ADVERTISEMENT

ಕೋವಿಡ್: ಪರೀಕ್ಷೆ ಸಂಖ್ಯೆ ಮತ್ತೆ ಇಳಿಕೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2020, 18:41 IST
Last Updated 1 ಡಿಸೆಂಬರ್ 2020, 18:41 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಕಳೆದೊಂದು ತಿಂಗಳಿನಿಂದ ಪ್ರತಿನಿತ್ಯ ಲಕ್ಷದ ಗಡಿ ದಾಟುತ್ತಿದ್ದ ಕೋವಿಡ್ ಪರೀಕ್ಷೆಗಳ ಸಂಖ್ಯೆಯು ಮಂಗಳವಾರ 94 ಸಾವಿರಕ್ಕೆ ಇಳಿಕೆಯಾಗಿದೆ.

20,629 ಆ್ಯಂಟಿಜೆನ್ ಹಾಗೂ 74,256 ಆರ್‌ಟಿ–ಪಿಸಿಆರ್ ಪರೀಕ್ಷೆಗಳನ್ನು ನಡೆಸಲಾಗಿದೆ. ಇದರಿಂದಾಗಿ ಹೊಸದಾಗಿ 1,330 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿಗೀಡಾದವರ ಒಟ್ಟು ಸಂಖ್ಯೆ 8.86 ಲಕ್ಷಕ್ಕೆ ಏರಿಕೆಯಾಗಿದೆ. ಕಳೆದ ತಿಂಗಳು 62,815 ಮಂದಿ ಕೋವಿಡ್ ಪೀಡಿತರಾಗಿರುವುದು ದೃಢಪಟ್ಟಿದೆ. ಸೋಂಕಿತರಲ್ಲಿ ಮತ್ತೆ 14 ಮಂದಿ ಮೃತಪಟ್ಟಿದ್ದು, ಈವರೆಗೆ ಸಾವಿಗೀಡಾದವರ ಒಟ್ಟು ಸಂಖ್ಯೆ 11,792ಕ್ಕೆ ಏರಿಕೆಯಾಗಿದೆ.

ಕೋವಿಡ್ ಪೀಡಿತರಲ್ಲಿ ರಾಜ್ಯದಲ್ಲಿ 886 ಮಂದಿಗೆ ಕಾಯಿಲೆ ವಾಸಿಯಾಗಿದೆ. ಇದರಿಂದಾಗಿ ಗುಣಮುಖರ ಸಂಖ್ಯೆ 8.50 ಲಕ್ಷಕ್ಕೆ ತಲುಪಿದೆ. ಸೋಂಕಿತರಲ್ಲಿ ಸದ್ಯ 23,709 ಮಂದಿ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಕೋವಿಡ್ ಮರಣ ಪ್ರಕರಣಗಳ ಜತೆಗೆ ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಾಗುವವರ ಸಂಖ್ಯೆಯೂ ಇಳಿಮುಖ ಕಂಡಿದ್ದು, ಸದ್ಯ 336 ಮಂದಿ ಐಸಿಯುನಲ್ಲಿದ್ದಾರೆ.

ADVERTISEMENT

ಕಳೆದ 14 ದಿನಗಳ ಅವಧಿಯಲ್ಲಿ 1.17 ಲಕ್ಷ ನೇರ ಸಂಪರ್ಕಿತರು ಹಾಗೂ 1.31 ಲಕ್ಷ ಪರೋಕ್ಷ ಸಂಪರ್ಕಿತರನ್ನು ಪತ್ತೆ ಮಾಡಲಾಗಿದೆ. ಕಳೆದ 7 ದಿನಗಳ ಅವಧಿಯಲ್ಲಿ 29,776 ಮಂದಿಯನ್ನು ಮನೆ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಬೆಂಗಳೂರಿನಲ್ಲಿ 758 ಮಂದಿ ಕೋವಿಡ್ ಪೀಡಿತರಾಗಿದ್ದು, ಸೋಂಕಿತರ ಸಂಖ್ಯೆ 3.70 ಲಕ್ಷ ದಾಟಿದೆ. ಮೈಸೂರಿನಲ್ಲಿ ಮತ್ತೆ 51 ಪ್ರಕರಣಗಳು ವರದಿಯಾಗಿದೆ. ಅಲ್ಲಿ ಒಟ್ಟು ಸೋಂಕಿತರ ಸಂಖ್ಯೆ 50,731ಕ್ಕೆ ತಲುಪಿದೆ. ಹಾಸನ (50), ತುಮಕೂರು (49), ಮಂಡ್ಯ (40) ಜಿಲ್ಲೆಯಲ್ಲಿ ಅಧಿಕ ಪ್ರಕರಣಗಳು ವರದಿಯಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.