ADVERTISEMENT

ಕೊರೊನಾ ತಡೆಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು- ಡಿ.ಕೆ.ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2020, 14:54 IST
Last Updated 21 ಮಾರ್ಚ್ 2020, 14:54 IST
   

ಬೆಂಗಳೂರು: 'ಕೊರೊನಾ ಸೋಂಕು ತಡೆಗಟ್ಟಲು ಕೇಂದ್ರ- ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದರು.

ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, 'ಯಾವುದೇ ಯೋಜನೆಯಲ್ಲಿ ಕಡಿಮೆ ಮಾಡಿದರೂ ಸರಿಯೇ. ಪ್ರಸಕ್ತ ಸಾಲಿನ ಬಜೆಟ್ ಅಧಿವೇಶನದಲ್ಲಿಯೇ ಪ್ಯಾಕೇಜ್ ಪ್ರಕಟಿಸಬೇಕು' ಎಂದರು.

'ಕೊರೊನಾ ಹರಡದಂತೆ ಎಲ್ಲರೂ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ. ಪ್ರಧಾನಿಯವರ ಭಾಷಣಕ್ಕೆ ನಮ್ಮ‌ ಬೆಂಬಲವಿದೆ. ರೋಗ ನಿಯಂತ್ರಣಕ್ಕೆ ಅಗತ್ಯವಾದ ಸಹಕಾರ ನೀಡಲು ಪಕ್ಷ ಸಿದ್ದವಾಗಿದೆ. ಎಲ್ಲರೂ ಒಗ್ಗಟ್ಟಿನಿಂದ ಇದನ್ನು ಎದುರಿಸಬೇಕಿದೆ. ರಾಜ್ಯದ ಜನರು ಕೂಡಾ ಕೈಜೋಡಿಸಬೇಕಿದೆ' ಎಂದರು.

ADVERTISEMENT

'ಕೊರೊನಾ ಸೋಂಕಿನಿಂದ ಉಂಟಾಗುವ ನಷ್ಟದ ಬಗ್ಗೆ ರಾಷ್ಟ್ರ ವ್ಯಾಪಿ ಸಮೀಕ್ಷೆ ನಡೆಸಬೇಕು. ತಡವಾಗಿಯಾದರೂ ಸರ್ಕಾರ ಸರ್ವೆ ತಂಡ ರಚಿಸಬೇಕು' ಎಂದೂ ಆಗ್ರಹಿಸಿದರು.

'ರೈತರು ಬೆಳೆದ ಬೆಳೆ ನಷ್ಟವಾಗಿದೆ. ಕೋಳಿ, ಹೈನುಗಾರಿಕೆಗೆ ತೀವ್ರ ಹೊಡೆತ ಬಿದ್ದಿದೆ. ಬೀದಿಬದಿ ವ್ಯಾಪಾರ, ದೊಡ್ಡ ವ್ಯವಹಾರಕ್ಕೂ ಪೆಟ್ಟು ಬಿದ್ದಿದೆ. ಅವರ ನೆರವಿಗೂ ಸರ್ಕಾರ ಬರಬೇಕು.‌ ಈಗಾಗಲೇ ಬ್ಯಾಂಕ್, ಐ.ಟಿ, ಜಿಎಸ್ಟಿ ಒತ್ತಡ ಹೆಚ್ಚುತ್ತಿದೆ. ಸಾಲ, ತೆರಿಗೆ ಮರುಪಾವತಿಗೆ ಒತ್ತಾಯ ಹಾಕಲಾಗುತ್ತದೆ. ಈ ಬಗ್ಗೆ ಸರ್ಕಾರ ಗಮನಹರಿಸಬೇಕು' ಎಂದರು.

'ಸೋಂಕು ತಡೆಗೆ ಸರ್ಕಾರಿ ಆಸ್ಪತ್ರೆ ಮಾತ್ರ ನಂಬಿಕೊಂಡರೆ ಕಷ್ಟ. ಖಾಸಗಿ ಆಡಳಿತದ ಆಸ್ಪತ್ರೆಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ವೈದ್ಯರು, ಪ್ಯಾರಾ ಮೆಡಿಕಲ್ ಸಿಬ್ಬಂದಿಯನ್ನೂ ಬಳಸಿಕೊಳ್ಳಬೇಕು. ಉದ್ಯಮಿಗಳು, ಖಾಸಗಿ ಆಸ್ಪತ್ರೆ, ಸಂಘಟನೆಗಳು ಕೈಜೋಡಿಸಬೇಕು. ಸಮಾರೋಪಾದಿಯಲ್ಲಿ ಕೆಲಸ ನಡೆಯಬೇಕು ಎಂದರು.

'ಪಿಂಚಣಿ ಯೋಜನೆಗೆ ಯಾವುದೇ ತೊಂದರೆ ಆಗಬಾರದು. ದಿನನಿತ್ಯದ ಬಳಕೆ ವಸ್ತುಗಳು ಲಭ್ಯವಾಗಬೇಕು. ಕೆಲವು ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಕೆಲವು ವಸ್ತುಗಳ ಬೆಲೆ ಇಳಿಕೆಯಾಗುತ್ತಿದೆ. ಈ ಬಗ್ಗೆಯೂ ಸರ್ಕಾರ ಗಮನಹರಿಸಬೇಕು. ಜನಸಾಮಾನ್ಯರ ದೈನಂದಿನ ಜೀವನಕ್ಕೆ ತೊಂದರೆ ಆಗಬಾರದು. ಬ್ಯಾಂಕ್ ಸಾಲದ ಬಡ್ಡಿ ಕಟ್ಟಲು ಸಮಯಾವಕಾಶ ಮಾಡಿಕೊಡಬೇಕು' ಎಂದು ಮನವಿ ಮಾಡಿದರು.

'ಪಕ್ಷದ ಕಾರ್ಯಕರ್ತರು ಅಭಿನಂದನೆ ಸಲ್ಲಿಸಲು ಒಂದು ವಾರದವರೆಗೆ ಬರಬೇಡಿ.‌ ನೀವು ಇರುವಲ್ಲಿಯೇ ಇದ್ದರೆ ಉತ್ತಮ. ಹೀಗೆ ಮಾಡುವುದರಿಂದ ಸೋಂಕು ತಡೆಯಲು ನೆರವಾಗಬಹುದು' ಎಂದು ಬೆಂಬಲಿಗರಿಗೆ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.