ಬೆಳಗಾವಿ: ಕೊರೊನಾ ವೈರಾಣು ಹರಡುವ ಭೀತಿ ಹೆಚ್ಚುತ್ತಿರುವುದರಿಂದ ಇಲ್ಲಿನ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿರುವ ಕೆಲವು ಕೈದಿಗಳನ್ನು ಪೆರೋಲ್ (ರಜೆ) ಮೇಲೆ ಕಳುಹಿಸಲು ಯೋಜಿಸಲಾಗಿದೆ.
ಕೇಂದ್ರ ಕಚೇರಿಯ ನಿರ್ದೇಶನದ ಹಿನ್ನೆಲೆಯಲ್ಲಿ ಕಾರಾಗೃಹದಲ್ಲಿ ಈ ಕುರಿತು ಪ್ರಕ್ರಿಯೆಗಳು ಆರಂಭವಾಗಿವೆ. ಜಾಮೀನು ಪಡೆಯಲು ಅರ್ಹವಿರುವ ಮತ್ತು ಪೆರೋಲ್ ಮೇಲೆ ಕಳುಹಿಸಬಹುದಾದ ಕೈದಿಗಳ ಪಟ್ಟಿ ತಯಾರಿಸಲಾಗಿದೆ. ರಾಜ್ಯದ ದೊಡ್ಡ ಕಾರಾಗೃಹಗಳಲ್ಲಿ ಈ ಕಾರಾಗೃಹ ಕೂಡ ಒಂದಾಗಿದೆ. ಪ್ರಸ್ತುತ ಸಾವಿರಕ್ಕೂ ಹೆಚ್ಚಿನ ಕೈದಿಗಳು ಇಲ್ಲಿದ್ದಾರೆ. ಇವರಲ್ಲಿ 100ರಿಂದ 200 ಮಂದಿ ಕೈದಿಗಳನ್ನು ಜಾಮೀನು ಅಥವಾ ಪೆರೋಲ್ ಮೇಲೆ ಕಳುಹಿಸಲು ಉದ್ದೇಶಿಸಲಾಗಿದೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ವಿಚಾರಣಾಧೀನ ಕೈದಿಗಳನ್ನು ಜಾಮೀನು ನೀಡಿ ಕಳುಹಿಸುವುದು ಮತ್ತು 7 ವರ್ಷಗಳಿಗಿಂತ ಮೇಲ್ಪಟ್ಟು ಹಾಗೂ 14 ವರ್ಷಗಳಿಗಿಂತ ಕಡಿಮೆ ಶಿಕ್ಷೆಗೆ ಒಳಪಟ್ಟಿರುವ ಕೈದಿಗಳಿಗೆ ಪೆರೋಲ್ ನೀಡಲು ಯೋಜಿಸಲಾಗಿದೆ. ಹೈಕೋರ್ಟ್ ನಿರ್ದೇಶನದಂತೆ ಕ್ರಮ ವಹಿಸಲಾಗುತ್ತಿದೆ. ಸನ್ನಡತೆ ಆಧಾರದ ಮೇಲೆ ಬಿಡುಗಡೆಗೆ ಅರ್ಹವಿರುವವರು, 60 ವರ್ಷ ವಯಸ್ಸು ಮೇಲ್ಪಟ್ಟವರು ಹಾಗೂ ಗಂಭೀರ ಸ್ವರೂಪದ ಕಾಯಿಲೆ ಇರುವವರ ಪಟ್ಟಿಯನ್ನೂ ಸಿದ್ಧಪಡಿಸಲಾಗಿದೆ. ಯಾರಾರನ್ನು ಹೊರಕಳುಹಿಸಬೇಕು ಎನ್ನುವ ಕುರಿತು ಸಮಾಲೋಚನೆ ನಡೆಸುವುದಕ್ಕಾಗಿ ಮಾರ್ಚ್ 30ರಂದು ಉನ್ನತಮಟ್ಟದ ಸಮಿತಿ ಸಭೆ ಕರೆಯಲಾಗಿದ್ದು, ಅಲ್ಲಿ ಸ್ಪಷ್ಟ ನಿರ್ಧಾರ ಹೊರಬೀಳುವ ನಿರೀಕ್ಷೆ ಇದೆ ಎಂದು ತಿಳಿದುಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿದ ಕಾರಾಗೃಹದ ಸೂಪರಿಂಟೆಂಡೆಂಟ್ ಕೃಷ್ಣಕುಮಾರ್, ‘ಜಾಮೀನಿಗೆ ಪರಿಗಣಿಸಬಹುದಾದವರು, ಪೆರೋಲ್ ಮೇಲೆ ಕಳುಹಿಸಬಹುದಾದವರ ಪಟ್ಟಿಯನ್ನು ಕೇಂದ್ರ ಕಚೇರಿ ಸೂಚನೆ ಮೇರೆಗೆ ನೀಡಲಾಗಿದೆ. ಸರ್ಕಾರದ ಸೂಚನೆ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
‘ಕೈದಿಗಳಲ್ಲಿ ಕೊರೊನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಎಲ್ಲರಿಗೂ ಮಾಸ್ಕ್‌ಗಳನ್ನು ಒದಗಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ. ಮುಖ್ಯದ್ವಾರದಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.