ADVERTISEMENT

ವೈದ್ಯಕೀಯ ಉಪಕರಣಗಳ ಖರೀದಿ ತನಿಖೆಗೆ ಒತ್ತಾಯ: ಕಾಂಗ್ರೆಸ್‌–ಬಿಜೆಪಿ ಟ್ವೀಟ್ ಸಮರ

​ಪ್ರಜಾವಾಣಿ ವಾರ್ತೆ
Published 24 ಜುಲೈ 2020, 9:39 IST
Last Updated 24 ಜುಲೈ 2020, 9:39 IST
ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ
ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ   

ಬೆಂಗಳೂರು: ವೈದ್ಯಕೀಯ ಉಪಕರಣಗಳ ಖರೀದಿಗೆ ಸಂಬಂಧಿಸಿದಂತೆ ಬಿಜೆಪಿ– ಕಾಂಗ್ರೆಸ್‌ ಮಧ್ಯೆ ಆರೋಪ–ಪ್ರತ್ಯಾರೋಪಗಳ ಟ್ವೀಟ್‌ಗಳ ಸಮರ ಆರಂಭಗೊಂಡಿದೆ. ಕಾಂಗ್ರೆಸ್‌ ನಾಯಕರು ನ್ಯಾಯಾಂಗ ತನಿಖೆ ಮಾಡಬೇಕು ಎಂದು ಆಗ್ರಹಿಸಿದರೆ, ಸುಳ್ಳು ಆರೋಪಗಳಿಗೆ ತನಿಖೆಯ ಅಗತ್ಯವೇನಿದೆ ಎಂದು ಬಿಜೆಪಿ ಮುಖಂಡರು ಪ್ರಶ್ನಿಸಿದ್ದಾರೆ.

‘ಉಪಕರಣಗಳ ಖರೀದಿಯಲ್ಲಿ ಹಗರಣವೇ ಆಗಿಲ್ಲದಿದ್ದರೆ ತನಿಖೆಗೆ ಹೆದರುವುದು ಏಕೆ? ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಕೆ.ಜೆ.ಜಾರ್ಜ್‌ ಮೇಲೆ ಆರೋಪ ಬಂದಿತ್ತು. ಆಗ ಸರ್ಕಾರ ಅವರ ಮೇಲೆ ತನಿಖೆ ನಡೆಸಿತ್ತಲ್ಲ’ ಎಂದು ಕೆಪಿಸಿಸಿ ಟ್ವೀಟ್‌ ಮಾಡಿದೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ತಮ್ಮ ಟ್ವೀಟ್‌ನಲ್ಲಿ, ‘ಕಾಂಗ್ರೆಸ್ ಸರ್ಕಾರ ಇದ್ದಾಗ ಡಿ.ಕೆ.ರವಿ ಸೇರಿ ಅದೆಷ್ಟೋ ಪ್ರಕರಣಗಳಲ್ಲಿ ತನಿಖೆ ಮಾಡಿಲ್ಲವೇ, ಈಗಲೂ ಹಾಲಿ ನ್ಯಾಯಾಧೀಶರಿಂದ ತನಿಖೆ ಮಾಡಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ADVERTISEMENT

ಸತ್ಯಕ್ಕೆ ದೂರ ಆರೋಪಗಳು

ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ಆರೋಪಗಳಿಗೆ ಉತ್ತರ ನೀಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅವರು, ‘ಕಳೆದ ಐದು ತಿಂಗಳಿನಿಂದ ವೈದ್ಯಕೀಯ ಶಿಕ್ಷಣ ಇಲಾಖೆ ಜವಾಬ್ದಾರಿ ಹೊತ್ತು ಕಾರ್ಯಕ್ಷಮತೆಯಿಂದ ಅವಿರತವಾಗಿ ಶ್ರಮಿಸುತ್ತಿರುವ ಸನ್ನಿವೇಶದಲ್ಲಿ ನನ್ನ ಇಲಾಖೆ ವಿರುದ್ಧ ಸತ್ಯಕ್ಕೆ ದೂರವಾದ ಆರೋಪಗಳು ಬಂದಾಗ ಜವಾಬ್ದಾರಿಯಿಂದ ವಾಸ್ತವಾಂಶಗಳನ್ನು ಜನರ ಮುಂದಿಟ್ಟಿದ್ದೇನೆ’ ಎಂದಿದ್ದಾರೆ.

‘ನಾನು ಅಧಿಕಾರದ ಅಹಂನಿಂದ ಮಾತನಾಡಿದ್ದೇನೆ ಮತ್ತು ನನಗೆ ಉಪಕಾರ ಸ್ಮರಣೆ ಇರಬೇಕು ಸಿದ್ದರಾಮಯ್ಯ ಹೇಳಿದ್ದಾರೆ. ಅವರು ಹಿಂದೆ ನೀಡಿರುವ ಸಹಕಾರ ಮತ್ತು ಮಾರ್ಗದರ್ಶನವನ್ನು ಸದಾ ಸ್ಮರಿಸುತ್ತೇನೆ ಮತ್ತು ನಾನು ಸಲ್ಲಿಸಿರುವ ಅಳಿಲು ಸೇವೆಯನ್ನು ಅವರೂ ಸಹ ಮರೆತಿಲ್ಲ ಎಂದು ಭಾವಿಸಿದ್ದೇನೆ’ ಎಂದು ಸುಧಾಕರ್‌ ಹೇಳಿದ್ದಾರೆ.

‘ಬೆಟ್ಟ ಅಗೆದು ಇಲಿ ಹುಡುಕುತ್ತಿದ್ದಾರೆ’

‘ಸರ್ಕಾರದ ವಿರುದ್ಧ ಆರೋಪ ಮಾಡಲೇಬೇಕು ಎನ್ನುವ ಹತಾಶೆಯಿಂದ ಆರೋಪ ಮಾಡಲು ಹೋಗಿ ಆರೋಪಿತರಾಗುವ ಸ್ಥಿತಿ ಕಾಂಗ್ರೆಸ್‌ ನಾಯಕರದ್ದಾಗಿದೆ. ನಿಮ್ಮ ಆಂತರಿಕ ಪೈಪೋಟಿಗಾಗಿ ಬೆಟ್ಟ ಅಗೆದು ಇಲಿ ಹುಡುಕಲು ಪ್ರಯತ್ನಿಸುವ ಬದಲು, ಸವಾಲಿನ ಕಾಲದಲ್ಲಿ ಸರ್ಕಾರಕ್ಕೆ ರಚನಾತ್ಮಕ ಸಲಹೆ ನೀಡಿದ, ಜನರ ಸಂಕಷ್ಟದಲ್ಲಿ ಭಾಗಿಯಾಗಲಿ’ ಎಂದು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಬಿಜೆಪಿ ನಾಯಕ ಎನ್‌.ಆರ್‌.ರಮೇಶ್‌ ಅವರು, ‘ಸಿದ್ದರಾಮಯ್ಯ ಅವರೇ 6,600 ಮಂದಿ ನಕಲಿ ಪೌರ ಕಾರ್ಮಿಕರ ಹೆಸರಿನಲ್ಲಿ ₹550 ಕೋಟಿ ಮತ್ತು ಪಿಎಫ್‌,ಇಎಸ್‌ಐ ಪಾವತಿ ಹೆಸರಿನಲ್ಲಿ ₹384 ಕೋಟಿ ಹಣ ವಂಚನೆಯ ಪ್ರಕರಣ ದಾಖಲೆ ಸಮೇತ ನಿಮಗೆ ದೂರು ಕೊಟ್ಟಾಗ, ಏಕೆ ಕ್ರಮ ತೆಗೆದುಕೊಳ್ಳಲಿಲ್ಲ’ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.