರ ಎಲ್ಲರನ್ನೂ ಅವರವರ ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದು ವಿರಾಜಪೇಟೆ ತಹಶೀಲ್ದಾರ್ ನಂದೀಶ್ ತಿಳಿಸಿದರು.

ಮಣ್ಣು ಸುರಿದು ರಸ್ತೆ ಬಂದ್

ಮಾಕುಟ್ಟ ಮೂಲಕ ಕೇರಳದಿಂದ ಕೊಡಗಿಗೆ ಆಗಮಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು ಮತ್ತೊಂದು ಆತಂಕ ಆರಂಭವಾಗಿದೆ. ಮಾಕುಟ್ಟದ ಕೂಟುಪೊಳೆಯ ಬಳಿ ಅಂತರ ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ಜೆಸಿಬಿಯಿಂದ ಮಣ್ಣು ಸುರಿದು ರಸ್ತೆ ಮುಚ್ಚಲಾಗಿದೆ. ಈ ಸ್ಥಳಕ್ಕೆ ಶುಕ್ರವಾರ ಕೊಡಗು ಹಾಗೂ ಕೇರಳದ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.